ಮಹಿಳೆಯರೇ ನಿರ್ಭಯದಿಂದಿರಿ, ನಿಮ್ಮ ಕೈಲಿರಲಿ 'ನಿರ್ಭೀಕ್' ರಿವಾಲ್ವರ್
ಕಾನ್ಪುರ, ಜುಲೈ 20 : ತಮ್ಮ ಮೇಲೆ ಕಾಮಿಗಳು ಅತ್ಯಾಚಾರ ಎಸಗುತ್ತಾರೆಂಬ ಭಯ ಇನ್ನು ಮಹಿಳೆಯರಿಗೆ ಬೇಡ. ದೈಹಿಕ ವಾಂಛೆ ತೀರಿಸಿಕೊಳ್ಳಲು ಮೈಮೇಲೆರಗುವ ಕಾಮಿಗಳನ್ನು ಸುಟ್ಟುಹಾಕಲು 'ನಿರ್ಭೀಕ್' ಎಂಬ ಪುಟ್ಟ ರಿವಾಲ್ವರೊಂದರನ್ನು ಮಹಿಳೆಯರಿಗಾಗಿಯೇ ತಯಾರಿಸಲಾಗಿದೆ.
ಏಳು ವರ್ಷಗಳ ಹಿಂದೆ ದೆಹಲಿಯಲ್ಲಿ 'ನಿರ್ಭಯಾ'ಳ ಮೇಲೆ ನಡೆಸ ಭೀಕರ ಅತ್ಯಾಚಾರ, ದೈಹಿಕ ದೌರ್ಜನ್ಯದ ನಂತರ, ಮಹಿಳೆಯರ ಸುರಕ್ಷತೆಗೆಂದು ಕಾನ್ಪುರದಲ್ಲಿರುವ ಆರ್ಡನನ್ಸ್ ಫ್ಯಾಕ್ಟರಿ, ಕಡಿಮೆ ತೂಕದ, ಮಿರಿಮಿರಿ ಮುರುಗುವ ಈ ಕಪ್ಪು ರಿವಾಲ್ವರನ್ನು ತಯಾರಿಸಿದೆ.
ಗಂಡಸರನ್ನು ಸಮರ್ಥವಾಗಿ ಎದುರಿಸಲು, ಅತ್ಯಾಚಾರವನ್ನು ತಡೆಗಟ್ಟಲು ಆತ್ಮರಕ್ಷಣೆಗೆಂದು ಈ ರಿವಾಲ್ವರನ್ನು ಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದಾರೆ. ದೆಹಲಿ, ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ಈಗಾಗಲೆ 2,500 ರಿವಾಲ್ವರುಗಳನ್ನು ಮಾರಾಟ ಮಾಡಲಾಗಿದೆ.

"ಮಹಿಳೆಯರ ಆತ್ಮರಕ್ಷಣೆಗೆಂದು, ತಮ್ಮ ಪರ್ಸಿನಲ್ಲಿ ಆರಾಮವಾಗಿ ಇಟ್ಟುಕೊಳ್ಳಬಹುದಾದ ಪುಟಾಣಿ ರಿವಾಲ್ವರನ್ನು ತಯಾರಿಸಲಾಗಿದೆ" ಎಂದು ಅಂತಾರಾಷ್ಟ್ರೀಯ ಪೊಲೀಸ್ ಪ್ರದರ್ಶನವೊಂದರಲ್ಲಿ ಆರ್ಡನನ್ಸ್ ಫ್ಯಾಕ್ಟರಿಯ ಪ್ರತಿನಿಧಿಯೊಬ್ಬರು ವಿವರ ನೀಡಿದ್ದಾರೆ.
ಸಾಮಾನ್ಯ ರಿವಾಲ್ವರ್ 700 ಗ್ರಾಂ ತೂಗಿದರೆ, ನಿರ್ಭೀಕ್ ರಿವಾಲ್ವರ್ ಕೇವಲ 500 ಗ್ರಾಂ ತೂಗುತ್ತದೆ. ಕಡಿಮೆ ತೂಕ ಮತ್ತು ಅತ್ಯುತ್ತಮ ಯಶಸ್ಸು ನೀಡಿದ್ದರಿಂದಾಗಿ ಮಹಿಳೆಯರಲ್ಲಿ ಈ ರಿವಾಲ್ವರ್ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಇದರ ನಿರ್ವಹಣೆಗೆ ಕೂಡ ಹೆಚ್ಚಿನ ಹಣ ಅಥವಾ ಸಮಯ ವ್ಯಯಿಸಬೇಕಿಲ್ಲ.
ಆದರೆ, ಈ ರಿವಾಲ್ವರನ್ನು ಕೊಳ್ಳುವ ಮುನ್ನ ಅದರ ಬೆಲೆಯನ್ನೊಮ್ಮೆ ತಿಳಿದುಕೊಳ್ಳುವುದು ಉತ್ತಮ. ಇತರ ರಿವಾಲ್ವರುಗಳು 1 ಲಕ್ಷ ರು.ವರೆಗೆ ತಗುಲಿದರೆ, ನಿರ್ಭೀಕ್ ರಿವಾಲ್ವರಿನ ಆರಂಭಿಕ ಬೆಲೆಯನ್ನೇ 1.20 ಲಕ್ಷ ರು.ಗೆ ನಿಗದಿಗೊಳಿಸಲಾಗಿತ್ತು. ಇದೀಗ ಜಿಎಸ್ಟಿ ಎಲ್ಲ ಸೇರಿ 1.4 ಲಕ್ಷ ರು.ನಿಂದ 1.5 ಲಕ್ಷ ರು.ವರೆಗೆ ಬೀಳುತ್ತದೆ.
7.65 ಮಿ.ಮೀ. ಬೋರ್ ಕ್ಯಾಲಿಬರ್ ಇರುವ ಈ ಪುಟಾಣಿ ರಿವಾಲ್ವರನ್ನು ಬಳಸಿ 10ರಿಂದ 15 ಮೀಟರ್ ದೂರದಲ್ಲಿರುವ ವ್ಯಕ್ತಿಯ ಮೇಲೆ ಗುಂಡು ಹಾರಿಸಬಹುದು.
ಪ್ರತಿರೋಧ : ಈ ರಿವಾಲ್ವರ್ ತಯಾರಿಸಿ ಮಹಿಳೆಯರ ಕೈಗೆ ನೀಡುತ್ತಿದ್ದುದಕ್ಕೆ ಸಾಕಷ್ಟು ಪ್ರತಿಭಟನೆಯನ್ನೂ ಎದುರಿಸಬೇಕಾಯಿತು. ಇದು ಸರಕಾರದ ವೈಫಲ್ಯವನ್ನು ತೋರಿಸುತ್ತದೆ ಮತ್ತು ಇದನ್ನು ಇಟ್ಟುಕೊಂಡ ಮಹಿಳೆಯರಿಗೆ ಅಪಾಯ ಇನ್ನೂ ಹೆಚ್ಚು. ಇದನ್ನೇ ಬಳಸಿ ದುರುಳರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎದುರಿಸಬಹುದು ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಕೊಳ್ಳುವುದು ಹೇಗೆ? : ಇದನ್ನು ಕೊಳ್ಳುವುದು ಕೂಡ ಅಷ್ಟು ಸುಲಭವಲ್ಲ. ಗನ್ ಲೈಸೆನ್ಸ್ ಇರಬೇಕಾಗುತ್ತದೆ. ಮತ್ತು ಹಲವಾರು ದಾಖಲೆಗಳನ್ನು ಪ್ರಸ್ತುತಪಡಿಸಬೇಕಾಗುತ್ತದೆ. ಆ ಎಲ್ಲ ವಿವರಗಳು ಈ ಕೊಂಡಿಯಲ್ಲಿವೆ.












Click it and Unblock the Notifications