ತೆಲಂಗಾಣ ಚುನಾವಣೆ ಸಮಯದಲ್ಲಿ ಚಂದ್ರಶೇಖರರಾವ್ ಮಹತ್ವದ ಘೋಷಣೆ!
ಹೈದರಾಬಾದ್, ಆಗಸ್ಟ್ 02; ರಾಷ್ಟ್ರ ರಾಜಕೀಯಕ್ಕೆ ಪಾದಾರ್ಪಣೆ ಮಾಡಬೇಕು ಎಂದು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮೂಲಕ ಪ್ರಯತ್ನ ನಡೆಸುತ್ತಿರುವ ಕೆ. ಚಂದ್ರಶೇಖರ್ ರಾವ್ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಮಹತ್ವದ ಘೋಷಣೆ ಮಾಡಿದ್ದಾರೆ. ಇದು ತೆಲಂಗಾಣ ಮತ್ತು ದೇಶದ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಹೊಸ ಘೋಷಣೆ ಮಾಡಿದ್ದಾರೆ. "ನಮ್ಮ ಪಕ್ಷವು ಎನ್‌ಡಿಎ ಅಥವ ಇಂಡಿಯಾ ಮೈತ್ರಿಕೂಟದ ಜೊತೆಗೆ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಮಹಾರಾಷ್ಟ್ರ ಭೇಟಿ ವೇಳೆ ಕೆ. ಚಂದ್ರಶೇಖರ್ ರಾವ್ ಈ ಕುರಿತು ಮಾತನಾಡಿದರು. "ಬಿಆರ್‌ಎಸ್ ಪಕ್ಷ ಏಕಾಂಗಿಯಲ್ಲ. ಅದು ತನ್ನ ಸ್ನೆಹಿತರ ಜೊತೆಗಿದೆ" ಎಂದು ಹೇಳುವ ಮೂಲಕ ಅವರು ಕುತೂಹಲವನ್ನು ಮೂಡಿಸಿದರು.
ಯಾವುದೇ ಮೈತ್ರಿಕೂಟದ ಪರವಿಲ್ಲ; ಕೆ. ಚಂದ್ರಶೇಖರ್ ರಾವ್, "ಬಿಆರ್‌ಎಸ್ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಥವ ಇಂಡಿಯಾ (I.N.D.I.A) ಮೈತ್ರಿಕೂಟದ ಜೊತೆ ಇಲ್ಲ. ಹಾಗಂತ ಪಕ್ಷ ಏಕಾಂಗಿಯಾಗಿಯೂ ಇಲ್ಲ" ಎಂದು ಸ್ಪಷ್ಟಪಡಿಸಿದರು.
"ದೇಶದ ಉತ್ತಮ ಭವಿಷ್ಯಕ್ಕಾಗಿ ಬದಲಾವಣೆಯ ಅಗತ್ಯವಿದೆ. ಹೊಸ ಭಾರತ ಎಂದರೆ ಏನು?. ಅವರೇ ದೇಶವನ್ನು 50 ವರ್ಷಗಳ ಕಾಲ ಆಳಿದ್ದಾರೆ. ಏನು ಬದಲಾವಣೆ ತಂದಿದ್ದಾರೆ" ಎಂದು ಕಾಂಗ್ರೆಸ್ ಪಕ್ಷದ ಹೆಸರು ಹೇಳದೇ ಅವರು ವಾಗ್ದಾಳಿಯನ್ನು ನಡೆಸಿದರು.
ಬಿಜೆಪಿ ವಿರುದ್ಧದ ವಿರೋಧ ಪಕ್ಷಗಳನ್ನು ಒಂದು ಗೂಡಿಸುವಲ್ಲಿ ಹಲವು ರಾಜ್ಯಗಳಿಗೆ ಕೆ. ಚಂದ್ರಶೇಖರ್ ರಾವ್ ಭೇಟಿ ನೀಡಿದ್ದರು. 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರು ಟಿಆರ್‌ಎಸ್ ಪಕ್ಷವನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಬದಲಾವಣೆ ಮಾಡಿದ್ದರು.
ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಬಿಹಾರದಲ್ಲಿ ನಿತೀಶ್ ಕುಮಾರ್ ಹೀಗೆ ವಿವಿಧ ರಾಜ್ಯಗಳಿಗೆ ಸಂಚಾರ ನಡೆಸಿ, ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದರು.
ಆದರೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ವಿರೋಧ ಪಕ್ಷಗಳು I.N.D.I.A ಎಂಬ ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಈ ವಿರೋಧ ಪಕ್ಷಗಳ ಸಭೆಯಿಂದ ಕೆ. ಚಂದ್ರಶೇಖರ್ ರಾವ್ ದೂರ ಉಳಿದಿದ್ದರು. ತೆಲಂಗಾಣದ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಲಿದ್ದಾರೆ ಎಂಬ ಸುದ್ದಿ ಇತ್ತು.
ವಿಧಾನಸಭೆ ಚುನಾವಣೆ ಸಿದ್ಧತೆ; ಈ ವರ್ಷದ ಅಂತ್ಯದಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲಿ ಬಿಆರ್‌ಎಸ್ ಪಕ್ಷವೇ ಸದ್ಯ ಅಧಿಕಾರದಲ್ಲಿದ್ದು, ಕೆ. ಚಂದ್ರಶೇಖರ್ ರಾವ್ ಮುಖ್ಯಮಂತ್ರಿ. ಅಧಿಕಾರವನ್ನು ಉಳಿಸಿಕೊಳ್ಳಲು ಅವರು ತಂತ್ರ ರೂಪಿಸುತ್ತಿದ್ದಾರೆ.
ಮತ್ತೊಂದು ಕಡೆ ಕೆ. ಚಂದ್ರಶೇಖರ್ ರಾವ್ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಚುನಾವಣೆಗಾಗಿ ಪಕ್ಷ ವಿವಿಧ ವಿಭಾಗ ಮಟ್ಟದ ಸಮಿತಿಗಳನ್ನು ರಚನೆ ಮಾಡುತ್ತಿದೆ. ಸುಮಾರು 14 ಲಕ್ಷ ಕಾರ್ಯಕರ್ತರ ಪಡೆಯೊಂದಿಗೆ ರಾಜ್ಯದಲ್ಲಿ ಪಕ್ಷ ಚುನಾವಣಾ ಸಿದ್ಧತೆಯನ್ನು ಕೈಗೊಂಡಿದೆ.
ತೆಲಂಗಾಣದ ಚುನಾವಣೆಯೂ ಬಿಆರ್‌ಎಸ್ ಪಕ್ಷದ ಪಾಲಿಗೆ ಈ ಬಾರಿ ಸವಾಲಾಗಿದೆ. ಜಗನ್ ಮೋಹನ್ ರೆಡ್ಡಿ ಸಹೋದರಿಯ ಪಕ್ಷ, ಬಿಜೆಪಿ, ಕಾಂಗ್ರೆಸ್ ಹೀಗೆ ರಾಜ್ಯದಲ್ಲಿ ಈ ಬಾರಿ ಅವರಿಗೆ ಪ್ರತಿಸ್ಪರ್ಧಿಗಳು ಅನೇಕರು ಇದ್ದಾರೆ.
ಕಾಂಗ್ರೆಸ್ ಪಕ್ಷ ತೆಲಂಗಾಣ ಚುನಾವಣೆಯ ಸಿದ್ಧತೆಯನ್ನು ಈಗಾಗಲೇ ಆರಂಭಿಸಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ಜೊತೆ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ.












Click it and Unblock the Notifications