Jammu & Kashmir: ಜಮ್ಮು ಮತ್ತು ಕಾಶ್ಮೀರ ಸಿಎಂ ಆಗಿ ಒಮರ್ ಅಬ್ದುಲ್ಲಾ ಆಯ್ಕೆ
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಸರ್ಕಾರ ರಚನೆ ಪ್ರಕ್ರಿಯೆ ಶುರುವಾಗಿದೆ. ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ನ್ಯಾಷನಲ್ ಕಾಂಗ್ರೆಸ್‌ಗೆ ಪಕ್ಷೇತರ ಶಾಸಕರು ಬೆಂಬಲ ಕೊಟ್ಟಿದ್ದು ಸರಳ ಬಹುಮತ ಸಿಕ್ಕಿದೆ. ಗುರುವಾರ ನಡೆದ ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮರ್ ಅಬ್ದುಲ್ಲಾ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅಂಗೀಕರಿಸಿದೆ.
ಇಂದು ನವೈ ಸುಬಾಹ್ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ನಾಯಕರಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಹೊಸದಾಗಿ ಆಯ್ಕೆಯಾದ ಎಲ್ಲಾ ಶಾಸಕರು ಉಪಸ್ಥಿತರಿದ್ದರು. ಸಭೆಯಲ್ಲಿ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಶುಕ್ರವಾರ ಕಾಂಗ್ರೆಸ್-ಎನ್‌ಸಿ ಸಮ್ಮಿಶ್ರ ಪಕ್ಷಗಳು ಮತ್ತೆ ಸಭೆ ಸೇರಲಿದ್ದು, ಸಚಿವ ಸ್ಥಾನಗಳ ಹಂಚಿಕೆ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ.

ಶಾಸಕಾಂಗ ಸಭೆಗೆ ಮುನ್ನ ಎನ್‌ಸಿ ಮುಖಂಡರು ಮಾಧ್ಯಮಗಳ ಜೊತೆ ಮಾತನಾಡಿದರು. ಪಕ್ಷದ ನಾಯಕ ತನ್ವೀರ್ ಸಾದಿಕ್ ಮಾತನಾಡಿ, ನಾವು ಕೊಟ್ಟಿರುವ ಭರವಸೆಗಳನ್ನು ಉಳಿಸಿಕೊಳ್ಳುತ್ತೇವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಬಲಿಷ್ಠ ನಾಯಕರ ಅಗತ್ಯವಿದೆ, ಒಮರ್ ಅಬ್ದುಲ್ಲಾ ಅವರಿಗಿಂತ ಉತ್ತಮ ನಾಯಕ ಯಾರಿದ್ದಾರೆ ಎಂದ ಅವರು, ಸರ್ಕಾರ ರಚನೆಯಾದ ತಕ್ಷಣವೇ 370ನೇ ವಿಧಿಯನ್ನು ಮರುಸ್ಥಾಪಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ.
ಫಾರೂಕ್ ಅಹ್ಮದ್ ಶಾ ಮಾತನಾಡಿ, ಜನರು ಎನ್‌ಸಿ ಮೇಲೆ ವಿಶ್ವಾಸ ತೋರಿಸಿದ್ದಾರೆ. ನಮ್ಮ ನಾಯಕರ ಸಲಹೆಗಳಿಗೆ ಬದ್ಧರಾಗಿರುತ್ತೇವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಬಲವಾದ ಮತ್ತು ಪರಿಣಾಮಕಾರಿ ಸರ್ಕಾರದ ಅಗತ್ಯವಿದೆ. 2019 ರ ಆಗಸ್ಟ್‌ನಲ್ಲಿ ಕಿತ್ತುಕೊಂಡಿರುವ ಆರ್ಟಿಕಲ್ 370 ಮತ್ತು ಹಕ್ಕುಗಳ ಮರುಸ್ಥಾಪನೆಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಜಾವೇದ್ ಅಹ್ಮದ್ ಬೇಗ್ ಮಾತನಾಡಿ, ಜನರು ಎನ್‌ಸಿಯಲ್ಲಿ ವಿಶ್ವಾಸವನ್ನು ತೋರಿಸಿರುವುದರಿಂದ, ನಮ್ಮ ಯುವಕರಿಗೆ ಉದ್ಯೋಗ ನೀಡಲು ಕೆಲಸ ಮಾಡುತ್ತೇವೆ. ಆರ್ಟಿಕಲ್ 370 ರದ್ದತಿಯ ನಂತರ ಬಗೆಹರಿಸಲಾಗದ ಸಮಸ್ಯೆಗಳನ್ನು ಬಗೆಹರಿಸಲು ಕೂಡ ಶ್ರಮಿಸುತ್ತೇವೆ ಎಂದರು.
ಜನರು ಬಿಜೆಪಿ ವಿರುದ್ಧ ಮತ ಚಲಾಯಿಸುವ ಮೂಲಕ 370ನೇ ವಿಧಿ ರದ್ದು ಮಾಡಿದ್ದ ಕ್ರಮವನ್ನು ವಿರೋಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯನ್ನು ಬಿಜೆಪಿ ನಿರ್ಲಕ್ಷಿಸಿದ್ದು, ಜನ ಅವರಿಗೆ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ ಎಂದು ಜಾವೇದ್ ಅಹ್ಮದ್ ಹೇಳಿದರು.
ಚುನಾವಣೆಗೂ ಮೊದಲು ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಸದ್ಯದ ಲೆಕ್ಕಾಚಾರದ ಪ್ರಕಾರ ಎನ್‌ಸಿ ಕಾಂಗ್ರೆಸ್‌ನ ಸಹಾಯವಿಲ್ಲದೇ ಕೂಡ ಸರ್ಕಾರ ರಚಿಸುವ ಸಾಮರ್ಥ್ಯ ಹೊಂದಿದೆ. ಆದರೂ ಕಾಂಗ್ರೆಸ್ ಜೊತೆ ಮಾತುಕತೆಗೆ ಎನ್‌ಸಿ ಸಜ್ಜಾಗಿದ್ದು, ಕೆಲವು ಸಚಿವ ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆ ಇದೆ.












Click it and Unblock the Notifications