ಹ್ಯುಂಡೈ ವಿವಾದ: ದಕ್ಷಿಣ ಕೊರಿಯಾ ರಾಯಭಾರಿಗೆ ಭಾರತ ಹೇಳಿದ್ದೇನು?
ನವದೆಹಲಿ, ಫೆಬ್ರವರಿ 9: ಹ್ಯುಂಡೈ ವಿವಾದ ವಿಚಾರವಾಗಿ, ಭಾರತವು ದಕ್ಷಿಣ ಕೊರಿಯಾದ ರಾಯಭಾರಿಯನ್ನು ಕರೆಸಿಕೊಂಡು ತನ್ನ ನಿಲುವನ್ನು ಮನವರಿಕೆ ಮಾಡಿಕೊಟ್ಟಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಾಚಿ ಕಠಿಣ ಸಂದೇಶ ರವಾನೆ ಮಾಡಿದ್ದು, ದಕ್ಷಿಣ ಕೊರಿಯಾದ ರಾಯಭಾರಿಯನ್ನು ಕರೆಸಿ "ತೀವ್ರ ಅಸಮಾಧಾನ"ವನ್ನು ವ್ಯಕ್ತಪಡಿಸಲಾಗಿದೆ ಎಂದು ಹೇಳಿದ್ದಾರೆ. ಹ್ಯುಂಡೈ ಸಂಸ್ಥೆ ಈ ವಿಷಯವಾಗಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭಾರತ ನಿರೀಕ್ಷಿಸುತ್ತದೆ. ಸಿಯೋಲ್ ಮೂಲದ ಸಂಸ್ಥೆ ಹ್ಯುಂಡೈ ನ್ನು ಸಂಪರ್ಕಿಸಿದ್ದು, ವಿವರಣೆಯನ್ನು ಕೇಳಲಾಗಿದೆ ಎಂದು ಬಗಾಚಿ ತಿಳಿಸಿದ್ದಾರೆ.
Recommended Video
ಈ ವಿಷಯ ಪ್ರಾದೇಶಿಕ ಸಮಗ್ರತೆ ವಿಷಯವಾಗಿದ್ದು ಇದರಲ್ಲಿ ರಾಜಿ ಇಲ್ಲ ಎಂದು ದಕ್ಷಿಣ ಕೊರಿಯಾದ ರಾಯಭಾರಿಗೆ ಭಾರತ ತಿಳಿಸಿದೆ. ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚುಂಗ್ ಯಿ-ಯೋಂಗ್ ಅವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತನಾಡಿದ್ದು ಹ್ಯುಂಡೈ ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಪೋಸ್ಟ್ ನಿಂದಾಗಿ ಭಾರತದ ಜನತೆ ಹಾಗೂ ಸರ್ಕಾರಕ್ಕೆ ಉಂಟಾದ ಅಪಚಾರಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಪ್ರತ್ಯೇತಕತೆ ವಿಚಾರವಾಗಿ ಹೊತ್ತಿಕೊಂಡ ಟ್ವಿಟರ್ ವಿರೋಧದ ಬೆನ್ನಲ್ಲೇ ಹ್ಯುಂಡೈ ಇಂಡಿಯಾ ಭಾನುವಾರ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿತ್ತು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಬ್ರ್ಯಾಂಡ್ ಪ್ರೊಫೈಲ್‌ನಲ್ಲಿ ಮಾಡಿದ ಆಕ್ಷೇಪಾರ್ಹ ಹೇಳಿಕೆಗೆ ಕ್ಷಮೆ ಅಥವಾ ವಿಷಾದ ವ್ಯಕ್ತಪಡಿಸಿರಲಿಲ್ಲ.
ಮಂಗಳವಾರ (ಫೆ. 08) ಹುಂಡೈ ಮೋಟಾರ್ಸ್ ಇಂಡಿಯಾ ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿನ ಗ್ರಾಹಕರಿಗೆ ಉಂಟಾದ ಯಾವುದೇ ಅಪರಾಧಕ್ಕಾಗಿ ಕಂಪನಿ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ.
ಪಾಕಿಸ್ತಾನ ಹ್ಯುಂಡೈ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರ ಪ್ರತ್ಯೇಕಿಸುವ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಲಾಗಿತ್ತು. ಈ ಕುರಿತು ಹ್ಯುಂಡೈ ಇಂಡಿಯಾ ನಿಲುವ ಕೇಳಿದ ಭಾರತೀಯರ ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿತ್ತು. ಹೀಗಾಗಿ ಹ್ಯುಂಡೈ ಕಾರುಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನ ಕಳೆದ ಕೆಲವು ದಿನಗಳಿಂದ ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಈ ಟ್ರೆಂಡಿಂಗ್ ಗಂಭೀರತೆ ಅರಿತ ಹ್ಯುಂಡೈ ಇಂಡಿಯಾ ಇದೀಗ ವಿಷಾದ ವ್ಯಕ್ತಪಡಿಸಿದೆ.
ಪೋಸ್ಟ್ ಕಂಪನಿ ನೀತಿ ಉಲ್ಲಂಘಿಸಿದೆ: ಹ್ಯುಂಡೈ ಮೋಟಾರ್ ಕಂಪನಿಯು ವ್ಯಾಪಾರ ನೀತಿಯಂತೆ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ರಾಜಕೀಯ ಅಥವಾ ಧಾರ್ಮಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಪಾಕಿಸ್ತಾನದ ಸ್ವತಂತ್ರ ಸ್ವಾಮ್ಯದ ವಿತರಕರ ಖಾತೆಯಿಂದ ಕಾಶ್ಮೀರಕ್ಕೆ ಸಂಬಂಧಿಸಿದ ಪೋಸ್ಟ್ ಈ ನೀತಿಯನ್ನು ಉಲ್ಲಂಘಿಸಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನ ಮೂಲದ ವಿತರಕರ "ಅನಧಿಕೃತ, ವ್ಯಾಪಾರೇತರ ಸಂಬಂಧಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ನ್ನು ಬಲವಾಗಿ ತಿರಸ್ಕರಿಸಿದ ಹುಂಡೈ, ಪಾಕಿಸ್ತಾನದ ವಿತರಕರಿಗೆ ಅವರ ತಪ್ಪಾದ ವರ್ತನೆ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಕಂಪನಿ ಹೇಳಿದೆ.
ಪೋಸ್ಟ್ ಡಿಲೀಟ್: ಭವಿಷ್ಯದಲ್ಲಿ ಈ ರೀತಿಯ ಪೋಸ್ಟ್‌ಗಳು ಮರುಕಳಿಸದಂತೆ ತಡೆಯಲು ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಈ ಹಿಂದೆ ಮಾಡಲಾದ ಪೋಸ್ಟನ್ನು ತೆಗೆದುಹಾಕಲಾಗಿದೆ ಎಂದು ಕಂಪನಿಯು ತಿಳಿಸಿದೆ.
ಅನಧಿಕೃತ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಬಗ್ಗೆ ತೀವ್ರವಾಗಿ ವಿಷಾದಿಸುತ್ತಾ, ಹುಂಡೈ ಮೋಟಾರ್ಸ್ ಭಾರತದಲ್ಲಿ ಹಲವು ದಶಕಗಳಿಂದ ಹೂಡಿಕೆ ಮಾಡುತ್ತಿದೆ ಮತ್ತು ತನ್ನ ಭಾರತೀಯ ಗ್ರಾಹಕರಿಗ ಬದ್ಧವಾಗಿದೆ ಎಂದು ಹೇಳಿದೆ.
ಹ್ಯುಂಡೈ ಮೋಟಾರ್ಸ್ ಇಂಡಿ ಟ್ವೀಟರ್‌ನಲ್ಲಿ ಬಲವಾದ ವಿರೊಧ ಎದುರಿಸಿದ ಬಳಿಕ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು, ಆದರೆ ನಂತರ ಸಾಮಾಜಿಕ ಮಾಧ್ಯಮದಲ್ಲಿ ಬ್ರ್ಯಾಂಡ್ ಪ್ರೊಫೈಲ್‌ನಲ್ಲಿ ಮಾಡಿದ ಆಕ್ಷೇಪಾರ್ಹ ಹೇಳಿಕೆಗೆ ವಿಷಾದ ವ್ಯಕ್ತಪಡಿಸಲಿಲ್ಲ ಅಥವಾ ಕ್ಷಮೆಯಾಚಿಸಿರಲಿಲ್ಲ. ಆದರೆ ಈಗ ಮತ್ತೊಂದ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ವಿತರಕತ ನಡೆಗೆ ವಿಷಾದ ವ್ಯಕ್ತಪಡಿಸಿದೆ.
ಏನಿದು ಪ್ರಕರಣ?: ಭಾರತದಲ್ಲಿ ದಿಢೀರ್ ಹ್ಯುಂಡೈ ಕಾರು ಬಹಿಷ್ಕರಿಸಿ ಅಭಿಯಾನ ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್ ಆಗಿದೆ. ಹ್ಯುಂಡೈ ವಿರುದ್ಧ ಭಾರತೀಯರು ಆಕ್ರೋಶ, ಟೀಕೆಗಳನ್ನು ವ್ಯಕ್ತಪಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲು ಆರಂಭಿಸಿದ್ದಾರೆ.
ಇದಕ್ಕೆ ಕಾರಣ ಕಾಶ್ಮೀರ ಪ್ರತ್ಯೇಕತೆಯ ಕೂಗು ಹಾಗೂ ಹ್ಯುಂಡೈ ನಿಲುವಾಗಿತ್ತು. ಫೆಬ್ರವರಿ 5ರಂದು ಪಾಕಿಸ್ತಾನ ಕಾಶ್ಮೀರ ದಿನ ಎಂದು ಆಚರಿಸುತ್ತದೆ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದೆ, ಇದರ ವಿಮೋಚನೆ ಅಗತ್ಯ. ಇದಕ್ಕಾಗಿ ಪಾಕಿಸ್ತಾನ ಕಾಶ್ಮೀರ ದಿನ ಎಂದು ಆಚರಿಸಿ ಭಾರತವನ್ನು ಕೆಣಕುವ ಹಾಗೂ ಎಚ್ಚರಿಸುವ ಕೆಲಸ ಪ್ರತಿ ವರ್ಷ ಮಾಡುತ್ತಿದೆ.












Click it and Unblock the Notifications