Success Story: ಬೆಂಡೆಕಾಯಿ, ಮೆಂತ್ಯ ಬಳಸಿ ವಿದ್ಯುತ್ ರಹಿತ ವಾಟರ್ ಫಿಲ್ಟರ್ ಕಂಡುಹಿಡಿದ ಅವಳಿ ಸಹೋದರಿಯರು
ಸಾಮಾನ್ಯವಾಗಿ ನಮ್ಮ ಅಡುಗೆಮನೆಯಲ್ಲಿ ದೈನಂದಿನ ಅಡುಗೆಗೆ ಬಳಸುವ ಬೆಂಡೆಕಾಯಿ, ಮೆಂತ್ಯ ಕಾಳುಗಳು ಹಾಗೂ ರೈತರು ಬಿಸಾಡುವ ಭತ್ತದ ಹೊಟ್ಟು ಕಲುಷಿತ ನೀರನ್ನ ಶುದ್ಧೀಕರಿಸಬಲ್ಲವು ಎಂದು ನೀವು ಎಂದಾದರೂ ಊಹಿಸಿದ್ದೀರಾ? ಖಂಡಿತ ಇಲ್ಲ.
ಆದರೆ, ದೆಹಲಿ-ಎನ್‌ಸಿಆರ್‌ನ ನೋಯ್ಡಾದಲ್ಲಿರುವ ಸ್ಟೆಪ್ ಬೈ ಸ್ಟೆಪ್ ಶಾಲೆಯ 12ನೇ ತರಗತಿಯ ಅವಳಿ ಸಹೋದರಿಯರಾದ ನೈನಾ ಮತ್ತು ನಯನತಾರಾ ಸಿಂಗ್ ಈ ವಸ್ತುಗಳಿಂದ ನೀರು ಕ್ಲೀನ್ ಮಾಡಬಹುದು ಎಂದು ಸಾಬೀತು ಮಾಡಿದ್ದಾರೆ. ಈ ಇಬ್ಬರು ವಿದ್ಯಾರ್ಥಿನಿಯರು ಬೆಂಡೆಕಾಯಿ, ಮೆಂತ್ಯ ಮತ್ತು ಭತ್ತದ ಹೊಟ್ಟನ್ನು ಬಳಸಿ 'ಆಕ್ವಾ ಸತ್ವ' ಎಂಬ ವಿದ್ಯುತ್ ರಹಿತ ವಾಟರ್ ಫಿಲ್ಟರ್ ಅನ್ನ ಅಭಿವೃದ್ಧಿಪಡಿಸಿದ್ದಾರೆ.

ಈ ಪರಿಸರ ಸ್ನೇಹಿ ನೈಸರ್ಗಿಕ ಫಿಲ್ಟರ್, ಇತ್ತೀಚಿನ ದಿನಗಳಲ್ಲಿ ಜಗತ್ತನ್ನ ಕಾಡುತ್ತಿರುವ ಮೈಕ್ರೋಪ್ಲಾಸ್ಟಿಕ್ ಮತ್ತು ಪಿಎಫ್‌ಎಎಸ್‌ನಂತಹ ಅತ್ಯಂತ ಅಪಾಯಕಾರಿ ರಾಸಾಯನಿಕಗಳನ್ನು ನೀರಿನಿಂದ ತೆಗೆದುಹಾಕುತ್ತದೆ.
ಆಕ್ವಾ ಸತ್ವ ವಿದ್ಯುತ್ ರಹಿತ ವಾಟರ್ ಫಿಲ್ಟರ್ ಕಾರ್ಯನಿರ್ವಹಣೆ ಹೇಗೆ?
ನಾವೆಲ್ಲರೂ ಸಾಮಾನ್ಯವಾಗಿ ನೀರು ಶುದ್ಧೀಕರಿಸಲು ದುಬಾರಿ ಯಂತ್ರಗಳನ್ನ ಅವಲಂಬಿಸುತ್ತೇವೆ. ಆದರೆ, ಈ ಆಕ್ವಾ ಸತ್ವ ಫಿಲ್ಟರ್ ಅನ್ನು ಬಳಸಲು ಯಾವುದೇ ರೀತಿಯ ವಿದ್ಯುತ್ ಅಥವಾ ಪ್ಲಂಬಿಂಗ್ ವ್ಯವಸ್ಥೆಯ ಅಗತ್ಯವೇ ಇಲ್ಲ. ಈ ಅದ್ಭುತ ವಿದ್ಯುತ್ ರಹಿತ ವಾಟರ್ ಫಿಲ್ಟರ್ ಅನ್ನು ಟೀ-ಬ್ಯಾಗ್ ಆಕಾರದ ಸಣ್ಣ ಸ್ಯಾಚೆಟ್‌ಗಳ ರೂಪದಲ್ಲಿ ಅತ್ಯಂತ ಸರಳವಾಗಿ ವಿನ್ಯಾಸಗೊಳಿಸಲಾಗಿದೆ.
ಈ ಸ್ಯಾಚೆಟ್‌ನೊಳಗೆ ಬೆಂಡೆಕಾಯಿ ಮತ್ತು ಮೆಂತ್ಯದಿಂದ ಪಡೆದ ನೈಸರ್ಗಿಕ ಪಾಲಿಮರ್‌ಗಳನ್ನ ಬಳಸಲಾಗಿದ್ದು, ಇದು ನೀರಿನಲ್ಲಿರುವ ಕಣ್ಣಿಗೆ ಕಾಣದ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ, ಕೃಷಿ ತ್ಯಾಜ್ಯವಾದ ಭತ್ತದ ಹೊಟ್ಟಿನಿಂದ ತಯಾರಿಸಿದ ಬಯೋಚಾರ್ ನೀರಿನಲ್ಲಿರುವ ಪಿಎಫ್‌ಎಎಸ್ ಎಂಬ ಅಪಾಯಕಾರಿ ರಾಸಾಯನಿಕಗಳನ್ನ ಹೀರಿಕೊಳ್ಳುತ್ತದೆ.
ಒಂದು ಸ್ಯಾಚೆಟ್ ಅನ್ನು ನೀರಿನಲ್ಲಿ ಅದ್ದಿದಾಗ, ಫ್ಲೋಕ್ಯುಲೇಶನ್ ಎಂಬ ವೈಜ್ಞಾನಿಕ ಪ್ರಕ್ರಿಯೆಯ ಮೂಲಕ ಕಲ್ಮಶಗಳು ಒಟ್ಟುಗೂಡುತ್ತವೆ ಮತ್ತು ನಮಗೆ ಕುಡಿಯಲು ಶುದ್ಧ ನೀರು ಲಭ್ಯವಾಗುತ್ತದೆ.
ಐಐಟಿ ದೆಹಲಿಯಲ್ಲಿ ಯಶಸ್ವಿ ಪ್ರಯೋಗ
ಈ ಹೊಸ ಆವಿಷ್ಕಾರವನ್ನ ಕೇವಲ ಶಾಲೆಯ ಪ್ರಯೋಗಾಲಯಕ್ಕೆ ಸೀಮಿತಗೊಳಿಸದೆ, ನೈನಾ ಮತ್ತು ನಯನತಾರಾ ಸಿಂಗ್ ಅವರು ತಮ್ಮ ಯೋಜನೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಅವರು ಐಐಟಿ ದೆಹಲಿಯ ಬಯೋಮಾಸ್ ಪ್ರಯೋಗಾಲಯದಲ್ಲಿ ಪ್ರೊಫೆಸರ್ ವಿವೇಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಫಿಲ್ಟರ್ ಅನ್ನು ಅಭಿವೃದ್ಧಿಪಡಿಸಿ, ಪರೀಕ್ಷೆಗೊಳಪಡಿಸಿದರು.
ಲ್ಯಾಬ್ ಪರೀಕ್ಷೆಗಳ ಅಧಿಕೃತ ವರದಿ ಪ್ರಕಾರ, ಕೇವಲ ಮೂಲಭೂತ ಶೋಧನೆಯ ನಂತರ ಈ ಫಿಲ್ಟರ್ ಮೂಲಕ ಸುಮಾರು 20 ವಿವಿಧ ಪಿಎಫ್‌ಎಎಸ್ ಸಂಯುಕ್ತಗಳನ್ನು ಶೇಕಡಾ 93ರಷ್ಟು ಯಶಸ್ವಿಯಾಗಿ ತೆಗೆದುಹಾಕಲಾಗಿದೆ.
ಇಂದು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಆರ್.ಓ (RO) ವಾಟರ್ ಪ್ಯೂರಿಫೈಯರ್‌ಗಳಿಗೆ ಹೋಲಿಸಿದರೆ ಈ ಕಡಿಮೆ ಬೆಲೆಯ ವಾಟರ್ ಫಿಲ್ಟರ್ ಅತ್ಯಂತ ಅಗ್ಗವಾಗಿದೆ ಮತ್ತು ಜನಸಾಮಾನ್ಯರ ಕೈಗೆಟುಕುವಂತಿದೆ. 10 ಸ್ಯಾಚೆಟ್‌ಗಳಿರುವ ಒಂದು ಪ್ಯಾಕ್‌ಗೆ ಕೇವಲ 100 ರೂಪಾಯಿ ವೆಚ್ಚವಾಗಲಿದ್ದು, ಇದು ಸಾಮಾನ್ಯ ಮತ್ತು ಬಡ ಕುಟುಂಬಗಳಿಗೂ ಸುಲಭವಾಗಿ ಲಭ್ಯವಾಗಲಿದೆ.
ದುಬಾರಿ ಆರ್.ಓ ಯಂತ್ರಗಳಂತೆ ಇದು ನೀರನ್ನು ಪೋಲು ಮಾಡುವುದಿಲ್ಲ ಹಾಗೂ ನಿರ್ವಹಣಾ ವೆಚ್ಚವೂ ಇಲ್ಲದಿರುವುದು ಇದರ ಮತ್ತೊಂದು ವಿಶೇಷ.
ಸ್ಟಾಕ್‌ಹೋಮ್ ಜೂನಿಯರ್ ವಾಟರ್ ಪ್ರೈಸ್ ಇಂಡಿಯಾ 2026 ಪ್ರಶಸ್ತಿ
ದೆಹಲಿಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿರುವುದು ಮತ್ತು ನೀರಿನ ಗುಣಮಟ್ಟ ಹಾಳಾಗುತ್ತಿರುವುದನ್ನ ಸರ್ಕಾರಿ ವರದಿಯೊಂದರಲ್ಲಿ ಓದಿದ ಈ ಅವಳಿ ಸಹೋದರಿಯರು, ಪರಿಸರ ಸಂರಕ್ಷಣೆಗಾಗಿ ಈ ಯೋಜನೆಗೆ ಕೈಹಾಕಿದರು.
ತಮ್ಮ ಶಾಲಾ ಅಭ್ಯಾಸದ ನಡುವೆಯೂ, ರಜೆಗಳನ್ನ ಬಳಸಿಕೊಂಡು ಸತತ ಒಂದು ವರ್ಷಗಳ ಕಾಲ ಲ್ಯಾಬ್‌ನಲ್ಲಿ ಸಂಶೋಧನೆ ನಡೆಸಿದ್ದಾರೆ. ಇವರ ಈ ಸುದೀರ್ಘ ಶ್ರಮ ಹಾಗೂ ಸಂಶೋಧನೆಗೆ ಈಗ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿದೆ.
ಇತ್ತೀಚೆಗೆ ಐಐಟಿ ಮದ್ರಾಸ್‌ನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ 350ಕ್ಕೂ ಹೆಚ್ಚು ತಂಡಗಳನ್ನು ಹಿಂದಿಕ್ಕಿ, ಈ ಸಹೋದರಿಯರು ಪ್ರತಿಷ್ಠಿತ 'ಸ್ಟಾಕ್‌ಹೋಮ್ ಜೂನಿಯರ್ ವಾಟರ್ ಪ್ರೈಸ್ ಇಂಡಿಯಾ 2026' ಸ್ಪರ್ಧೆಯಲ್ಲಿ ಮೂರನೇ ಸ್ಥಾನದೊಂದಿಗೆ 'ವಾಟರ್ ಚಾಂಪಿಯನ್ಸ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.


Click it and Unblock the Notifications
