Jagdeep Dhankhar: ಸಭಾಪತಿ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ; ರಾಜ್ಯಸಭೆಯಲ್ಲಿ ಕೋಲಾಹಲ
ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಇಂಡಿಯಾ ಒಕ್ಕೂಟ ನೋಟಿಸ್ ಕೊಟ್ಟಿರುವುದು ರಾಜ್ಯಸಭೆಯಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ. ರಾಜ್ಯಸಭೆ ಸಭಾಪತಿ ವಿರುದ್ಧ ಇಂತಹ ನಿರ್ಣಯ ಮಂಡಿಸುತ್ತಿರುವ ಘಟನೆ ಇದೇ ಮೊದಲ ಬಾರಿಗೆ ನಡೆದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಭಾಪತಿ ಜಗದೀಪ್ ಧನಖರ್ ಪಕ್ಷಪಾತ ನಡವಳಿಕೆ ತೋರಿಸುತ್ತಿದ್ದಾರೆ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಪ್ರಚಾರ ಮಾಡುತ್ತಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಇದೇ ವರ್ಷದ ಆಗಸ್ಟ್‌ನಲ್ಲಿ ನಡೆದ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಕೂಡ ಜಗದೀಪ್ ಧನಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ನಿರ್ಧರಿಸಿದ್ದವು, ಆದರೆ ಅಧಿವೇಶನ ಮುಕ್ತಾಯವಾದ ಬಳಿಕ ಅದನ್ನು ರದ್ದುಗೊಳಿಸಲಾಗಿತ್ತು.

ರಾಷ್ಟ್ರಪತಿಯ ಬಳಿಕ ಎರಡನೇ ಅತ್ಯುನ್ನತ ಸಾಂವಿಧಾನಿ ಅಧಿಕಾರವನ್ನು ಉಪ ರಾಷ್ಟ್ರಪತಿಗಳು ಪಡೆಯುತ್ತಾರೆ. ಸಂವಿಧಾನದ 63ನೇ ವಿಧಿ ಅವರಿಗೆ ಅಧಿಕಾರವನ್ನು ನೀಡುತ್ತದೆ. 64ನೇ ವಿಧಿಯ ಪ್ರಕಾರ ರಾಷ್ಟ್ರಪತಿ ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ.
ರಾಜ್ಯಸಭೆಯಲ್ಲಿ ಕೋಲಾಹಲ
ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ಕೊಟ್ಟಿದ್ದಕ್ಕೆ ಜಗದೀಪ್ ಧನಖರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸಭಾಪತಿ ಜಗದೀಪ್ ಧನಕರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ತೀವ್ರ ವಾಗ್ವಾದ ನಡೆಯಿತು. ರಾಜ್ಯಸಭೆಯಲ್ಲಿ ಪ್ರಮೋದ್ ತಿವಾರಿ ಮಾತನಾಡುವ ಸಂದರ್ಭದಲ್ಲಿ ಕಿಡಿ ಕಾರಿದ ಜಗದೀಪ್ ಧನಕರ್, ನಾನು ರೈತನ ಮಗ ಸಾಯುತ್ತೇನೆ ಹೊರತು ಯಾರಿಗೂ ತಲೆ ಬಾಗಲ್ಲ ಎಂದು ಹೇಳಿದರು.
ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಕಡಿಸುವುದು ಪ್ರತಿಪಕ್ಷಗಳ ಸಾಂವಿಧಾನಿಕ ಹಕ್ಕು ಆದರೆ ಅದನ್ನು ನೀವು ಯಾರ ರೀತಿ ಅಪಪ್ರಚಾರ ಮಾಡಿದ್ದೀರಿ ಎನ್ನುವುದು ಗೊತ್ತಿದೆ. ನಾನು ರೈತನ ಮಗ, ದೇಶಕ್ಕಾಗಿ ಸಾಯಲು ಸಜ್ಜಾಗಿದ್ದೇನೆ. ಯಾರಿಗೂ ನಾನು ಅಗೌರವ ತೋರಿಲ್ಲ ಎಂದು ಹೇಳಿದರು.
ನಾನು ಈಗಾಗಲೇ ಸಾಕಷ್ಟು ಸಹಿಸಿಕೊಂಡಿದ್ದೇನೆ, ಪ್ರಸ್ತಾವನೆಯನ್ನು ತಂದು ಚರ್ಚೆ ಮಾಡುವುದು ನಿಮ್ಮ ಹಕ್ಕು, ಆದರೆ ನೀವು ಸಂವಿಧಾನದ ಆಶಯವನ್ನೇ ಗಾಳಿಗೆ ತೂರಿದ್ದೀರಾ, ಮೊದಲು ಕಾನೂನು ಓದಿ ಎಂದು ಪಾಠ ಮಾಡಿದರು.
ಜಗದೀಪ್ ಧನಕರ್ ಅವರ ರೈತನ ಮಗ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನೀವು ರೈತನ ಮಗನಾದರೆ, ನಾನು ಕೂಲಿ ಕಾರ್ಮಿಕನ ಮಗ. ಸದನ ನಡೆಸುವುಸು ಅಧ್ಯಕ್ಷರಾದ ನಿಮ್ಮ ಜವಾಬ್ದಾರಿ. ನೀವು ಅದನ್ನು ಸರಿಯಾಗಿ ಮಾಡಿ, ನಿಮ್ಮ ಹೊಗಳಿಕೆ ಕೇಳಲು ನಾವಿಲ್ಲಿಗೆ ಬಂದಿಲ್ಲ, ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದರು.












Click it and Unblock the Notifications