ಓಮಿಕ್ರಾನ್: 4 ದಿನಗಳಲ್ಲಿ ಕೊರೊನಾ ಪ್ರಕರಣಗಳು 2.5 ಪಟ್ಟು ಹೆಚ್ಚಳ
ನವದೆಹಲಿ, ಜನವರಿ 01: ಭಾರತದಲ್ಲಿ ಕಳೆದ 4 ದಿನಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 2.5 ಪಟ್ಟು ಹೆಚ್ಚಾಗಿದೆ. ಹಾಗೆಯೇ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಶುಕ್ರವಾರ ದೇಶದಲ್ಲಿ ಹೊಸದಾಗಿ 16764 ಪ್ರಕರಣಗಳು ಪತ್ತೆಯಾಗಿದ್ದವು, ಮಂಗಳವಾರ 6358 ಪ್ರಕರಣಗಳು, ಬುಧವಾರ 9195 ಪ್ರಕರಣಗಳು, ಗುರುವಾರ 13154 ಪ್ರಕರಣಗಳು ಪತ್ತೆಯಾಗಿದ್ದವು.
ಡಿಸೆಂಬರ್ 15ರಂದು 6984 ಪ್ರಕರಣಗಳು, ಡಿಸೆಂಬರ್ 20ರಂದು 6563 ಪ್ರಕರಣಗಳು, ಡಿಸೆಂಬರ್ 25 ರಂದು 7189 ಪ್ರಕರಣಗಳು ಪತ್ತೆಯಾಗಿದ್ದವು.
ಡಿಸೆಂಬರ್ 18ರ ಬಳಿಕ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಮೊದಲ ಓಮಿಕ್ರಾನ್ ಪ್ರಕರಣ ಡಿಸೆಂಬರ್ 2ರಂದು ದೇಶದಲ್ಲಿ ಪತ್ತೆಯಾಗಿತ್ತು. 100ರ ಗಡಿ ತಲುಪಲು 15 ದಿನಗಳನ್ನು ತೆಗೆದುಕೊಂಡಿತ್ತು. ಬಳಿಕ ಇನ್ನೂರರ ಗಡಿಯನ್ನು ಬಹುಬೇಗ ತಲುಪಿತು. ದೇಶದಲ್ಲಿ ಒಟ್ಟು 12760 ಓಮಿಕ್ರಾನ್ ಪ್ರಕರಣಗಳಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಓಮಿಕ್ರಾನ್ ಕುರಿತು ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಲಸಿಕೆ ಪಡೆಯದೇ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಓಮಿಕ್ರಾನ್ ಸೋಂಕು ತಗುಲಿದರೆ ರೋಗದ ತೀವ್ರತೆ ಕಡಿಮೆ ಇರಬಹುದು, ಆದರೆ ಬೃಹತ್ ಸಂಖ್ಯೆಯಲ್ಲಿನ ಸಣ್ಣ ಪ್ರಮಾಣವೂ ಸಹ ಆರೋಗ್ಯ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಬಹುದು ಎಂದು ಸೌಮ್ಯ ಸ್ವಾಮಿನಾಥನ್ ಎಚ್ಚರಿಸಿದ್ದಾರೆ.
ಸಿಎನ್ ಬಿಸಿ-ಟಿವಿ 18 ಗೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದು, ಭಾರತೀಯರು ಓಮಿಕ್ರಾನ್ ಎದುರಿಸುವುದಕ್ಕೆ ಸಜ್ಜುಗೊಳ್ಳಬೇಕಾಗುತ್ತದೆ, ಆದರೆ ಆತಂಕ ಪಡಬಾರದು ಎಂದು ಹೇಳಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 309 ಹೊಸ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,270ಕ್ಕೆ ಏರಿಕೆಯಾಗಿದೆ. ಈ ಪೈಕಿ 374 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಮಿಕ್ರಾನ್ ಸೋಂಕಿತರಿದ್ದಾರೆ. ದೆಹಲಿ ಎರಡನೇ ಸ್ಥಾನದಲ್ಲಿದೆ. ಓಮಿಕ್ರಾನ್ ಹೆಚ್ಚಳದಿಂದ ಆಸ್ಪತ್ರೆಯಗಳಿಂದ ಹೊರರೋಗಿಗಳ ವಿಭಾಗದ ಮೇಲೆ ಹೆಚ್ಚು ಒತ್ತಡ ಉಂಟಾಗಲಿದ್ದು, ಐಸಿಯುಗಳಿಂದ ಹೊರತುಪಡಿಸಿ ಮನೆಯಲ್ಲೇ ಹೆಚ್ಚು ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಡಾ. ಸ್ವಾಮಿನಾಥನ್ ತಿಳಿಸಿದ್ದಾರೆ. ಓಮಿಕ್ರಾನ್ ತಡೆಗೆ ಟೆಲಿ ಕನ್ಸಲ್ಟೇಷನ್ ಗಳನ್ನು ಹೆಚ್ಚಿಸುವುದಕ್ಕೆ ಸ್ವಾಮಿನಾಥನ್ ಕರೆ ನೀಡಿದ್ದಾರೆ.
ಓಮಿಕ್ರಾನ್ ಲಕ್ಷಣಗಳು
ಅತಿಯಾದ ಗಂಟಲು ನೋವು
ಕೆಲವರಿಗೆ ಹವಾಮಾನದ ಬದಲಾವಣೆ, ಅಹಾರದಲ್ಲಿ ವ್ಯತ್ಯಾಸವಾದರೂ ಗಂಟಲು ನೋವು ಕಾಣಿಸಕೊಳ್ಳುತ್ತದೆ. ಆದರೆ ನೆನಪಿಡಿ ಅತಿಯಾದ ಗಂಟಲು ನೋವು ಕೂಡ ಓಮಿಕ್ರಾನ್ ಸೋಂಕಿನ ಒಂದು ಲಕ್ಷಣವಾಗಿದೆ. ಹೀಗಾಗಿ ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಬಿಸಿ ನೀರಿನಿಂದ ಗಂಟಲು ಸ್ವಚ್ಛಗೊಳಿಸಿ.
ತಲೆನೋವು
ತಲೆನೋವು ಹಲವು ಕಾರಣಗಳಿಗೆ ಬರುತ್ತದೆ. ಅದೇ ರೀತಿ ಓಮಿಕ್ರಾನ್ ಸೋಂಕಿನ ಲಕ್ಷಣವೂ ಹೌದು . ಆದ್ದರಿಂದ ತೆಲೆನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರವಹಿಸಿರಿ.
ಸ್ನಾಯುಗಳಲ್ಲಿ ನೋವು
ನಿಮಗೆ ಸ್ನಾಯುಗಳಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದರೆಡೆಗೆ ಹೆಚ್ಚು ಗಮನ ನೀಡಿ. ಚಳಿಗಾಲದಲ್ಲಿ ಸ್ನಾಯು, ಕೀಲು ನೋವು ಸಹಜ. ಆದರೆ ಓಮಿಕ್ರಾನ್ ಕೂಡ ಅದೇ ಲಕ್ಷಣವನ್ನು ಹೊಂದಿದೆ. ಅಲ್ಲದೆ ಕೋರೋನಾ ಸೋಂಕಿನ ಲಕ್ಷಣವೂ ಆಗಿದೆ. ಕೊರೋನಾ ಸೋಂಕಿತರಲ್ಲಿ ಚೇತರಿಕೆಯ ಬಳಿಕವೂ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ.
ಕೆಮ್ಮು
ಸಾಮಾನ್ಯವಾಗಿ ದೇಹದಲ್ಲಿ ಕಫ ಶೇಖರೆಗೊಂಡು ಕೆಮ್ಮು ಕಾಣಿಸಿಕೊಳ್ಳುತ್ತದೆ. ಅವರನ್ನು ಪರೀಕ್ಷಿಸಿದಾಗ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಹೀಗಾಗಿ, ಕೆಮ್ಮು ಕೂಡ ಓಮಿಕ್ರಾನಿನ ಮೊದಲ ಲಕ್ಷಣವಾಗಿದೆ. ಆದ್ದರಿಂದ ಈ ನಿಮಗೆ 2 ದಿನಕ್ಕಿಂತ ಹೆಚ್ಚು ಕೆಮ್ಮು ಮುಂದುವರೆದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎನ್ನುತ್ತಾರೆ ತಜ್ಞರು.
ಮೂಗಿನಲ್ಲಿ ಸೋರುವಿಕೆ
ಉಸಿರು ಕಟ್ಟುವುದು ಅಥವಾ ನಿರಂತರವಾಗಿ ಮೂಗಿನಲ್ಲಿ ಸೋರಿಕೆಯಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಯುಕೆಯ ಒಂದು ಅಧ್ಯಯನದ ಪ್ರಕಾರ ಶೀತ, ತಲೆನೋವು, ದಣಿವು ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ಓಮಿಕ್ರಾನ್ ಸೋಂಕು ದೃಢಪಡುತ್ತಿದೆ. ಈಗಂತೂ ಚಳಿಗಾಲ ಶೀತದಿಂದ ಬಳಲುವವರ ಸಂಖ್ಯೆಯೇ ಹೆಚ್ಚು. ಹೀಗಾಗಿ ನಿಮ್ಮನ್ನು ನೀವು ಬೆಚ್ಚಗಿರಿಸಿಕೊಳ್ಳಿ.
ಆಯಾಸ
ಸಾಮಾನ್ಯವಾಗಿ ಶೀತ, ನೆಗಡಿಯಾದರೆ ಆಯಾಸ ಸಾಮಾನ್ಯ. ಆದರೆ ಓಮಿಕ್ರಾನ್ ಲಕ್ಷಣವಾಗಿದ್ದರೆ ನಿಮಗೆ ಅತಿಯಾದ ಸುಸ್ತು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಒಳಿತು. ಮತ್ತು ಸರಿಯಾದ ಸಮಯ ಕೂಡ ಹೌದು.












Click it and Unblock the Notifications