ಮಳೆಯ ರೌದ್ರಾವತಾರಕ್ಕೆ ಬೆಚ್ಚಿದ ಉತ್ತರ ಭಾರತ: ಈ ರಾಜ್ಯಗಳಲ್ಲಿ ಮುಂದುವರೆಯಲಿದೆ ಭಾರಿ ಮಳೆ
ನವದೆಹಲಿ, ಜುಲೈ 9: ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಳೆಯ ಅಬ್ಬರದಿಂದಾಗಿ ಉತ್ತರ ಭಾರತದ ರಾಜ್ಯಗಳು ಅಕ್ಷರಶಃ ನಲುಗಿ ಹೋಗಿವೆ.
ಕಳೆದ ಎರಡು ದಿನಗಳಲ್ಲಿ ಭಾರಿ ಮಳೆಯಿಂದಾಗಿ 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಮಾಪನ ಇಲಾಖೆ (IMD) ಎಚ್ಚರಿಕೆ ಕೊಟ್ಟಿದೆ.

ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವು ರಸ್ತೆಗಳು ಜಲಾವೃತವಾಗಿದೆ. ಹಲವು ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಭಾರಿ ಮಳೆಯಿಂದಾಗಿ ಟ್ರಾಫಿಕ್ ಉಂಟಾಗಿದ್ದುವ ಸವಾರರು ಪರದಾಡುವಂತಾಗಿದೆ. 1982ರ ನಂತರ ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲಿ ದೆಹಲಿಯಲ್ಲಿ 24 ಗಂಟೆಗಳಲ್ಲಿ 153 ಮಿಮೀ ಮಳೆಯಾಗಿದೆ.
ಹಲವು ರಾಜ್ಯಗಳಲ್ಲಿ ಪ್ರವಾಹ
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಭಾನುವಾರ ಮುಂಜಾನೆ ಭಾರೀ ಮಳೆಗೆ ಮನೆ ಕುಸಿದು ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಇದೇ ರೀತಿಯ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪೂಂಚ್ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಲ್ಲಿ ಇಬ್ಬರು ಸೇನಾ ಯೋಧರು ಕೊಚ್ಚಿ ಹೋಗಿದ್ದರು.

ರಾಜ್‌ಸಮಂದ್, ಜಲೋರ್, ಪಾಲಿ, ಅಜ್ಮೀರ್, ಅಲ್ವಾರ್, ಬನ್ಸ್‌ವಾರಾ, ಭರತ್‌ಪುರ್, ಭಿಲ್ವಾರಾ, ಬುಂಡಿ, ಚಿತ್ತೋರ್‌ಗಢ, ದೌಸಾ, ಧೌಲ್‌ಪುರ್, ಜೈಪುರ ಮತ್ತು ಕೋಟಾ ಸೇರಿದಂತೆ ರಾಜಸ್ಥಾನದ ಒಂಬತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಅಮರನಾಥ ಯಾತ್ರೆ ಸ್ಥಗಿತ
ನಿರಂತರ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ವಾರ್ಷಿಕ ಅಮರನಾಥ ಯಾತ್ರೆಯನ್ನು ಸತತ ಮೂರನೇ ದಿನ ಕೂಡ ಸ್ಥಗಿತಗೊಳಿಸಲಾಗಿದೆ. ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸುಮಾರು 3,000 ವಾಹನಗಳು ಸಿಲುಕಿಕೊಂಡಿವೆ, ಶನಿವಾರ ರಸ್ತೆಯ ಒಂದು ಭಾಗವು ಕುಸಿದಿತ್ತು.
ಶಿಮ್ಲಾ, ಸಿರ್ಮೌರ್, ಲಾಹೌಲ್ ಮತ್ತು ಸ್ಪಿತಿ, ಚಂಬಾ ಮತ್ತು ಸೋಲನ್‌ನಲ್ಲಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ಹಲವಾರು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲು ಕಾರಣವಾಗಿದೆ. ಬಿಯಾಸ್ ನದಿಯು ಅಪಾಯದ ರೇಖೆಯನ್ನು ಉಲ್ಲಂಘಿಸಿದ್ದರಿಂದ ಕುಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕೊಚ್ಚಿಹೋಗಿದೆ.
ಹರ್ಯಾಣ ಮತ್ತು ಪಂಜಾಬ್‌ನ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದ್ದು, ಎರಡು ರಾಜ್ಯಗಳಲ್ಲಿ ಸಾಮಾನ್ಯ ಮಿತಿಗಿಂತ ಕಡಿಮೆಯಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಎರಡು ರಾಜ್ಯಗಳ ಸಾಮಾನ್ಯ ರಾಜಧಾನಿಯಾದ ಚಂಡೀಗಢದಲ್ಲಿ ದಿನವಿಡೀ ಮಳೆಯಾಗಿದೆ.












Click it and Unblock the Notifications