ಭಯ ಬಿಡಿ: ಕೊರೊನಾ ಲಸಿಕೆ ಪಡೆದ 1150 ಜನರಲ್ಲಿ ಒಬ್ಬರಿಗೆ ಅಡ್ಡಪರಿಣಾಮ!
ಅಹ್ಮದಾಬಾದ್, ಫೆಬ್ರವರಿ.05: ಭಾರತದಲ್ಲಿ ಅನುಮೋದನೆ ಪಡೆದಿರುವ ಕೊರೊನಾದ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಸುರಕ್ಷತೆಯಲ್ಲಿ ಯಾವುದೇ ಲೋಪವಿಲ್ಲ ಎಂದು ಕೇಂದ್ರ ಸರ್ಕಾರವು ಮತ್ತೊಮ್ಮೆ ಪುನರುಚ್ಛರಿಸಿದೆ.
ಕೊರೊನಾವೈರಸ್ ಲಸಿಕೆ ಪಡೆದ ನಂತರದಲ್ಲಿ ಮೃತಪಟ್ಟಿರುವ 19 ಮಂದಿಯ ಸಾವಿಗೆ ಲಸಿಕೆಯಿಂದಾದ ಅಡ್ಡಪರಿಣಾಮ ಕಾರಣವಲ್ಲ. ಕೊವಿಡ್-19 ಲಸಿಕೆ ಹೆಚ್ಚು ಪ್ರಭಾವಶಾಲಿ ಮತ್ತು ಸುರಕ್ಷಿತವಾಗಿದೆ. ಮೃತರ ಸಾವಿಗೂ ಯಾವುದೇ ಸಂಬಂಧವಿಲ್ಲ. ರೋಗನಿರೋಧಕ (ಎಇಎಫ್‌ಐ) ಲಸಿಕೆ ಪಡೆದ ನಂತರದಲ್ಲಿ ಪ್ರತಿಕೂಲ ಘಟನೆಗಳ ಮೇಲ್ವಿಚಾರಣೆಗೆ ರಚನಾತ್ಮಕ ಕಾರ್ಯವಿಧಾನವಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಪಡೆದ ನಂತರ ವೈದ್ಯಕೀಯ ಸಿಬ್ಬಂದಿ, ಸ್ಯಾನಿಟೈಸರ್ ಕಾರ್ಮಿಕರು ಸೇರಿದಂತೆ ಈವರೆಗೂ 19 ಕೊರೊನಾ ವಾರಿಯರ್ಸ್ ಮೃತಪಟ್ಟಿದ್ದಾರೆ. ಎಲ್ಲರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಕೊವಿಡ್ ವಾರಿಯರ್ಸ್ ಸಾವಿಗೆ ಲಸಿಕೆ ಕಾರಣವಲ್ಲ
ಕೊರೊನಾವೈರಸ್ ಲಸಿಕೆ ಪಡೆದುಕೊಂಡ ನಂತರದಲ್ಲಿ 19 ಮಂದಿ ಪ್ರಾಣ ಬಿಟ್ಟಿದ್ದು, ಎಲ್ಲರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿರುವ ರೋಗನಿರೋಧಕ ಲಸಿಕೆ ಪಡೆದ ನಂತರದ ಘಟನೆಗಳ ಮೇಲ್ವಿಚಾರಣೆಯ ತಂಡ ಈ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಮೃತರ ಸಾವು ಮತ್ತು ಲಸಿಕೆಗೂ ನಂಟು ಹೊಂದಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಲಸಿಕೆ ಪಡೆದ ಶೇ.0.18 ಜನರಲ್ಲಿ ಆರೋಗ್ಯ ಸಮಸ್ಯೆ
ಭಾರತದಾದ್ಯಂತ ಲಕ್ಷಾಂತರದ ಜನರಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ ರೋಗ ನಿರೋಧಕ ಲಸಿಕೆ ನಂತರದ ಘಟನೆಗಳ ಮೇಲ್ವಿಚಾರಣೆ ತಂಡಕ್ಕೆ ಸಿಕ್ಕ ಮಾಹಿತಿ ಪ್ರಕಾರ, 8563 ಜನರ ಆರೋಗ್ಯದಲ್ಲಿ ವ್ಯತ್ಯಾಸವಾದ ಘಟನೆಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ಸೆರೆ ಹಿಡಿಯಲಾಗಿದೆ. ಇದು ದೇಶದಲ್ಲಿ ಒಟ್ಟು ಲಸಿಕೆ ಪಡೆದವರ ಶೇ.0.18ರಷ್ಟಿದೆ ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.

1,150 ಮಂದಿಯಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ
ದೇಶದಲ್ಲಿ ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ಲಕ್ಷಾಂತರ ಜನರಲ್ಲಿ ಕೆಲವರಿಗೆ ಮಾತ್ರ ಅಡ್ಡಪರಿಣಾಮ ಕಾಣಿಸಿಕೊಂಡಿದ್ದು, ಲಸಿಕೆಗಳು ಹೆಚ್ಚು ಸುರಕ್ಷಿತವಾಗಿ ಎಂದು ರಾಷ್ಟ್ರೀಯ ಲಸಿಕೆ ಆಡಳಿತ ಮಂಡಳಿಯ ಚೇರ್ ಮನ್ ಡಾ. ವಿ.ಕೆ. ಪೌಲ್ ಹೇಳಿದ್ದಾರೆ. ಕೊವಿಡ್-19 ಲಸಿಕೆ ಪಡೆದ 1150 ಜನರಲ್ಲಿ ಒಬ್ಬರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಲಸಿಕೆ ಪಡೆದ ಕಾರಣಕ್ಕೆ ಮೃತಪಟ್ಟಿರುವ ಒಂದೇ ಒಂದು ಪ್ರಕರಣವು ವರದಿಯಾಗಿಲ್ಲ ಎಂದು ಡಾ. ಪೌಲ್ ತಿಳಿಸಿದ್ದಾರೆ.

ದೇಶದ 4.49 ಲಕ್ಷ ಕೊರೊನಾ ವಾರಿಯರ್ಸ್ ಗೆ ಲಸಿಕೆ
ಭಾರತದಲ್ಲಿ ಕೇವಲ 18 ದಿನಗಳಲ್ಲೇ 40 ಲಕ್ಷಕ್ಕಿಂತ ಅಧಿಕ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡುವ ಮೂಲಕ ವಿಶ್ವದಲ್ಲೇ ಅತಿಕಡಿಮೆ ಅವಧಿಗೆ ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ದೇಶ ಎಂದು ಗುರುತಿಸಿಕೊಂಡಿದೆ. ಭಾರತದಾದ್ಯಂತ ಇದುವರೆಗೂ 4,49,552 ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ಕೊವಿಡ್ ಲಸಿಕೆ ಪಡೆದ ನಂತರ ಮೃತಪಟ್ಟವರ ಸುತ್ತ ಪ್ರಶ್ನೆ
ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ ಮೃತಪಟ್ಟವರ ಸಾವಿಗೆ ಕಾರಣವೇನು ಎಂದು ಪ್ರಶ್ನಿಸಿ ಆರೋಗ್ಯ ತಜ್ಞರ ತಂಡವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಪತ್ರ ಬರೆದಿದೆ. ಮಾಲಿನಿ ಐಸೋಲಾ, ಎಸ್ ಪಿ ಕಲಂತ್ರಿ, ಟಿ. ಜಾಕೋಬ್ ಎಂಬ ಆರೋಗ್ಯ ತಜ್ಞರ ತಂಡವು ಈ ಸಂಬಂಧ ಪತ್ರವನ್ನು ಬರೆದಿತ್ತು. ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಸಾವಿಗೆ ಅಸಲಿ ಕಾರಣವೇನು ಎಂಬುದು ಎಲ್ಲಿಯೂ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ. ಈ ಪ್ರಕರಣಗಳ ತನಿಖೆಯು ಹೇಗೆ ನಡೆಯುತ್ತದೆ, ಯಾವ ಆಧಾರ ಮತ್ತು ಮಾನದಂಡಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣಗಳ ತನಿಖೆ ನಡೆಸುತ್ತಿರುವವರು ಯಾರು ಎಂಬುದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.












Click it and Unblock the Notifications