ತಾಲಿಬಾನಿಗಳು ಉಗ್ರರು ಎಂದಮೇಲೆ ಯಾಕೆ ಮಾತನಾಡಬೇಕು: ಒಮರ್ ಅಬ್ದುಲ್ಲಾ
ತಾಲಿಬಾನಿಗಳು ಉಗ್ರರು ಎಂದ ಮೇಲೆ ಯಾಕೆ ಮಾತನಾಡಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಅಫ್ಘಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳ ಉನ್ನತ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಝೈರೊಂದಿಗೆ, ಕತಾರ್‌ನಲ್ಲಿರುವ ಭಾರತ ರಾಯಭಾರಿ ದೀಪಕ್ ಮಿತ್ತಲ್ ದೋಹಾದಲ್ಲಿ ಸಭೆ ನಡೆಸಿದ್ದರು.
ಈ ಕುರಿತು ಮಾತನಾಡಿರುವ ಒಮರ್, ತಾಲಿಬಾನಿಗಳು ಉಗ್ರರು ಎಂದು ಹೇಳುತ್ತಾ ಅವರ ಬಳಿ ಮಾತನಾಡುವ ಅಗತ್ಯವೇನಿದೆ ಎಂದು ಕೇಳಿದ್ದಾರೆ.

ಶೇರ್ ಮೊಹಮ್ಮದ್ ಅಬ್ಬಾಸ್, ದೋಹಾದಲ್ಲಿರುವ ತಾಲಿಬಾನಿ ರಾಜಕೀಯ ಕಚೇರಿ ಮುಖ್ಯಸ್ಥರೂ ಹೌದು. ಆದರೆ ನಿನ್ನೆ ತಾಲಿಬಾನಿಗಳೊಂದಿಗೆ ಭಾರತದ ರಾಯಭಾರಿ ನಡೆಸಿದ ಸಭೆಯ ಬಗ್ಗೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನೆ ಎತ್ತಿದ್ದಾರೆ.
ಇದೇ ವೇಳೆ ದೀಪಕ್ ಮಿತ್ತಲ್, ಅಫ್ಘಾನ್ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಯಬಹುದೇ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಉತ್ತರಿಸಿದ ತಾಲಿಬಾನ್ ಮುಖಂಡ, ಅಂಥ ಬೆದರಿಕೆ ಒಡ್ಡುವುದಿಲ್ಲ. ಎಲ್ಲ ಸಮಸ್ಯೆಗಳನ್ನೂ ಧನಾತ್ಮಕವಾಗಿಯೇ ಪರಿಹರಿಸಿಕೊಳ್ಳೋಣ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ತಾಲಿಬಾನ್ ಉಗ್ರಸಂಘಟನೆ ಹೌದೋ..ಅಲ್ಲವೋ ಎಂಬುದನ್ನು ಮೊದಲು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಅವರು ಭಯೋತ್ಪಾದಕರು ಹೌದು ಎಂದಾದ ಮೇಲೆ ಅವರ ಬಳಿ ಮಾತನಾಡುವುದು ಏನಿರುತ್ತದೆ? ಹಾಗೊಮ್ಮೆ ತಾಲಿಬಾನಿಗಳು ಭಯೋತ್ಪಾದಕರಲ್ಲ ಎಂದರೆ ನೀವು ವಿಶ್ವಸಂಸ್ಥೆಗೆ ಹೋಗಿ, ಅಲ್ಲಿ ಉಗ್ರಸಂಘಟನೆ ಪಟ್ಟಿಯಿಂದ ತಾಲಿಬಾನ್ನ್ನು ರದ್ದುಗೊಳಿಸುತ್ತೀರಾ? ನಿಮ್ಮ ಮನಸಿಗೆ ಮೊದಲು ಸ್ಪಷ್ಟನೆ ಕೊಟ್ಟುಕೊಳ್ಳಿ ಎಂದು ಒಮರ್ ಅಬ್ದುಲ್ಲಾ ಕೇಂದ್ರಕ್ಕೆ ಹೇಳಿದ್ದಾರೆ.
ತಾಲಿಬಾನ್ ಒಂದು ಭಯೋತ್ಪಾದಕ ಸಂಘಟನೆ ಎಂದಾದ ಮೇಲೆ, ಅವರ ಬಳಿ ಯಾಕೆ ಮಾತನಾಡಬೇಕು? ಮಾತನಾಡುವುದು ಏನಿರುತ್ತದೆ ಎಂದು ಕೇಳಿದ್ದಾರೆ.
ನಿನ್ನೆ ಕತಾರ್ನ ದೋಹಾದಲ್ಲಿ ನಡೆದ ಭಾರತ ರಾಯಭಾರಿ ಮತ್ತು ತಾಲಿಬಾನ್ ಮುಖಂಡ ನಡುವಿನ ಸಭೆಯಲ್ಲಿ ಸುರಕ್ಷತೆ, ಭದ್ರತೆ ಮತ್ತು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ. ಅದರೊಂದಿಗೆ ಭಾರತಕ್ಕೆ ಬರಲು ಇಚ್ಛಿಸುತ್ತಿರುವ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.
ನಮ್ಮ ವಿರುದ್ಧ ಭಯೋತ್ಪಾದನೆಗೆ ಅವಕಾಶ ಕೊಡಬೇಡಿ ಎಂದು ತಾಲಿಬಾನ್‌ಗೆ ಭಾರತ ತಾಕೀತು ಮಾಡಿದೆ. ಕತಾರ್‌ನಲ್ಲಿರುವ ಭಾರತದ ರಾಯಭಾರಿ ಮಂಗಳವಾರ ತಾಲಿಬಾನ್‌ನ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ತಾಲಿಬಾನ್ ಉಗ್ರ ಸಂಘಟನೆಯು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ನಡೆದ ಮೊದಲ ಔಪಚಾರಿಕ ಮಾತುಕತೆ ಇದಾಗಿದೆ.
ಭಾರತ ವಿರೋಧಿ ಉಗ್ರಗಾಮಿಗಳು ಅಫ್ಘಾನಿಸ್ತಾನದ ನೆಲವನ್ನು ಬಳಸಿ ದಾಳಿ ನಡೆಸಬಹುದು ಎಂಬ ಆತಂಕವನ್ನು ಮಿತ್ತಲ್ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನ ನೆಲದ ಮೂಲಕ ಭಾರತೀಯ ವಿರೋಧಿ ಚಟುವಟಿಕೆಗಳು ಮತ್ತು ಭಯೋತ್ಪಾದನೆಗೆ ಯಾವುದೇ ರೀತಿಯಲ್ಲೂ ಬಳಸಲು ಅವಕಾಶ ನೀಡಬಾರದು ಎಂದು ಮಿತ್ತಲ್ ಹೇಳಿದ್ದಾರೆ.
ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು, ತಾಲಿಬಾನ್‌ನ ಕೋರಿಕೆಯ ಮೇರೆಗೆ ದೋಹಾದಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್ ಅವರನ್ನು ಭೇಟಿಯಾಗಿದ್ದಾರೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ನಿಕಟ ಸಂಬಂಧ ಹೊಂದಿರುವ ಕಾರಣ ಭಾರತವು ತಾಲಿಬಾನ್ ಬಗ್ಗೆ ಬಹಳ ಹಿಂದಿನಿಂದಲೂ ಆತಂಕ ಹೊಂದಿದೆ.
ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮಾತುಕತೆ ನಡೆದಿದ್ದು, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ಮತ್ತು ಆದಷ್ಟು ಬೇಗ ವಾಪಸಾತಿ ಬಗ್ಗೆ ಚರ್ಚಿಸಲಾಗಿದೆ. ಜತೆಗೆ ಅಲ್ಪಸಂಖ್ಯಾತರು ಸೇರಿದಂತೆ ಭಾರತಕ್ಕೆ ತೆರಳಲು ಇಚ್ಛಿಸುವವರ ಬಗ್ಗೆಯೂ ಚರ್ಚೆ ನಡೆದಿದೆ.












Click it and Unblock the Notifications