Breaking; ಸೆರಂನ 12-17 ಕೋವ್ಯಾಕ್ಸ್ ಲಸಿಕೆಗೆ ಎನ್‌ಟಿಎಜಿಐ ಅನುಮತಿ
ನವದೆಹಲಿ, ಏಪ್ರಿಲ್ 29 ; ಸೆರಂ ಇನ್ಸ್ಟಿಟ್ಯೂಟ್‌ನ ಕೋವ್ಯಾಕ್ಸ್ ಕೋವಿಡ್-19 ಲಸಿಕೆ ನೀಡಲು ಎನ್‌ಟಿಎಜಿಐ ಒಪ್ಪಿಗೆ ನೀಡಿದೆ. 12 ರಿಂದ 17 ವಯೋಮಿತಿಯವರಿಗೆ ಈ ಲಸಿಕೆ ನೀಡಲಾಗುತ್ತದೆ.
ಶುಕ್ರವಾರ ಪ್ರತಿ ರಕ್ಷಣೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) 12-17 ವಯೋಮಿತಿಯ ಮಕ್ಕಳಿಗೆ ನೀಡುವ ಕೋವ್ಯಾಕ್ಸ್ ಕೋವಿಡ್-19 ಲಸಿಕೆ ನೀಡಲು ಒಪ್ಪಿಗೆ ನೀಡಿದೆ ಎಂದು ಎಎನ್‌ಐ ವರದಿ ಮಾಡಿದೆ.
ಮಂಗಳವಾರ ಕೇಂದ್ರ ಸರ್ಕಾರ ಎನ್‌ಟಿಎಜಿಐ ಒಪ್ಪಿಗೆ ಬಳಿಕ ಮಕ್ಕಳಿಗೆ ಲಸಿಕೆ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿತ್ತು. ಮುಖ್ಯಮಂತ್ರಿಗಳ ಜೊತೆ ಕೋವಿಡ್ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಲಸಿಕೆ ನೀಡಲು ಆದ್ಯತೆ ನೀಡಬೇಕು ಎಂದು ಹೇಳಿದ್ದರು.

ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲು ವಿಶೇಷ ಅಭಿಯಾನ ಆರಂಭಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದರು. ಪ್ರಧಾನಿ ಸಭೆಯ ಬಳಿಕ ಶುಕ್ರವಾರ ಎನ್‌ಟಿಎಜಿಐ ಮಕ್ಕಳ ಲಸಿಕೆ ಬಳಕೆಗೆ ಒಪ್ಪಿಗೆ ನೀಡಿದೆ.
ಮಂಗಳವಾರ ಡಿಸಿಜಿಐ ಮೂರು ಕೋವಿಡ್ 19 ಲಸಿಕೆಗಳ ತುರ್ತು ಬಳಕೆಗೆ ಒಪ್ಪಿಗೆ ನೀಡಿತ್ತು. ಇದರಲ್ಲಿ 12ಕ್ಕಿಂತ ಅಧಿಕ, 6-12 ಮತ್ತು 5-12ನೇ ವರ್ಷದ ಮಕ್ಕಳಿಗೆ ನೀಡುವ ಲಸಿಕೆಗಳು ಇದ್ದವು.
ತಾಂತ್ರಿಕ ಸಲಹಾ ಸಮಿತಿಯ ಜೊತೆ ಮಾತುಕತೆ ನಡೆಸಿದ ಬಳಿಕ 5-12 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದರು.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಏಪ್ರಿಲ್ 10ರಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮಕ್ಕಳಿಗೆ ನೀಡುವ ಲಸಿಕೆಗಳ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ.












Click it and Unblock the Notifications