ಜಮ್ಮು & ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಸರ್ಕಾರದ ಜಟಾಪಟಿ!
ಶ್ರೀನಗರ, ಅಕ್ಟೋಬರ್ 09: ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವನ್ನು ರಚನೆ ಮಾಡಲಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಲಿದ್ದಾರೆ. ಆದರೆ ದೆಹಲಿ ಮಾದರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಸಹ ರಾಜ್ಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಜಟಾಪಟಿಗೆ ಸಾಕ್ಷಿಯಾಗುವ ಸೂಚನೆ ಸಿಕ್ಕಿದೆ.
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42, ಬಿಜೆಪಿ 29, ಕಾಂಗ್ರೆಸ್ 6, ಪಿಡಿಪಿ 3, ಜೆಪಿಸಿ 1 ಮತ್ತು ಇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಚುನಾವಣಾ ಪೂರ್ವ ಮೈತ್ರಿಯಂತೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಲಿದೆ.

370ನೇ ವಿಧಿಯ ರದ್ದು ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದೆ. ನಿಯಮಗಳ ಪ್ರಕಾರ ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ಮುಖಸ್ಥರು. ಜಮ್ಮು ಮತ್ತು ಕಾಶ್ಮೀರದ ಹಾಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ.
ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್: ದೆಹಲಿಯಲ್ಲಿ ರಾಜ್ಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಜಟಾಪಟಿ ನಡೆಯುವುದು ಸಾಮಾನ್ಯವಾಗಿತ್ತು. ಇದೇ ಮಾದರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲೂ ಆಗುವ ಸಾಧ್ಯತೆ ಇದೆ. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಸರ್ಕಾರ ರಚನೆಯಾದರೂ ಸಹ ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಕೈಯಲ್ಲಿ ಇರುತ್ತದೆ.
ಶಿಕ್ಷಣ, ವಿವಾಹ, ತೆರಿಗೆ, ಆಸ್ತಿ ಪರಭಾರೆ, ಅರಣ್ಯ, ಟ್ರೇಡ್ ಯೂನಿಯನ್, ಕಾರ್ಮಿಕ ಕಲ್ಯಾಣ, ಧಾರ್ಮಿಕ ದತ್ತಿ, ವಾಣಿಜ್ಯ ಮತ್ತು ವ್ಯವಹಾರ ಹೀಗೆ ವಿವಿಧ ವಲಯಗಳನ್ನು ಜಮ್ಮು ಮತ್ತು ಕಾಶ್ಮೀರ ಪುನರ್ ಸಂಘಟನೆ ಕಾಯ್ದೆ 2019ರಂತೆ ವಿಭಾಗಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಮತ್ತು ಸರ್ಕಾರಕ್ಕೆ ವಲಯಗಳನ್ನು ಹಂಚಿಕೆ ಮಾಡಲಾಗಿದೆ.
ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಆರೋಗ್ಯ, ಆಸ್ಪತ್ರೆ, ಮದ್ಯದ ಮಾರಾಟ, ರಸ್ತೆ ಮತ್ತು ಸೇತುವೆ ನಿರ್ಮಾಣ, ಕೃಷಿ, ನೀರು, ಭೂಮಿ, ಗಣಿಗಳ ಹರಾಜು, ಕೈಗಾರಿಕೆ, ವೇತನ, ಶಾಸಕರ ಭತ್ಯೆ, ಭೂ ಆದಾಯ, ತೆರಿಗೆ, ಟೋಲ್, ಉದ್ಯೋಗ ಮುಂತಾದವು ಸರ್ಕಾರದ ವ್ಯಾಪ್ತಿಯಲ್ಲಿಯೇ ಇರುತ್ತದೆ.
ನಿಯಮಗಳ ಪ್ರಕಾರ ಈಗಾಗಲೇ ಲೆಫ್ಟಿನೆಂಟ್ ಗವರ್ನರ್‌ಗೆ ರಾಜ್ಯ ವಿಧಾನಸಭೆಗೆ ಐವರು ಶಾಸಕರನ್ನು ನಾಮ ನಿರ್ದೇಶ ಮಾಡುವ ಅಧಿಕಾರವನ್ನು ನೀಡಲಾಗಿದೆ. ಇದಕ್ಕೆ ಈಗಾಗಲೇ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಆಕ್ಷೇಪವನ್ನು ವ್ಯಕ್ತಪಡಿಸಿವೆ. ಈಗ ನೀತಿ ಮತ್ತು ಸಾರ್ವಜನಿಕ ಹಿತದಿಂದ ತೆಗೆದುಕೊಳ್ಳುವ ಕೆಲವು ತೀರ್ಮಾನಗಳನ್ನು ಲೆಫ್ಟಿನೆಂಟ್ ಗವರ್ನರ್‌ಗೆ ನೀಡಲಾಗುತ್ತದೆ.
ಎಐಎಸ್ ನೇಮಕಾತಿಗಳು, ವರ್ಗಾವಣೆ, ಅಡ್ವೊಕೇಟ್ ಜನರಲ್ ನೇಮಕ, ಕಾನೂನು ತಜ್ಞರ ನೇಮಕ, ಪ್ರಾಸಿಕ್ಯುಷನ್‌ಗೆ ಅನುಮತಿ ನೀಡುವುದು ಮುಂತಾದವು ಲೆಫ್ಟಿನೆಂಟ್ ಗವರ್ನರ್ ವ್ಯಾಪ್ತಿಗೆ ಬರುತ್ತದೆ. 2018ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗವರ್ನರ್ ಆಡಳಿತ ನೋಡಿಕೊಳ್ಳುತ್ತಿದ್ದಾರೆ. ಈಗ ಹೊಸ ಸರ್ಕಾರ ಬಂದರೂ ಸಹ ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಕಡಿಮೆಯಾಗುವುದಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ 2014ರಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಬಿಜೆಪಿ ಮತ್ತು ಪಿಡಿಪಿ ಪಕ್ಷದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 2018ರಲ್ಲಿ ಸರ್ಕಾರ ಪತನಗೊಂಡಿತು. 2019ರಲ್ಲಿ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡಿತು. 10 ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ.












Click it and Unblock the Notifications