ರವಿಶಂಕರ್ ಗುರೂಜಿ ಒಡೆತನದ ಕಟ್ಟಡ ನೆಲಸಮಕ್ಕೆ ಆದೇಶ!
ಕೋಲ್ಕತಾ, ಅಕ್ಟೋಬರ್ 29: ಒಂದೆಡೆ ಅಯೋಧ್ಯಾದ ಇಮಾಮ್ ಗಳು, ಸ್ವಾಮೀಜಿಗಳ ಜತೆ ಮಧ್ಯಸ್ಥಿಕೆ ಮಾತಕತೆಯಲ್ಲಿ ಆರ್ಟ್ ಆಫ್ ಲಿವಿಂಗ್(ಎಒಎಲ್) ನ ರವಿಶಂಕರ್ ಗುರೂಜಿ ತೊಡಗಿದ್ದಾರೆ. ಇನ್ನೊಂದೆಡೆ, ಅನಧಿಕೃತ ಕಟ್ಟಡ ಎಂದು ಹೇಳಿ ಕೋಲ್ಕತಾದ ಎಒಎಲ್ ನ ಕಟ್ಟಡ ನೆಲಸಮಕ್ಕೆ ಅಲ್ಲಿನ ಆಡಳಿತ ಆದೇಶ ನೀಡಿದೆ.
ಅಯೋಧ್ಯೆ ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಮುಂದಾಗಿದ್ದು, ನಿರ್ಮೋಹಿ ಅಖಾರದ ಆಚಾರ್ಯ ರಾಮದಾಸ್ ಮುಂತಾದ ಸ್ವಾಮೀಜಿಗಳು ಮತ್ತು ಮುಸ್ಲಿಂ ಧಾರ್ಮಿಕ ಗುರುಗಳ ಜತೆ ಸಂಪರ್ಕದಲ್ಲಿದ್ದಾರೆ.

ಈ ನಡುವೆ ರವಿಶಂಕರ್ ಗುರೂಜಿ ಸ್ಥಾಪನೆಯ ಆರ್ಟ್ ಆಫ್ ಲಿವಿಂಗ್ ಸ್ವಾಮ್ಯದ ವೈದಿಕ್ ಧರ್ಮ ಸಂಸ್ಥಾಪನಾ ಟ್ರಸ್ಟ್ ಗೆ ಸೇರಿದ ಕಟ್ಟಡವೊಂದು ಅಕ್ರಮವಾಗಿದ್ದು, ಪಾಲಿಕೆಯ ಪರಿಸರ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಈಸ್ಟ್ ಕೋಲ್ಕತಾ ವೆಟ್ ಲ್ಯಾಂಡ್ ಮ್ಯಾನೇಜ್ಮೆಂಟ್ ಅಥಾರಿಟಿ (ಇಕೆಡಬ್ಲ್ಯೂಎಂಎ) ನೋಟಿಸ್ ಜಾರಿ ಮಾಡಿದೆ.
ಈ ಹಿಂದೆ ಇದೇ ಕಟ್ಟಡಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಎಫ್ಐಆರ್ ದಾಖಲಿಸಲಾಗಿತ್ತು. ಕೋಲ್ಕತಾ ಮೂಲದ ಎನ್ ಜಿಒ ಸಲ್ಲಿಸಿದ್ದ ಅರ್ಜಿ ಮೇರೆಗೆ ನಂತರ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಕೂಡಾ ನೋಟಿಸ್ ನೀಡಿತ್ತು. ನೋಟಿಸ್ ಗೆ ಉತ್ತರ ಸಿಗದ ಕಾರಣ, ಕಟ್ಟಡವನ್ನು ಕೆಡವುವಂತೆ ಆದೇಶಿಸಿದೆ.












Click it and Unblock the Notifications