5 ತಿಂಗಳ ಸತತ ಶ್ರಮ, 9ನೇ ಶತಮಾನದ ವಿನ್ಯಾಸ: ನೀತಾ ಅಂಬಾನಿ ಉಟ್ಟಿರುವ ಈ ಆಶಾವಾಲಿ ಸೀರೆಯ ವಿಶೇಷತೆ ಏನು ಗೊತ್ತಾ?
ಭಾರತೀಯ ಫ್ಯಾಷನ್ ಜಗತ್ತಿನಲ್ಲಿ ನೀತಾ ಅಂಬಾನಿ ಅವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಕೇವಲ ಆಧುನಿಕ ಉಡುಗೆಗಳಷ್ಟೇ ಅಲ್ಲದೆ, ತಮ್ಮ ವಿಶಿಷ್ಟ ಹಾಗೂ ಸಾಂಪ್ರದಾಯಿಕ ಉಡುಗೆಗಳ ಮೂಲಕ ಅವರು ಭಾರತದ ಮರೆಯಾಗುತ್ತಿರುವ ನೇಯ್ಗೆ ಮತ್ತು ಕರಕುಶಲ ಕಲೆಗಳಿಗೆ ಜಾಗತಿಕ ಮಟ್ಟದಲ್ಲಿ ಮರುಜೀವ ನೀಡುತ್ತಿದ್ದಾರೆ.
ಪಾಪ್ ಸಂಸ್ಕೃತಿಯಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆಯಾಗಿರುವ ನೀತಾ ಅಂಬಾನಿ ಅವರು ಇತ್ತೀಚೆಗೆ ತಮ್ಮ ಕುಶಲಕರ್ಮಿ-ಕೇಂದ್ರಿತ ಚಿಲ್ಲರೆ ಮತ್ತು ಸಾಂಸ್ಕೃತಿಕ ಉಪಕ್ರಮವಾದ 'ಸ್ವದೇಶ್'ನ ಮೊದಲ ವಾರ್ಷಿಕೋತ್ಸವವನ್ನ ಅತ್ಯಂತ ಸಡಗರದಿಂದ ಆಚರಿಸಿದರು.

ಈ ವಿಶೇಷ ಸಂದರ್ಭಕ್ಕಾಗಿ ಅವರು ಗುಜರಾತ್‌ನ ಅಪರೂಪದ ಹಾಗೂ ಅತ್ಯಂತ ಸಂಕೀರ್ಣವಾದ ನೇಯ್ಗೆಯ 'ಆಶಾವಾಲಿ ಬ್ರೊಕೇಡ್ ಸೀರೆ'ಯನ್ನ ಆಯ್ಕೆ ಮಾಡಿಕೊಂಡಿದ್ದರು. ಮೂರನೇ ತಲೆಮಾರಿನ ನೇಕಾರ ಹಾಗೂ ಜವಳಿ ಪುನರುಜ್ಜೀವಕ ಪರೇಶ್ ಪಟೇಲ್ ಅವರು ಹುಟ್ಟುಹಾಕಿದ ರಾಯಲ್ ಬ್ರೊಕೇಡ್ಸ್ ಬ್ರ್ಯಾಂಡ್‌ನಿಂದ ಈ ಅದ್ಭುತ ಸೀರೆಯನ್ನ ವಿನ್ಯಾಸಗೊಳಿಸಲಾಗಿದೆ.
ಆಶಾವಾಲಿ ಸೀರೆಯ ಇತಿಹಾಸ
ನೀತಾ ಅಂಬಾನಿ ಅವರು ಉಟ್ಟಿರುವ ಈ ಆಶಾವಾಲಿ ಸೀರೆಯು ಗುಜರಾತ್ ಜವಳಿ ಪರಂಪರೆಯ ಶ್ರೇಷ್ಠತೆಯನ್ನಾ ಸಾರುವ ಒಂದೊಳ್ಳೆ ಉದಾಹರಣೆಯಾಗಿದೆ. ಗುಜರಾತ್‌ನ ರಿಡ್ರೋಲ್ ಎಂಬ ಸಣ್ಣ ಗ್ರಾಮದಲ್ಲಿ ಕೈಮಗ್ಗದಲ್ಲಿ ಈ ಸೀರೆಯನ್ನ ಬಹಳ ಶ್ರದ್ಧೆಯಿಂದ ಸಿದ್ಧಪಡಿಸಲಾಗಿದೆ.
ನೂಲಿಗೆ ಬಣ್ಣ ಹಾಕುವುದು, ವಾರ್ಪಿಂಗ್ ಮತ್ತು ನೇಯ್ಗೆಯ ಸಂಪೂರ್ಣ ಜವಾಬ್ದಾರಿಯನ್ನ ಹೊತ್ತ ಇಬ್ಬರು ನುರಿತ ಕುಶಲಕರ್ಮಿಗಳು ಈ ಒಂಧು ಸೀರೆಯನ್ನ ತಯಾರಿಸಲು ಸತತ ಐದು ತಿಂಗಳುಗಳ ಕಾಲ ಹಗಲಿರುಳು ಶ್ರಮಿಸಿದ್ದಾರೆ ಎಂದು ಪರೇಶ್ ಪಟೇಲ್ ಹಂಚಿಕೊಂಡಿದ್ದಾರೆ.
9ನೇ ಶತಮಾನದ ಈ ಐತಿಹಾಸಿಕ ನೇಯ್ಗೆಯನ್ನ ವಿಶೇಷವಾಗಿ ಆಶಾವಾಲ್ ಸಾಮ್ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಸಾಬರಮತಿ ನದಿಯ ಪೂರ್ವ ದಂಡೆಯಲ್ಲಿರುವ ಈ ಐತಿಹಾಸಿಕ ಪ್ರದೇಶವೇ ಇಂದಿನ ಅಹಮದಾಬಾದ್ ನಗರವಾಗಿದೆ. ಸಾಂಪ್ರದಾಯಿಕ ಜಾಲಾ ಮಗ್ಗದಲ್ಲಿ ನೇಯ್ದ ಈ ಸೀರೆಯು ಭಾರತೀಯ ಇತಿಹಾಸದ ಮತ್ತು ಕರಕುಶಲತೆಯ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುತ್ತದೆ.
ಸೀರೆಯ ವಿನ್ಯಾಸ ಹಾಗೂ ಮನೀಶ್ ಮಲ್ಹೋತ್ರಾ ಬ್ಲೌಸ್
ಈ ಸುಂದರವಾದ ಪಾರಂಪರಿಕ ಸೀರೆಯು 'ಹಾಥಿ ಮೋರ್ ಜಂಗ್ಲಾ' ಎಂದು ಕರೆಯಲ್ಪಡುವ ಆನೆ ಮತ್ತು ನವಿಲುಗಳ ಪಾರಂಪರಿಕ ಲಕ್ಷಣಗಳನ್ನ ಒಳಗೊಂಡಿದೆ. ಪೇಸ್ಲಿ ಬುಟ್ಟಾಗಳು ಮತ್ತು ಜ್ಯಾಮಿತೀಯ ವಿನ್ಯಾಸಗಳು ಇದರ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸಿವೆ. ಪರೇಶ್ ಪಟೇಲ್ ಅವರ ಅಜ್ಜ ಇದೇ ಶೈಲಿಯ ನೇಯ್ಗೆಯನ್ನ ಮಾಡುತ್ತಿದ್ದರು ಎಂಬುದು ಇದರ ವಿಶೇಷ.
ಸೀರೆಯ ಅಂಚು (ಬಾರ್ಡರ್) ಆಕರ್ಷಕ ಗಿಳಿಗಳ ವಿನ್ಯಾಸವನ್ನ ಹೊಂದಿದ್ದು, ಮೀನಾಕರಿ-ಪ್ರೇರಿತ ಶೈಲಿಯಲ್ಲಿದೆ. ಸೀರೆಯ ಸೆರಗು ಸಾಂಕೇತಿಕ 'ಟ್ರೀ ಆಫ್ ಲೈಫ್' ವಿನ್ಯಾಸವನ್ನ ಹೊಂದಿದ್ದು, ಹೂದಾನಿಗಳು ಮತ್ತು ಮೀನಾಕರಿ ಕೆಲಸಗಳಿಂದ ಕಂಗೊಳಿಸುತ್ತಿದೆ.
ಈ ಸೀರೆಗೆ ತಕ್ಕಂತೆ ಪ್ರಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಬ್ಲೌಸ್ ವಿನ್ಯಾಸಗೊಳಿಸಿದ್ದಾರೆ. ನೀತಾ ಅಂಬಾನಿ ಅವರ ಬಳಿ ಇದ್ದ ಹಳೆಯ ವೆಲ್ವೆಟ್ ಕೋಟಿ (ವೆಸ್ಟ್) ಯಲ್ಲಿನ ಸುಂದರ ಕಸೂತಿ ಕೆಲಸವನ್ನ ಆಧರಿಸಿ, ಮನೀಶ್ ಮಲ್ಹೋತ್ರಾ ಅವರು ಚಿನ್ನದ ಬಣ್ಣದ ಹೂವಿನ ವಿನ್ಯಾಸಗಳೊಂದಿಗೆ ಈ ಬ್ಲೌಸ್ ಅನ್ನ ಸಂಪೂರ್ಣವಾಗಿ ಹೊಸ ರೂಪದಲ್ಲಿ ಮರುಸೃಷ್ಟಿಸಿದ್ದಾರೆ.
ಭಾರತೀಯ ಫ್ಯಾಷನ್ ಜಗತ್ತಿನಲ್ಲಿ ಗಮನ ಸೆಳೆದ ಆಭರಣಗಳು
ತಮ್ಮ ಸಾಂಪ್ರದಾಯಿಕ ಉಡುಗೆಯನ್ನ ಮತ್ತಷ್ಟು ಆಕರ್ಷಕವಾಗಿಸಲು ನೀತಾ ಅಂಬಾನಿ ಅವರು ತಮ್ಮಲ್ಲಿದ್ದ ಬೆಲೆಬಾಳುವ ಆಭರಣಗಳನ್ನ ಧರಿಸಿದ್ದರು. ವಜ್ರದ ಕಿವಿಯೋಲೆಗಳು (ಡ್ಯಾಂಗ್ಲರ್ಸ್), ಕೆಂಪು ಹರಳುಗಳ ನೆಕ್ಲೇಸ್, ಮತ್ತು ಮಾಣಿಕ್ಯಗಳಿಂದ ಅಲಂಕರಿಸಲ್ಪಟ್ಟ ಬಳೆಗಳು ಹಾಗೂ ಉಂಗುರವು ಭಾರತೀಯ ಫ್ಯಾಷನ್ ಪ್ರಿಯರ ಗಮನವನ್ನು ಸೆಳೆದಿದೆ.
ಸೀರೆ ಮತ್ತು ಆಭರಣಗಳ ಭವ್ಯತೆಯನ್ನ ಎತ್ತಿತೋರಿಸುವ ಉದ್ದೇಶದಿಂದ, ಅವರು ತಮ್ಮ ಕೇಶವಿನ್ಯಾಸ ಮತ್ತು ಮೇಕಪ್ ಅತ್ಯಂತ ಸರಳವಾಗಿ ಮತ್ತು ನೈಸರ್ಗಿಕವಾಗಿರಿಸಿಕೊಂಡಿದ್ದರು.
ಫ್ಯಾಷನ್ ತಜ್ಞರ ಸಲಹೆ
ನೀತಾ ಅಂಬಾನಿ ಅವರ ಸ್ವದೇಶ್ ವಾರ್ಷಿಕೋತ್ಸವ ಕಾರ್ಯಕ್ರಮ ಕೇವಲ ಭಾರತೀಯ ಕಲೆಯ ಆಚರಣೆಯಷ್ಟೇ ಅಲ್ಲದೆ, ಫ್ಯಾಷನ್ ಲೋಕಕ್ಕೆ ಹೊಸ ಟ್ರೆಂಡ್ ಅನ್ನ ಸಹ ಪರಿಚಯಿಸಿದೆ. ವೋಗ್ ಇಂಡಿಯಾದ ಫ್ಯಾಷನ್ ಫೀಚರ್ಸ್ ಸಂಪಾದಕಿ ಅಶ್ವಿನಿ ಅರುಣ್ ಕುಮಾರ್ ಅವರು ಈ ಲುಕ್ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಸೀರೆಯ ಬ್ಲೌಸ್ ಜೊತೆಗೆ ಕೋಟಿಯನ್ನ ಲೇಯರ್ ಮಾಡುವ ಕಲ್ಪನೆ ನನಗೆ ತುಂಬಾ ಇಷ್ಟವಾಯಿತು. ನೀತಾ ಅಂಬಾನಿ ಅವರಂತಹ ಬೆಲೆಬಾಳುವ ಆಭರಣಗಳ ಸಂಗ್ರಹವಿಲ್ಲದಿದ್ದರೂ, ಫ್ಯಾಷನ್ ಪ್ರಿಯರು ಇಂತಹ ಪಾರಂಪರಿಕ ಸೀರೆಯೊಂದಿಗೆ ಪುರಾತನ ಚಿನ್ನದ ದೇವಾಲಯದ ಆಭರಣಗಳು (ಟೆಂಪಲ್ ಜ್ಯುವೆಲರಿ) ಅಥವಾ ಮೀನಾಕರಿ ವಿನ್ಯಾಸದ ಪೋಲ್ಕಿ ಚೋಕರ್ ಅನ್ನು ಧರಿಸಬಹುದು. ದೊಡ್ಡ ಕಿವಿಯೋಲೆಗಳ ಬದಲಾಗಿ ಸರಳವಾದ ಸ್ಟಡ್‌ಗಳನ್ನೂ ಕೂಡ ಬಳಸಬಹುದು" ಎಂದು ಅವರು ಸಲಹೆ ನೀಡಿದ್ದಾರೆ.


Click it and Unblock the Notifications
