ಒಡಿಶಾ ರೈಲು ಅಪಘಾತ: ಬಿಹಾರದ 19 ಪ್ರಯಾಣಿಕರು ನಾಪತ್ತೆ, 50 ಸಾವು ಮಾಹಿತಿ ನೀಡಿದ ಡಿಎಂಡಿ
ಪಾಟ್ನಾ, ಜೂನ್. 08: ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ ನಂತರ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಬಿಹಾರದ ಕನಿಷ್ಠ 19 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ಮಾಹಿತ ನೀಡಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ನಾಪತ್ತೆಯಾದ 19 ಬಿಹಾರ ಪ್ರಯಾಣಿಕರಲ್ಲಿ ಮಧುಬನಿ ಜಿಲ್ಲೆಯ ನಾಲ್ವರು, ದರ್ಭಾಂಗಾ (2), ಮುಜಾಫರ್‌ಪುರ (2), ಪೂರ್ವ ಚಂಪಾರಣ್ (2), ಸಮಸ್ತಿಪುರ್ (2), ಸಿತಾಮರ್ಹಿ (1), ಪಾಟ್ನಾ (1), ಗಯಾ (1), ಪೂರ್ಣಿಯಾ (1), ಶೇಖ್‌ಪುರ (1), ಸಿವಾನ್ (1) ಮತ್ತು ಬೇಗುಸರಾಯ್ ಜಿಲ್ಲೆಯ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆ ತಿಳಿಸಿದೆ.

"ಒಡಿಶಾ ರೈಲು ಅಪಘಾತದಲ್ಲಿ ಬಿಹಾರದ ವಿವಿಧ ಜಿಲ್ಲೆಗಳಿಂದ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು 43 ಮಂದಿ ಗಾಯಗೊಂಡಿದ್ದಾರೆ" ಎಂದು ಬುಧವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಬಿಹಾರದ 50 ಜನರಲ್ಲಿ ಒಂಬತ್ತು ಮಂದಿ ಮುಜಾಫರ್‌ಪುರ ಜಿಲ್ಲೆಯವರು, ಮಧುಬನಿ (6), ಭಾಗಲ್‌ಪುರ (7), ಪೂರ್ವ ಚಂಪಾರಣ್ (5), ಪೂರ್ಣಿಯಾ (2), ಪಶ್ಚಿಮ ಚಂಪಾರಣ್ (3), ನಾವಡಾ (2) , ದರ್ಬಂಗಾ (2), ಜಮುಯಿ (2), ಸಮಸ್ತಿಪುರ್ (3), ಬಂಕಾ (1), ಬೆವ್ಗುಯಿಸಾರೈ (1), ಗಯಾ (1), ಖಗರಿಯಾ (3), ಶರ್ಷಾ (1), ಸಿತಾಮರ್ಹಿ (1) ಮತ್ತು ಮುಂಗೇರ್ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದಾರೆ.
ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಅಪರಿಚಿತ ಪ್ರಯಾಣಿಕರ ಶವಗಳ ಗುರುತನ್ನು ಖಚಿತಪಡಿಸಿಕೊಳ್ಳಲು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ಅಧಿಕಾರಿಗಳ ತಂಡವು ಒಡಿಶಾ ಸರ್ಕಾರದ ಸಂಬಂಧಿಸಿದ ಅಧಿಕಾರಿಗಳಿಗೆ ಎಲ್ಲಾ ನೆರವು ನೀಡುತ್ತಿದೆ. ಬಿಹಾರದಿಂದ ಕನಿಷ್ಠ 12 ಜನರ ಡಿಎನ್‌ಎ ಮಾದರಿಗಳನ್ನು ಬುಧವಾರ ತೆಗೆದುಕೊಳ್ಳಲಾಗಿದ್ದು, ಅದನ್ನು ಗುರುತಿಸಲಾಗದ ಮೃತದೇಹಗಳ ಮಾದರಿಗಳೊಂದಿಗೆ ಹೊಂದಾಣಿಕೆ ಮಾಡಲಾಗುತ್ತದೆ.

ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಬಿಹಾರದ ಕನಿಷ್ಠ 19 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ರಾಜ್ಯದಿಂದ ಬಂದಿರುವ ರೈಲು ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲು ಬಿಹಾರ ಸರ್ಕಾರ ಈಗಾಗಲೇ ಅಧಿಕಾರಿಗಳ ತಂಡವನ್ನು ಬಾಲಸೋರ್‌ಗೆ ಕಳುಹಿಸಿದೆ. ಅಧಿಕಾರಿಗಳು ಒಡಿಶಾ ಸರ್ಕಾರ, ರೈಲ್ವೆ ಮತ್ತು ಬಾಲಸೋರ್ ಜಿಲ್ಲಾಡಳಿತದೊಂದಿಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಿಹಾರದಿಂದ ಬಂದ ರೈಲು ಪ್ರಯಾಣಿಕರಿಗೆ ಅಗತ್ಯ ಸಹಾಯವನ್ನು ಒದಗಿಸುತ್ತಿದ್ದಾರೆ. ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದ ಸ್ಥಳದಿಂದ ಸಂತ್ರಸ್ತ ಪ್ರಯಾಣಿಕರನ್ನು ಬಿಹಾರಕ್ಕೆ ಕರೆತರಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದುವರೆಗೆ ಬಿಹಾರದ 88 ಪ್ರಯಾಣಿಕರನ್ನು ಬಸ್ ಮೂಲಕ ರಾಜ್ಯಕ್ಕೆ ಕರೆತರಲಾಗಿದೆ ಎಂದು ಡಿಎಂಡಿ ಹೇಳಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್ ಜೂನ್ 2 ರಂದು ಸಂಜೆ 7 ಗಂಟೆಗೆ ಅದರ ಬೋಗಿಗಳು ಹಳಿತಪ್ಪಿ ನಿಂತಿದ್ದ ಗೂಡ್ಸ್ ರೈಲಿಗೆ ಅಪ್ಪಳಿಸಿತು. ಅವುಗಳಲ್ಲಿ ಕೆಲವು ಬೋಗಿಗಳು ಅದೇ ಸಮಯದಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಕೋಚ್‌ಗಳ ಮೇಲೆ ಉರುಳಿದವು. ಒಟ್ಟಾರೆಯಾಗಿ, ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದು, 1,200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.












Click it and Unblock the Notifications