"ದಿ ರಾಮೇಶ್ವರಂ ಕೆಫೆ" ಬ್ಲಾಸ್ಟ್: ಭಯಾನಕ ಸಂಗತಿ ಬಿಚ್ಚಿಟ್ಟ NIA
ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ದಿ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕೇಸ್ ಬೆನ್ನುಹತ್ತಿದ್ದ ಎನ್‌ಐಎ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. ಇನ್ನು ತನಿಖೆಯು ಅಂತಿಮ ಹಂತಕ್ಕೆ ಬಂದಿದ್ದು, ಈ ನಾಲ್ವರ ವಿರುದ್ಧ ಚಾರ್ಜ್‌ಶೀಟ್ ಕೂಡ ಸಲ್ಲಿಸಿದೆ.
ಚಾರ್ಜ್‌ಶೀಟ್‌ನಲ್ಲಿ ಕೆಲ ಭಯಾನಕ ವಿಚಾರಗಳನ್ನು ಕೂಡ ಎನ್‌ಐಎ ಬಹಿರಂಗಪಡಿಸಿದೆ. ಈ ಕೇಸ್‌ನಲ್ಲಿ ಮುಖ್ಯವಾಗಿ ನಾಲ್ವರು ಆರೋಪಿಗಳಾದ ಮುಜಾಮೀಲ್ ಷರೀಫ್, ಮುಸಾವೀರ್ ಹುಸೇನ್ ಶಜೀಬ್, ಅಬ್ದುಲ್ ಮತೀನ್ ತಾಹಾ, ಮಾಜ್ ಮುನೀರ್ ಅಹ್ಮದ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಮುಸಾವೀರ್ ಹುಸೇನ್ ಶಜೀಬ್ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಐಪಿಸಿ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಪಿಡಿಎಲ್‌ಪಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಸ್ತುತ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
NIA Chargesheets 4 in Rameshwaram Cafe Blast Case pic.twitter.com/H8dBPMwdsx
— NIA India (@NIA_India) September 9, 2024
ಆರೋಪಿಗಳ ಪೈಕಿ ಇಬ್ಬರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರು ಎನ್ನಲಾಗಿದೆ. ಇವರು ಭಯೋತ್ಪಾದಕ ಸಂಘಟನೆಯಾದ ISIS (ಐಸಿಸ್) ಜೊತೆಗೂ ನಂಟು ಹೊಂದಿದ್ದಾರೆ. ಈ ಕೃತ್ಯದಲ್ಲಿ ನಾಲ್ವರು ಕೂಡ ಭಾಗಿಯಾಗಿದ್ದಾರೆ ಎಂದು ಎನ್‌ಐಎ ಉಲ್ಲೇಖಿಸಿದೆ. ತಾಹಾ ಮತ್ತು ಶಾಜಿಬ್ ಅಕ್ರಮವಾಗಿ ಪಡೆದ ಸಿಮ್ ಕಾರ್ಡ್‌ಗಳು ಹಾಗೂ ಬ್ಯಾಂಕ್ ಖಾತೆಗಳನ್ನು ಬಳಸಿದ್ದರು. ಡಾರ್ಕ್ ವೆಬ್‌ನಿಂದ ಡೌನ್‌ಲೋಡ್ ಮಾಡಿದ ವಿವಿಧ ಭಾರತೀಯ ಮತ್ತು ಬಾಂಗ್ಲಾದೇಶದ ಗುರುತಿನ ದಾಖಲೆಗಳನ್ನು ಸಹ ಬಳಸಿದ್ದರು ಎನ್ನಲಾಗಿದೆ.
ರಾಜ್ಯ ಬಿಜೆಪಿ ಕಚೇರಿ ಬ್ಲಾಸ್ಟ್‌ಗೆ ಸಂಚು: ತಾಹಾ ಮತ್ತು ಶಾಜಿಬ್ ಕ್ರಿಪ್ಟೋ ಕರೆನ್ಸಿಗಳ ಮೂಲಕ ಅವರ ಹಣ ಪಡೆದು, ಬೆಂಗಳೂರಿನಲ್ಲಿ ವಿವಿಧ ಹಿಂಸಾಚಾರಗಳನ್ನು ನಡೆಸಲು ಬಳಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದ ದಿನದಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ IED ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನುವ ಆಘಾತಕಾರಿ ವಿಚಾರ ತನಿಖೆ ವೇಳೆ ಹೊರಬಂದಿದೆ. ಈ ಯೋಜನೆ ವಿಫಲವಾದ ನಂತರ ಇಬ್ಬರು ಆರೋಪಿಗಳು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪ್ಲ್ಯಾನ್ ಮಾಡಿದ್ದರು. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಎನ್‌ಐಎ ಹೇಳಿದೆ.

ಮಾರ್ಚ್ 1ರಂದು ಮಧ್ಯಾಹ್ನ 12:55ರ ಹೊತ್ತಿಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಈ ಘಟನೆಯಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ ಅಧಿಕಾರಿಗಳು ಕೃತ್ಯ ಎಸಗಿದ ಆರೋಪಿಗಳಾದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್ ಅನ್ನು ಘಟನೆ ನಡೆದ 43 ದಿನಗಳ ನಂತರ ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್ ಮಾಡಿದ್ದರು.












Click it and Unblock the Notifications