ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ
ಬೆಂಗಳೂರು, ಮೇ 17 : ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪಕ್ಷ ಕಳಪೆ ಸಾಧನೆ ಮಾಡಿದ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎನ್ ಡಿಎ ಜೊತೆಗಿನ ಜೆಡಿಯು ಮೈತ್ರಿಯನ್ನು ಕಡಿದುಕೊಂಡಿದ್ದ ನಿತೀಶ್ ಕುಮಾರ್, ಲೋಕಸಭೆ ಚುಣಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದ ಮರುದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶನಿವಾರ ಮಧ್ಯಾಹ್ನ ರಾಜ್ಯಪಾಲ ಡಿ.ವೈ.ಪಾಟೀಲ್ ಅವರನ್ನು ಭೇಟಿ ಮಾಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಶುಕ್ರವಾರ ಪ್ರಕಟಗೊಂಡ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಜೆಡಿಯು ಕೇವಲ 2 ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿತ್ತು. ಆದ್ದರಿಂದ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. [ಮೇ 21ಕ್ಕೆ ನಿತೀಶ್ ಸರ್ಕಾರ ಪತನ]

ಬಿಹಾರದ ಒಟ್ಟು 40 ಲೋಕಸಭಾ ಸ್ಥಾನಗಳ ಪೈಕಿ ಜೆಡಿಯು ಪಕ್ಷ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ದಾಖಲಿಸಿದ್ದು, ಬಿಹಾರದಲ್ಲಿ ಮುಖ್ಯಮಂತ್ರಿಯಾಗಿದ್ದೂ ಕಳಪೆ ಸಾಧನೆ ತೋರಿದ ಹಿನ್ನಲೆಯಲ್ಲಿ ರಾಜಿನಾಮೆ ಸಲ್ಲಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಹತೇಕ ಸ್ಥಾನಗಳು ಬಿಜೆಪಿ-ಎಲ್‌ಜೆಪಿ ಮೈತ್ರಿಕೂಟದ ಪಾಲಾಗಿರುವುದಕ್ಕೆ ಜೆಡಿಯು ಪಕ್ಷದೊಳಗೆ ಬಂಡಾಯ ಆರಂಭವಾಗಿತ್ತು ಇದನ್ನು ಕಂಡು ಆಘಾತಗೊಂಡಿರುವ ಸಿಎಂ ನಿತೀಶ್‌ಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜೀನಾಮೆ ನೀಡಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ನಿತೀಶ್ ಕುಮಾರ್ ಸೋಲಿನ ಸಂಪೂರ್ಣ ಹೊಣೆಯನ್ನು ನಾನು ಹೊರುತ್ತೇನೆ ಎಂದು ಹೇಳಿದರು.
ನಿತೀಶ್ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು
* ಮತ್ತೊಮ್ಮೆ ಜನಾದೇಶ ಪಡೆಯಲು ಬಯಸಿ ರಾಜೀನಾಮೆ ನೀಡಿದ್ದೇನೆ. ಮುಂದೆಯೂ ಜನರ ಸೇವೆ ಮಾಡುವೆ
* 40ರಲ್ಲಿ ಕೇವಲ 2 ಸ್ಥಾನ ದೊರಕಿದೆ ನಾನು ಜನಾದೇಶವನ್ನು ಗೌರವಿಸುತ್ತೇನೆ.
*ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿಲ್ಲ.
* ಕಳೆದ ಚುನಾವಣೆಯಲ್ಲಿ ನಾವು 20 ಸ್ಥಾನ ಗಳಿಸಿದ್ದೆವು, ಈ ಬಾರಿ ಎರಡು ಸ್ಥಾನ ಮಾತ್ರಗಳಿಸಿದ್ದೇವೆ.
* ಜನಾದೇಶ ಗೌರವಿಸಿ ರಾಜೀನಾಮೆ ನೀಡಿದ್ದೇನೆ, ಯಾವುದೇ ಪಕ್ಷ ಸರ್ಕಾರ ರಚಿಸಿದರೂ ಸ್ವಾಗತ.












Click it and Unblock the Notifications