40 ಲಕ್ಷದ 'ವಿವಾಹ ಪಟ್ಟು' ಸೀರೆ, ಮುತ್ತು ರತ್ನಗಳ ವಿನ್ಯಾಸ! ನೀತಾ ಅಂಬಾನಿ ಉಡುವ ದುಬಾರಿ ಸೀರೆಗಳ ರಹಸ್ಯವೇನು?
ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರ ಫ್ಯಾಷನ್ ಸೆನ್ಸ್ ಮತ್ತು ಉಡುಗೆ-ತೊಡುಗೆಗಳು ಸದಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತವೆ. ಪಾಶ್ಚಿಮಾತ್ಯ ಉಡುಪುಗಳಿಗಿಂತ ಹೆಚ್ಚಾಗಿ ಭಾರತೀಯ ಸಾಂಪ್ರದಾಯಿಕ ಸೀರೆಗಳೆಂದರೆ ನೀತಾ ಅವರಿಗೆ ಅಚ್ಚುಮೆಚ್ಚು. ಅವರು ಉಡುವ ಸೀರೆಗಳು ಕೇವಲ ದುಬಾರಿಯಷ್ಟೇ ಅಲ್ಲ, ಅವು ಭಾರತೀಯ ಪರಂಪರೆ, ಕಲೆ ಮತ್ತು ನೇಕಾರರ ಶ್ರಮವನ್ನು ಪ್ರತಿಬಿಂಬಿಸುತ್ತವೆ.
ಅದ್ದೂರಿ ಕಸೂತಿ, ರೇಷ್ಮೆ ಮತ್ತು ವಜ್ರ-ವೈಡೂರ್ಯಗಳಿಂದ ಕಂಗೊಳಿಸುವ ನೀತಾ ಅಂಬಾನಿ ಅವರ ಸೀರೆಗಳ ಆಯ್ಕೆ ಹಾಗೂ ವಿನ್ಯಾಸದ ಹಿಂದಿನ ಮಾಹಿತಿಯನ್ನ ಇಲ್ಲಿ ನೋಡೋಣ ಬನ್ನಿ.

ನೀತಾ ಅಂಬಾನಿ ಅವರ ಸೀರೆ ಸಂಗ್ರಹದಲ್ಲಿ ಭಾರತದ ಅಪರೂಪದ ಹಾಗೂ ಪಾರಂಪರಿಕ ಕಲೆಗಾರಿಕೆ ಎದ್ದು ಕಾಣುತ್ತದೆ. ಕಾಂಚೀವರಂ, ತಂತ್, ಪಟೋಲಾ, ಬನಾರಸಿ ಕಟಾನ್ ಸಿಲ್ಕ್, ಹಾಗೂ ಕಾಂಥಾ ಎಂಬ್ರಾಯ್ಡರಿಯಂತಹ ನಿಜವಾದ ಕರಕುಶಲ ಸೀರೆಗಳನ್ನ ಅವರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಈ ಸೀರೆಗಳ ಮತ್ತೊಂದು ವಿಶೇಷತೆಯೆಂದರೆ, ಇವುಗಳಲ್ಲಿ ಅಪ್ಪಟ ಚಿನ್ನದ ಎಳೆಗಳಿಂದ ನೆಯ್ದ ಜರಿ ಇರುತ್ತದೆ. ಜೊತೆಗೆ ವಜ್ರಗಳು, ರತ್ನಗಳು, ಹಸಿರು ಎಮರಾಲ್ಡ್ ಹಾಗೂ ಮುತ್ತುಗಳನ್ನ ಬಳಸಿ ಈ ಸೀರೆಗಳನ್ನ ಮತ್ತಷ್ಟು ಶ್ರೀಮಂತವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಮೆಟ್ ಗಾಲಾ, ವೈಟ್‌ಹೌಸ್ ಔತಣಕೂಟದಂತಹ ಅಂತರಾಷ್ಟ್ರೀಯ ವೇದಿಕೆಗಳಲ್ಲೂ ಅವರು ಸೀರೆಯುಟ್ಟು ಭಾರತೀಯ ಸಂಸ್ಕೃತಿಯನ್ನ ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ.
ನೀತಾ ಅಂಬಾನಿ ಫ್ಯಾಷನ್ ಡಿಸೈನರ್‌ಗಳು ಯಾರು?
ದೇಶದ ಖ್ಯಾತ ಫ್ಯಾಷನ್ ವಿನ್ಯಾಸಕರ ಕೈಚಳಕ ನೀತಾ ಅವರ ಸೀರೆಗಳಲ್ಲಿ ಅಡಗಿದೆ. ರಾಯಲ್, ಚಿಕನ್‌ಕಾರಿ ಹಾಗೂ ಜರ್ದೋಸಿ ಶೈಲಿಯ ಸೀರೆಗಳಿಗಾಗಿ ಅವರು ಅಬು ಜಾನಿ-ಸಂದೀಪ್ ಖೋಸ್ಲಾ ಅವರ ವಿನ್ಯಾಸವನ್ನ ಆಯ್ಕೆ ಮಾಡುತ್ತಾರೆ. ಸಬ್ಯಸಾಚಿ ಮುಖರ್ಜಿ ಅವರು ಸಿದ್ಧಪಡಿಸಿದ ಬನಾರಸಿ ಸಿಲ್ಕ್ ಮತ್ತು ಕೆಂಪು-ಚಿನ್ನದ ಬಣ್ಣದ ಸೀರೆಗಳು ನೀತಾ ಅವರ ಫೇವರಿಟ್.
ಇನ್ನು ಆಧುನಿಕ ಸ್ಪರ್ಶವಿರುವ ಟಿಶ್ಯೂ ಸಿಲ್ಕ್ ಹಾಗೂ ಸೀಕ್ವಿನ್ ವಿನ್ಯಾಸಗಳಿಗೆ ಮನೀಶ್ ಮಲ್ಹೋತ್ರಾ ಅವರನ್ನ ಅವಲಂಬಿಸಿದ್ದಾರೆ. ಭಾರತೀಯ ಹಸ್ತಚಾಲಿತ ನೇಕಾರರನ್ನ ಬೆಂಬಲಿಸುವ ಉದ್ದೇಶದಿಂದ ರಿಲಯನ್ಸ್ ಸ್ವದೇಶ್ ಯೋಜನೆಯಡಿ ತಯಾರಾದ ಸೀರೆಗಳನ್ನೂ ಅವರು ಧರಿಸುತ್ತಾರೆ.
40 ಲಕ್ಷದ ವಿವಾಹ ಪಟ್ಟು ಸೀರೆ ಮತ್ತು ಶ್ರೀಕೃಷ್ಣನ ರವಿಕೆ!
ನೀತಾ ಅಂಬಾನಿ ಬಳಿ ಇರುವ ಸೀರೆಗಳ ಪೈಕಿ ಅತ್ಯಂತ ಹೆಚ್ಚು ಚರ್ಚೆಯಾದ ಮತ್ತು ದುಬಾರಿಯಾದ ಸೀರೆ ಎಂದರೆ 'ವಿವಾಹ ಪಟ್ಟು ಸೀರೆ'. ಇದರ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿಗಳು. 'ಚೆನ್ನೈ ಸಿಲ್ಕ್ಸ್' ನಿರ್ದೇಶಕ ಶಿವಲಿಂಗಮ್ ಅವರು ಈ ಅದ್ಭುತ ಸೀರೆಯನ್ನ ವಿನ್ಯಾಸಗೊಳಿಸಿದ್ದರು. ನಿಜವಾದ ಚಿನ್ನದ ಎಳೆಗಳಿಂದ ನೆಯ್ದ ಈ ಸೀರೆಯಲ್ಲಿ ಮಾಣಿಕ್ಯ, ಪನ್ನಾ (ಎಮರಾಲ್ಡ್), ಸಫೈರ್ ಮತ್ತು ವಜ್ರಗಳನ್ನ ಅತ್ಯಂತ ನಾಜೂಕಾಗಿ ಅಳವಡಿಸಲಾಗಿತ್ತು.
ವಿಶೇಷವೆಂದರೆ, ಈ ಸೀರೆಯ ರವಿಕೆಯ ಹಿಂಭಾಗದಲ್ಲಿ ನಾಥದ್ವಾರದ ಶ್ರೀ ಕೃಷ್ಣನ ಚಿತ್ರವನ್ನು ಸುಂದರವಾಗಿ ಕಸೂತಿ ಮಾಡಲಾಗಿತ್ತು.
ನೀತಾ ಅಂಬಾನಿ ಸೀರೆ ಸ್ಟೈಲಿಂಗ್ ರಹಸ್ಯ
ಅತ್ಯಮೂಲ್ಯವಾದ ಸೀರೆಗಳಿಗೆ ತಕ್ಕಂತೆ ನೀತಾ ಅವರು ರಾಯಲ್ ಜ್ಯುವೆಲರಿಯನ್ನ ಧರಿಸುತ್ತಾರೆ. ವಿರಳವಾದ ಹಸಿರು ಪನ್ನಾ, ವಜ್ರದ ಹಾರಗಳು ಹಾಗೂ ಕಾಂಚೀವರಂ ಸೀರೆಗೆ ಹೊಂದುವಂತಹ ಟೆಂಪಲ್ ಜ್ಯುವೆಲರಿ ಅವರ ಆಯ್ಕೆಯಾಗಿರುತ್ತದೆ.
ಮೊಣಕೈವರೆಗೆ ಇರುವ ಸಾಂಪ್ರದಾಯಿಕ ಜರ್ದೋಸಿ ಅಥವಾ ಶ್ರೀಕೃಷ್ಣನ ಚಿತ್ರವಿರುವ ಹೆವಿ ಡಿಸೈನರ್ ರವಿಕೆಗಳನ್ನ ಅವರು ಧರಿಸುತ್ತಾರೆ. ಲೋ-ಬನ್ ಹೇರ್‌ಸ್ಟೈಲ್, ತಲೆಗೊಂದು ಹೂವು, ಹಣೆಗೊಂದು ಸಣ್ಣ ಬಿಂದಿ ಹಾಗೂ ಸಿಂಪಲ್ ಮೇಕಪ್ ಅವರ ಸಿಗ್ನೇಚರ್ ಲುಕ್ ಅನ್ನು ಕಂಪ್ಲೀಟ್ ಮಾಡುತ್ತದೆ.
ಸೀರೆಯ ಬಗ್ಗೆ ಹೇಳುವಾಗ ನೀತಾ ಅವರು, "ಸೀರೆಯು ಕೇವಲ ಒಂದು ಉಡುಗೆಯಲ್ಲ, ಅದು ನಮ್ಮ ದೇಶದ ಶತಮಾನಗಳ ಇತಿಹಾಸ ಮತ್ತು ನೇಕಾರರ ಶ್ರಮದ ಸಂಕೇತ. ಜಾಗತಿಕ ವೇದಿಕೆಯಲ್ಲಿ ಸೀರೆಯನ್ನು ಧರಿಸುವುದು ನಮಗೆ ಹೆಮ್ಮೆಯ ವಿಷಯ" ಎಂದು ಹೇಳಿಕೊಳ್ಳುತ್ತಾರೆ.


Click it and Unblock the Notifications
