ಗುಜರಾತಿನಲ್ಲಿ ನಡುಬೀದಿ ನಾರಾಯಣನಿಗೂ ಆಧಾರ್ ಭಾಗ್ಯ
ರಾಜಕೋಟ್, ಅ.21: ನಂದನ್ ನಿಲೇಕಣಿ ಸಾರಥ್ಯದ 'ಆಧಾರ್' ಗುರುತಿನ ಚೀಟಿ ಯೋಜನೆಯಲ್ಲಿ ಇನ್ನೂ ಏನೆಲ್ಲಾ ಅವಾಂತರಗಳು ಘಟಿಸಲಿವೆಯೋ!? ಏನಪ್ಪಾ ಅಂದರೆ ವಿವಾದಿತ 'ಆಧಾರ್' ಗುರುತಿನ ಸಂಖ್ಯೆ ಗುಜರಾತಿನ ನಡುಬೀದಿ ನಾರಾಯಣನಿಗೂ ಪ್ರಾಪ್ತಿಯಾಗಿದೆ. ಇದೇನು ಫೋಟೋ ತಿರುವುಮರುವು ಆಗಿ ಹೀಗಾಗಿರಬಹುದು ಎಂದು ಸಮಾಧಾನಪಟ್ಟುಕೊಳ್ಳುವ ಸಂಗತಿಯೇನೂ ಅಲ್ಲ.
ಇದನ್ನು ನಂಬೋದು ಕಷ್ಟವೇ ಆದರೂ...
ಆಧಾರ್ ಕಾರ್ಡ್ ನೀಡುವಾಗ ಮನುಷ್ಯರ ಕಣ್ಣು, ಕೈ ಮುಂತಾದವನ್ನೆಲ್ಲಾ ಹೇಗೆ ಸ್ಕ್ಯಾನ್ ಮಾಡಿ, ಮಾಹಿತಿ ದಾಖಲಿಸಲಾಗುತ್ತದೋ ಹಾಗೆಯೇ ಈ ನಾಯಿಯ ಕಣ್ಣು, ಕೈಕಾಲುಗಳ ಜೈವಿಕ ದಾಖಲೆಯನ್ನೂ ದಾಖಲಿಸಿಕೊಂಡ ಅಧಿಕಾರಿಗಳು ಶ್ವಾನಕ್ಕೆ ಕಾರ್ಡ್ ದಯಪಾಲಿಸಿದ್ದಾರೆ.

'ಆಧಾರ್' ಗುರುತಿನ ಸಂಖ್ಯೆ ಮೂಲಕ ದೇಶದ ಸಮಸ್ತ ನಾಗರಿಕರಿಗೆ ಐಡೆಂಟಿಟಿ ಕಲ್ಪಿಸುತ್ತಿರುವ Unique Identification Authority of India (UIDAI) ಯೋಜನೆಯ ನ್ನು ಸ್ಥಗಿತಗೊಳಿಸಿ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಹೇಳಿರುವ ಬೆನ್ನಿಗೇ ಈ ಅವಾಂತರ ನಡೆದಿರುವುದು ಚೋದ್ಯವೇ ಸರಿ.
ಇಷ್ಟಕ್ಕೂ ಆಧಾರ್ ಕಾರ್ಡು ಪಡೆದ ಸೌಭಾಗ್ಯಶಾಲಿ ನಾಯಿ ಯಾವುದು ಎಲ್ಲಿಯದು? ಅಂತ ಕೆದಕಿದರೆ ಸೀದಾ ಗುಜರಾತಿನ ರಾಜಕೋಟ್ ಗೆ ಹೋಗಬೇಕಾತ್ತದೆ. ಅಲ್ಲಿ 'ಸೋನು' ಹೆಸರಿನ ನಾಯಿಗೆ ಆಧಾರ್ ಕಾರ್ಡು ದಯಪಾಲಿಸಲಾಗಿದೆ. ಈ ಸಾಕು ನಾಯಿಯ ಮನೆ ಮಂದಿ ಕಾರ್ಡ್ ಮಾಡಿಸಲು ಹೋದಾಗ ಆಧಾರ್ ಸಿಬ್ಬಂದಿಯು ನಾಯಿಗೂ ಕಾರ್ಡ್ ಮಾಡಿಸುವಂತೆ ತಿಳಿಸಿದ್ದಾರೆ.
ಹಿಂದುಮುಂದು ಯೋಚಿಸದೆ ಅದಕ್ಕೆ ತಕ್ಷಣ ಸಮ್ಮತಿಸಿದ ಆಧಾರ್ ಅಧಿಕಾರಿಗಳು ನಾಯಿಯ ಕೈಕಾಲು, ಕಣ್ಣಿನ ಮಾದರಿ ಪಡೆದು, ಕಾರ್ಡ್ ನೀಡಿಯೇ ಬಿಟ್ಟಿರು. ಪೀಕಲಾಟಕ್ಕೆ ಇಟ್ಟುಕೊಂಡ ಆಧಾರ್ ಕಾರ್ಡ್ ಯೋಜನೆಯ ಉನ್ನತಾಧಿಕಾರಿಗಳು ಯಡವಟ್ಟು ಮಾಡಿರುವ ಸದರಿ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಿದ್ದಾರೆ.
ಆದರೆ 'ಸೋನು'ಗೆ ವಿತರಿಸಲಾಗಿರುವ ಆಧಾರ್ ಕಾರ್ಡ್ ಅನ್ನು ಹಿಂಪಡೆಯಲಾಗಿದೆಯಾ? ಎಂಬುದು ಇನ್ನೂ ತಿಳಿದುಬಂದಿಲ್ಲ.
ಇಂತಹ ಪ್ರಕರಣಗಳ ಸಂಖ್ಯೆ ಇದುವರೆಗೂ 3858! :
ಇಷ್ಟಕ್ಕೂ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹೆಸರಿನಲ್ಲಿ ಒಬಾಮಾ ಭಾವಚಿತ್ರವಿರುವ ಆಧಾರ್ ಕಾರ್ಡ್ ನೀಡಿರುವ ನಿದರ್ಶನವಿರುವಾಗ, ಗಿಡಮರ, ಪ್ರಾಣಿ ಪಕ್ಷಿಗಳು, ಸಂಸತ್ತೂ ಸೇರಿದಂತೆ ಕಟ್ಟಡಗಳ ಚಿತ್ರ ಸಹಿತ ಆಧಾರ್ ಕಾರ್ಡ್ ವಿತರಿಸಿರುವಾಗ ಇದೇನು ಮಹಾ ಬಿಡಿ! (ಚಿತ್ರ- www.in.com)












Click it and Unblock the Notifications