ಶಿರಡಿ ಸಾಯಿಬಾಬಾ ದೇಗುಲ 25 ಸಾವಿರ ಡಾಲರ್ ದೇಣಿಗೆ!
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರು, ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್(ಎಸ್‍ಎಸ್‍ಎಸ್ಟಿ) ಗೆ 25,000 ಯುಎಸ್ ಡಾಲರ್ ದೇಣಿಗೆ ನೀಡಿದ್ದಾರೆ.
ಶಿರಡಿ(ಮಹಾರಾಷ್ಟ್ರ), ಜನವರಿ 11: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರು, ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್(ಎಸ್‍ಎಸ್‍ಎಸ್ಟಿ) ಗೆ 25,000 ಯುಎಸ್ ಡಾಲರ್ ದೇಣಿಗೆ ನೀಡಿದ್ದಾರೆ.
ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆಯುವ ಅನ್ನ ದಾಸೋಹದ ಈ ಹಣವನ್ನು ವಿನಿಯೋಗಿಸುವಂತೆ ಕೇಳಿಕೊಂಡಿದ್ದಾರೆ ಎಂದು ಎಸ್‍ಎಸ್‍ಎಸ್ಟಿಯ ಕಾರ್ಯ ನಿರ್ವಾಹಕ ಅಧಿಕಾರಿ ಬಾಜೀರಾವ್ ಶಿಂಧೆ ತಿಳಿಸಿದ್ದಾರೆ.

ಅನಿವಾಸಿ ಭಾರತೀಯ(ಎನ್‍ಆರ್‍ಐ) ಮಹಿಳೆ ಸೀತಾ ಹರಿಹರನ್ ಅವರು ದೇವಸ್ಥಾನಕ್ಕೆ ಆಗಮಿಸಿ, ಇಲ್ಲಿನ ವ್ಯವಸ್ಥೆಯನ್ನು ನೋಡಿ ನಂತರ ಅನ್ನ ದಾಸೋಹಕ್ಕಾಗಿ 25 ಸಾವಿರ ಡಾಲರ್ ಹಣ ನೀಡಿದರು. ಮೂರು ಪೋಸ್ಟ್ ಡೇಟೆಡ್ ಚೆಕ್ ನೀಡಿದ್ದಾರೆ. ಏಪ್ರಿಲ್, ಜುಲೈ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಮೊತ್ತವನ್ನು ಬಳಸಲಾಗುವುದು ಎಂದು ಬಾಜೀರಾವ್ ಹೇಳಿದರು.
ಶ್ರೀ ಸಾಯಿಬಾಬಾ ದೇವಾಲಯಕ್ಕೆ ಒಂದು ಸಣ್ಣ ಸೇವೆ ಮಾಡಲು ಅವಕಾಶ ದೊರೆತಿದ್ದು ನನ್ನ ಪುಣ್ಯ ಎಂದು ಅಮೆರಿಕದ ನಾರ್ತ್ ಕರೋಲಿನಾದಲ್ಲಿ ನೆಲೆಸಿರುವ ಸೀತಾ ಹರಿಹರನ್ ಹೇಳಿದ್ದಾರೆ. ಎಲ್ಲವೂ ಅವನ(ಸಾಯಿ)ದ್ದೇ, ಇಲ್ಲಿ ನನ್ನದೆಂಬುದು ಏನೂ ಇಲ್ಲ ಅವನು ಕೊಟ್ಟಿದ್ದನ್ನು ಅವನಿಗೇ ಕೊಟ್ಟಿದ್ದೇನೆ. ಇದು ದೇಣಿಗೆಯಲ್ಲ ಎಂದು ಸೀತಾ ಹೇಳಿದ್ದಾರೆ. (ಪಿಟಿಐ)












Click it and Unblock the Notifications