ಪ್ರಿಯಾ ವಾರಿಯರ್ ರನ್ನು ಬೀಟ್ ಮಾಡಿದ ರಾಹುಲ್ ಗಾಂಧಿ!
ನವದೆಹಲಿ, ಜುಲೈ 20 : ರಾಹುಲ್ ಗಾಂಧಿಯವರ ಭಾಷಣ ಹೇಗೆ ಇರಲಿ, ಯಾರೇ ಮೆಚ್ಚಿಕೊಳ್ಳಲಿ, ಯಾರೆಷ್ಟೇ ತೆಗಳಲಿ, ಏನೇ ಆರೋಪ ಹೊರಿಸಿರಲಿ, ಆದರೆ, ಕೊನೆಯಲ್ಲಿ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಆ ದೃಶ್ಯ ಕೇರಳದ ಸೆನ್ಸೇಷನ್ ಕಣ್ಮಿಟುಕು ಸುಂದರಿ ಪ್ರಿಯಾ ವಾರಿಯರ್ ಅವರನ್ನೂ ಬೀಟ್ ಮಾಡುವುದರಲ್ಲಿ ಸಂಶಯವೇ ಇಲ್ಲ.
ನರೇಂದ್ರ ಮೋದಿ ಅವರನ್ನು ಬಲವಂತವಾಗಿ ಅಪ್ಪಿಕೊಂಡು ಬಂದ ನಂತರ, ಮೋದಿ ಅವರಿಂದ ಹಸ್ತಲಾಘವವನ್ನೂ ಪಡೆದುಕೊಂಡು ಬಂದ ನಂತರ ರಾಹುಲ್ ಗಾಂಧಿ ಅವರು ತಮ್ಮ ಸೀಟಲ್ಲಿ ಬಂದು ಕುಳಿತು 'ಕಣ್ಣು ಮಿಟುಕಿಸಿದ್ದು' ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗುರಿಯಾಗಿರುವುದಂತೂ ಗ್ಯಾರಂಟಿ.
"ನೀವು ನನ್ನನ್ನು ಎಷ್ಟೇ ದ್ವೇಷಿಸಿದರೂ ಸರಿ, ನನ್ನ ಪಪ್ಪು ಅಂತಲೂ ಕರೆಯಿರಿ, ಆದರೆ ನನ್ನಲ್ಲಿ ನಿಮ್ಮ ಬಗ್ಗೆ ಪ್ರೀತಿ ಇದ್ದೇ ಇರುತ್ತದೆ. ಆ ಪ್ರೀತಿಯನ್ನು ನಿಮ್ಮಿಂದಲೂ ಹೊರಹಾಕಿಸುತ್ತೇನೆ. ಇದು ಕಾಂಗ್ರೆಸ್ಸಿನಲ್ಲಿನ ಗುಣ. ನಾನು ಕಾಂಗ್ರೆಸ್ಸಿಗ ಮಾತ್ರವಲ್ಲ, ನಿಮ್ಮನ್ನೂ ಕಾಂಗ್ರೆಸ್ಸಿಗನನ್ನಾಗಿ ಮಾಡುತ್ತೇನೆ" ಎಂದು ಧಡಧಡನೆ ಮೋದಿಯವರ ಹತ್ತಿರ ನಡೆದುಕೊಂಡು ಹೋದ ರಾಹುಲ್ ಗಾಂಧಿಯವರು ಮೋದಿಯನ್ನು ತಬ್ಬಿಕೊಳ್ಳಲೆತ್ನಿಸಿದರು.

ನಿಮ್ಮನ್ನು ತಬ್ಬಿಕೊಳ್ಳಬೇಕು ನೀವು ಎದ್ದೇಳಿ ಎಂದು ಮೋದಿಯವರಿಗೆ ಹೇಳಿದಾಗ ತಬ್ಬಿಬ್ಬಾದ ಮೋದಿಯವರು ಇದೇನಿದು ತಮಾಷೆ ಎಂದು ಮುಖ ಗಂಟಿಕ್ಕಿದರು. ಆದರೂ ಬಿಡದ ರಾಹುಲ್ ಅಲ್ಲಿಯೇ ಅವರನ್ನು ತಬ್ಬಿಕೊಂಡು, ಮತ್ತೆ ಅದೇ ವೇಗದಲ್ಲಿ ಆಸೀನರಾದ ತಕ್ಷಣ ಮುದ್ದುಮುದ್ದಾಗಿ ನಗುತ್ತ ಕಣ್ಣು ಹೊಡೆದರು.
ರಾಹುಲ್ ಪಕ್ಕದಲ್ಲಿ ಕುಳಿತಿದ್ದು ಜ್ಯೋತಿರಾಧಿತ್ಯ ಸಿಂಧಿಯಾ. ಹಾಗಿದ್ದ ಮೇಲೆ ಅವರು ಕಣ್ಣು ಹೊಡೆದಿದ್ದು ಯಾರಿಗೆ? ರಾಹುಲ್ ಗಾಂಧಿಯವರು ಯಾರಿಗೆ ಹೊಡೆದರು, ಯಾಕೆ ಹೊಡೆದರು ಎಂಬ ವಿಷಯದ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ. ಒಟ್ಟಿನಲ್ಲಿ ಕಣ್ಣು ಮಿಟುಕಿಸಿದರು, ಹುಬ್ಬು ಹಾರಿಸಲಿಲ್ಲ ಅಷ್ಟೇ. ಇದೊಂದು ದೃಶ್ಯ ಟಿವಿಗಳಲ್ಲಿ ಇಡೀದಿನ ಪ್ರಸಾರವಾದರೂ ಅಚ್ಚರಿಯಿಲ್ಲ. ಅನುಮಾನವೇ ಇಲ್ಲ, ಪ್ರಿಯಾ ವಾರಿಯರ್ ಕೂಡ ನಾಚಿಕೊಳ್ಳುತ್ತಾರೆ.

ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ನಡುಗಿದೆ ಗಡಗಡ ಗಂಗಮ್ಮ... ನನ್ನ ಮೈಯೆಲ್ಲ ಜುಂಜುಂಜುಂ ನೋಡಮ್ಮ.












Click it and Unblock the Notifications