Mahakumbh Mela 2025: ಹಿಂದೂಗಳಿಗೆ ಹೊಸ ನೀತಿ ಸಂಹಿತೆ, ವಿವರಗಳು
ಲಕ್ನೋ, ಜನವರಿ 24: ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ-2025 ನಡೆಯುತ್ತಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಹಿಂದೂಗಳ ಪ್ರಮುಖ ಧಾರ್ಮಿಕ ಉತ್ಸವ ಇದಾಗಿದ್ದು, ವಿಶ್ವದ ವಿವಿಧ ದೇಶಗಳ ಜನರು ಸಹ ಆಗಮಿಸುತ್ತಿದ್ದಾರೆ. ಮಹಾಕುಂಭ ಮೇಳದಲ್ಲಿ ಹಿಂದೂಗಳಿಗೆ ಹೊಸ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಲಾಗುತ್ತದೆ.
ಕಾಶಿ ವಿದ್ವತ್ ಪರಿಷತ್ ಹಿಂದೂಗಳಿಗೆ ಹೊಸ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಲಿದೆ. ಯಾವುದನ್ನು ಮಾಡಬಾರದು, ಮಾಡಬೇಕು ಎಂಬುದನ್ನು ನೀತಿ ಸಂಹಿತೆ ಒಳಗೊಂಡಿರಲಿದೆ. ಸನಾತನ ಧರ್ಮವನ್ನು ಪಾಲನೆ ಮಾಡುವವರು ಈ ನೀತಿ ಸಂಹಿತೆಯನ್ನು ಪಾಲಿಸಬೇಕು ಎಂದು ಮಹಾಕುಂಭ ಮೇಳದಲ್ಲಿ ನೀತಿ ಸಂಹಿತೆ ಬಿಡುಗಡೆಗೊಳಿಸಲಾಗುತ್ತದೆ.

ವಾರಣಾಸಿಯಲ್ಲಿ ಕಾಶಿ ವಿದ್ವತ್ ಪರಿಷತ್ತು (ಕೆವಿಪಿ) ಇದೆ. ವೈದಿಕ ಜ್ಞಾನವನ್ನು ಬೆಳೆಸುವುದು, ಅದನ್ನು ಕಲಿಸುವುದು ಪರಿಷತ್ ಪ್ರಮುಖ ಕಾರ್ಯವಾಗಿದೆ. ಮಾಹಿತಿಗಳ ಪ್ರಕಾರ ಹಿಂದೂಗಳ ಹೊಸ ನೀತಿ ಸಂಹಿತೆ 300 ಪುಟಗಳನ್ನು ಒಳಗೊಂಡಿದೆ. ಶನಿವಾರ ಮಹಾಕುಂಭ ಮೇಳದ ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜನೆ ಮಾಡಿದ್ದ ಸಾಧುಗಳು, ಸಂತರ ಸಭೆಯಲ್ಲಿ ಈ ನೀತಿ ಸಂಹಿತೆಯನ್ನು ಅಂತಿಮಗೊಳಿಸಲಾಗಿದೆ.
ನೀತಿ ಸಂಹಿತೆಯಲ್ಲಿ ಏನಿದೆ?; ಹಿಂದೂಗಳ ನೂತನ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಿ, ಸಾವಿರಾರು ಪ್ರತಿಗಳನ್ನು ಮುದ್ರಣಗೊಳಿಸಿ ಪ್ರಯಾಗ್‌ರಾಜ್‌ನಲ್ಲಿನ ಮಹಾಕುಂಭ ಮೇಳದಲ್ಲಿಯೇ ಹಂಚಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.
15 ವರ್ಷಗಳಿಂದ ವಿವಿಧ ಮಠಗಳ ನೇತೃತ್ವವಹಿಸಿರುವ ಸ್ವಾಮೀಜಿಗಳು, ಆಧ್ಯಾತ್ಮಿಕ ಚಿಂತಕರು ಹಲವು ಸುತ್ತಿನ ಚರ್ಚೆಗಳ ಬಳಿಕ ಈ ನೀತಿ ಸಂಹಿತೆಯನ್ನು ಅಂತಿಮಗೊಳಿಸಿದ್ದಾರೆ. ಇದನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಅಖಿಲ ಭಾರತ ಸಂತರ ಸಮಿತಿ ಪ್ರಧಾನ ಕಾರ್ಯದರ್ಶಿ ಜೀತೇಂದ್ರನಂದ ಸರಸ್ವತಿ ಹೇಳಿದ್ದಾರೆ. ಸನಾತನ ಧರ್ಮವನ್ನು ಪಾಲನೆ ಮಾಡುವವರ ಸಾಮಾಜಿಕ ಜೀವನ ಹೇಗಿರಬೇಕು?, ಯಾವ ಯಾವ ಆಚರಣೆ ಮಾಡಬೇಕು? ಎಂದು ನೀತಿ ಸಂಹಿತೆಯಲ್ಲಿ ವಿವರಿಸಲಾಗಿದೆ.
ನೂತನ ನೀತಿ ಸಂಹಿತೆ ಪ್ರಕಾರ ರಾತ್ರಿ ವಿವಾಹವನ್ನು ನಿಷೇಧಿಸಲಾಗಿದೆ. ಸನಾತನ ಧರ್ಮದಲ್ಲಿ ಸೂರ್ಯನಿಗೆ ಪ್ರಮುಖ ಸ್ಥಾನವಿದೆ. ಹಗಲು ಹೊತ್ತಿನಲ್ಲಿ ಸೂರ್ಯ ಇರುವಾಗ ವಿವಾಹವಾಗಬೇಕು ಎಂದು ಸಂಹಿತೆಯಲ್ಲಿ ವಿವರಣೆ ನೀಡಲಾಗಿದೆ.
ವಿವಾಹದ ಸಮಯದಲ್ಲಿ ಯಾವುದೇ ರೂಪದಲ್ಲಿ ವರದಕ್ಷಿಣೆ ಪಡೆಯಬಾರದು. ಮಹಿಳೆ ಎಲ್ಲಾ ಮಾದರಿಯಲ್ಲೂ ಪುರುಷನಿಗೆ ಸರಿಸಮಾನಳು ಎಂದು ನೀತಿ ಸಂಹಿತೆ ಹೇಳಿದ್ದು, ಆಕೆ ಯಜ್ಞವನ್ನು ನಡೆಸಬಹುದು ಎಂದು ಹೇಳಿದೆ.
ಜಾತಿಗಳ ಆಧಾರದ ಮೇಲೆ ಅಸ್ಪೃಶ್ಯತೆಯನ್ನು ವೈದಿಕ ಸಮಾಜ ಪ್ರಚೋದಿಸುವುದಿಲ್ಲ. ಇದು ಗುಲಾಮಿತನವಾಗಿದೆ. ದಲಿತರು ದೇವಾಲಯ ಪ್ರವೇಶ ಮಾಡಲು ಯಾವುದೇ ನಿರ್ಬಂಧವು ಇರುವುದಿಲ್ಲ ಎಂದು ನೀತಿ ಸಂಹಿತೆ ವಿವರಣೆ ನೀಡಿದೆ.
ಹೊಸ ನೀತಿ ಸಂಹಿತೆಯ ಮಹತ್ವದ ತೀರ್ಮಾನವೊಂದರಲ್ಲಿ ಘರ್ ವಾಪಸಿ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದೆ. ಹಿಂದೂವಾಗಿ ಹುಟ್ಟಿದವರು ಯಾವಾಗ ಬೇಕಾದರೂ ಮೂಲ ಧರ್ಮಕ್ಕೆ ವಾಪಸ್ ಆಗಲು ಅವಕಾಶ ನೀಡಲಾಗಿದೆ.
ಪುರಾಣಗಳು, ಧರ್ಮದ ವಿವಿಧ ಗ್ರಂಥಗಳು ಮತ್ತು ಕರ್ಮ ಫಲಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳಲ್ಲಿನ ವಿವರಗಳನ್ನು ಸಭೆಯಲ್ಲಿ ಚರ್ಚೆ ಮಾಡಿ, ನೂತನ ನೀತಿ ಸಂಹಿತೆಯನ್ನು ರಚನೆ ಮಾಡಲಾಗಿದೆ.












Click it and Unblock the Notifications