ಭಾರತದ ಹೊಸ ದಾಖಲೆ: 6 ದಿನಗಳಲ್ಲೇ 10 ಲಕ್ಷ ಜನರಿಗೆ ಕೊರೊನಾ ಲಸಿಕೆ
ನವದೆಹಲಿ, ಜನವರಿ.22: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಅಭಿಯಾನ ವಿಶ್ವದಲ್ಲೇ ಹೊಸ ದಾಖಲೆಯಾಗಿದೆ. ಆರು ದಿನಗಳಲ್ಲೇ 10 ಲಕ್ಷ ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.
ಕಳೆದ ಜನವರಿ.16ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಲಸಿಕೆ ವಿತರಣೆ ಅಭಿಯಾನಕ್ಕೆ ಮೊದಲು ಚಾಲನೆ ನೀಡಿದ್ದರು. ಗುರುವಾರ ಸಂಜೆ 6 ಗಂಟೆ ವೇಳೆಗೆ 9,99,065 ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗಿದೆ.
ಮೊದಲ ಹಂತದಲ್ಲಿ ದೇಶದ 3 ಕೋಟಿ ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೊವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿದೆ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ 27 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ.

ಆರು ದಿನಗಳಲ್ಲೇ 10 ಲಕ್ಷ ಜನರಿಗೆ ಲಸಿಕೆ:
ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕಿನ ವಿರುದ್ಧ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ ಕ್ಷಿಪ್ರಗತಿಯಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದ್ದು, 6 ದಿನಗಳಲ್ಲೇ 10 ಲಕ್ಷ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಇದೇ 10 ಲಕ್ಷ ಜನರಿಗೆ ಲಸಿಕೆ ನೀಡಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ಇಸ್ರೇಲ್ ನಲ್ಲಿ 10 ದಿನಗಳನ್ನು ತೆಗೆದುಕೊಳ್ಳಲಾಗಿದೆ.
ಕೊರೊನಾವೈರಸ್ ಲಸಿಕೆ ಅಭಿಯಾನ ಆರಂಭವಾಗಿ ಐದು ದಿನಗಳಲ್ಲಿ ದೇಶಾದ್ಯಂತ 7.86 ಲಕ್ಷ ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿತ್ತು.












Click it and Unblock the Notifications