ನೀರವ್ ಬಂಧನ, ಎಲೆಕ್ಷನ್ ಟೈಮಲ್ಲಿ ಒಳ್ಳೆ ಗಿಮಿಕ್ : ಕಾಂಗ್ರೆಸ್
ನವದೆಹಲಿ, ಮಾರ್ಚ್ 20: ಬಹುಕೋಟಿ ಪಿಎನ್ ಬಿ ಹಗರಣದ ರೂವಾರಿ, ಉದ್ಯಮಿ ನೀರವ್ ಮೋದಿ ಬಂಧನದ ಬಗ್ಗೆ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರು ವ್ಯಂಗ್ಯವಾಡಿದ್ದಾರೆ.
ನೀರವ್ ಮೋದಿ ಅವರನ್ನು ಭಾರತದಿಂದ ಎಸ್ಕೇಪ್ ಮಾಡಲು ಬಿಟ್ಟವರು ಇವರೇ, ಇಲ್ಲಿಗೆ ಕರೆ ತರುತ್ತೇವೆ ಎಂದವರೂ ಇವರೇ, ಎಲೆಕ್ಷನ್ ಟೈಮ್ ನಲ್ಲಿ ಬಂಧನ, ಹಸ್ತಾಂತರ, ವಿಚಾರಣೆ ಎಲ್ಲವೂ ನಡೆಯಬಹುದು, ಎಲೆಕ್ಷನ್ ಮುಗಿದ ಬಳಿಕ ಪುನಃ ಲಂಡನ್ ಗೆ ತೆರಳುತ್ತಾರೆ ಅಷ್ಟೇ ಎಂದು ಗುಲಾಂ ನಬಿ ಅಜಾದ್ ಪ್ರತಿಕ್ರಿಯಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ರೂವಾರಿಯಾಗಿರುವ ನೀರವ್ ಮೋದಿ ಅವರನ್ನು ಲಂಡನ್ನಿನಲ್ಲಿ ಬಂಧಿಸಿ, ಕೋರ್ಟಿಗೆ ಹಾಜರುಪಡಿಸಲಾಗುತ್ತಿದೆ. ಈ ನಡುವೆ ನೀರವ್ ಮೋದಿ ಅವರ ಬಂಧನವನ್ನು ಭಾರತದ ಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಹುದು ಎಂದು ಕಾಂಗ್ರೆಸ್ ಕಿಡಿ ಕಾರಿದೆ.
'ನೀರವ್ ಮೋದಿ, ಚೋಕ್ಸಿಯಂತಹ ವ್ಯಕ್ತಿಗಳು ವಿದೇಶಕ್ಕೆ ಪರಾರಿಯಾಗುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒಂದು ವರ್ಷದ ಹಿಂದೆಯೇ ಮಾಹಿತಿ ಇತ್ತು. ಆದರೆ, ಸರ್ಕಾರ ಯಾವುದೇ ತನಿಖಾ ಸಂಸ್ಥೆಗಳನ್ನು ಕಳಿಸಿಲ್ಲ, ಅವರು ಪರಾರಿಯಾಗದಂತೆ ತಡೆದಿಲ್ಲ' ಎಂದಿದ್ದಾರೆ.

ಮಲ್ಯ, ನೀರವ್ ಮೋದಿಗೆ ಬಿಜೆಪಿಯ ನೆರವು
'ವಿಜಯ್ ಮಲ್ಯ, ನೀರವ್ ಮೋದಿ ಅವರು ದೇಶ ತೊರೆಯಲು ಬಿಜೆಪಿ ಸರ್ಕಾರ ನೆರವಾಗಿದ್ದು ಗುಟ್ಟಾಗಿ ಉಳಿದಿಲ್ಲ. ಇದೆ ರೀತಿ ಆರ್ಥಿಕ ಅಪರಾಧಿಗಳು ವಿದೇಶಕ್ಕೆ ಹಾರಿ, ಅಲ್ಲಿಂದ ಚುನಾವಣೆ ಸಂದರ್ಭದಲ್ಲಿ ವಿಚಾರಣೆ ನೆಪದಲ್ಲಿ ಭಾರತಕ್ಕೆ ಬಂದು ಮತ್ತೆ ತೆರಳುತ್ತಾರೆ, ದೇಶದ ಜನತೆಗೆ ಬಿಜೆಪಿಯ ನಾಟಕ ತಿಳಿಯಲಿದೆ ಎಂದು ಆಜಾದ್ ಹೇಳಿದರು.

ಯುಪಿಎ ಸರ್ಕಾರವಿದ್ದಾಗಲೂ ನೀರವ್ ಗೆ ಸಾಲ
ಯುಪಿಎ ಸರ್ಕಾರ ಇದ್ದಾಗ ಕೂಡಾ ವಜ್ರ ಉದ್ಯಮಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರಿಗೆ ನೆರವು ಸಿಕ್ಕಿತ್ತು. ಈ ಬಗ್ಗೆ ಏನು ಹೇಳುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಆಜಾದ್, ಆ ಕಾಲದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಸಾಲದ ಪ್ರಮಾಣ ಮಿತಿ 2 ಲಕ್ಷ ಕೋಟಿ ರು ಇತ್ತು. ಇದನ್ನು ವಾಪಸ್ ಪಡೆಯುವ ಎಲ್ಲಾ ಸಾಧ್ಯತೆಯೂ ಇತ್ತು. ಆದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಈ ಮಿತಿ 10 ಲಕ್ಷ ಕೋಟಿ ರು ಗೇರಿದೆ ಎಂದರು.

ಭಾರತಕ್ಕೆ ಬರಲು ಭಯ ಎಂದಿರುವ ನೀರವ್ ಮೋದಿ
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚಿಸಿ ನೀರವ್ ಮೋದಿ ಪರಾರಿಯಾಗಿದ್ದಾರೆ. 'ಭಾರತಕ್ಕೆ ಬಂದರೆ ನನ್ನ ಮೇಲೆ ದಾಳಿ ನಡೆಯಬಹುದು. ಅಭದ್ರತೆ ಭೀತಿ ನನ್ನನ್ನು ಕಾಡುತ್ತಿದೆ. ಹೀಗಾಗಿ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ' ಎಂದು ನೀರವ್ ಮೋದಿ ಅವರು ವಕೀಲರ ಮೂಲಕ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ. ಇದೇ ರೀತಿ ವಾದವನ್ನು ಲಂಡನ್ ಕೋರ್ಟಿನಲ್ಲಿ ಮಂಡಿಸಿ ಜಾಮೀನು ಪಡೆಯಲು ಮುಂದಾಗಿದ್ದಾರೆ.

ಜಾರಿ ನಿರ್ದೇಶನಾಲಯದ ಬಿಗಿಪಟ್ಟು
ವಿಶೇಷ ಆರ್ಥಿಕ ಅಪರಾಧಿಯಾಗಿರುವ ಉದ್ಯಮಿ ನೀರವ್ ಮೋದಿ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ಜಾರಿ ನಿರ್ದೇಶನಾಲಯವು ಪ್ರಯತ್ನಿಸುತ್ತಿದೆ. ಈ ಕುರಿತಂತೆ ಲಂಡನ್ ಕೋರ್ಟಿನಲ್ಲೂ ಮನವಿ ಸಲ್ಲಿಸಲಾಗಿದೆ. ಈ ನಡುವೆ ಹೊಸ ಕಾಯ್ದೆಯಡಿಯಲ್ಲಿ ನೀರವ್ ಅವರ ಸಾವಿರಾರು ಕೋಟಿ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲು ಜಾರಿ ನಿರ್ದೇಶನಾಲಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.












Click it and Unblock the Notifications