NEET ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರದ ವಿರುದ್ಧ ಸಚಿವ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ
ಬೆಂಗಳೂರು: ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್ ಯುಜಿ 2026' ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಷ್ಟ್ರಮಟ್ಟದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನಡೆದ ಈ ಲೋಪದ ಕುರಿತು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೇಂದ್ರ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಮಕ್ಕಳ ಭವಿಷ್ಯದ ಜೊತೆಗಿನ ಚೆಲ್ಲಾಟ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮದ ಸಂಪೂರ್ಣ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು ಎಂದು ಆಗ್ರಹಿಸಿದರು. "ರಾಜ್ಯದ ಮೂಲೆ ಮೂಲೆಗಳಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಯಾವುದೇ ಸೂಕ್ತ ವ್ಯವಸ್ಥೆ, ಮೂಲಸೌಕರ್ಯಗಳಿಲ್ಲದಿದ್ದರೂ ಹಗಲಿರುಳು ಕಷ್ಟಪಟ್ಟು ಓದುತ್ತಾರೆ. ಉತ್ತಮ ಫಲಿತಾಂಶ ತಂದು ತಮ್ಮ ಪೋಷಕರ ಕನಸು ನನಸು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಆದರೆ, ಕೇಂದ್ರ ಸರ್ಕಾರದ 'ಅವ್ಯವಸ್ಥೆ ಮತ್ತು ಹೊಲಸು ಅಡ್ಮಿನಿಸ್ಟ್ರೇಷನ್' (ಆಡಳಿತ) ನಿಂದಾಗಿ ಇಂದು ಲಕ್ಷಾಂತರ ಮಕ್ಕಳಿಗೆ ದೊಡ್ಡ ಅನ್ಯಾಯವಾಗುತ್ತಿದೆ," ಎಂದು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಮಧು ಬಂಗಾರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ನೇರ ಸವಾಲು ಹಾಕಿದರು. "ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ಪ್ರಕರಣ ನಮ್ಮ ರಾಜ್ಯ ಸರ್ಕಾರದಲ್ಲಿ ನಡೆದಿದೆಯೇ? ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಯಾವಾಗಲೂ ಮಾತನಾಡುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ಹೋಗಿ ಕೇಳಿ. ಕೇಂದ್ರದ ಈ ವೈಫಲ್ಯದ ಬಗ್ಗೆ ಅವರೇಕೆ ತುಟಿ ಬಿಚ್ಚುತ್ತಿಲ್ಲ?" ಎಂದು ಪ್ರಶ್ನಿಸಿದರು.
ಸತತ ಎರಡನೇ ವರ್ಷವೂ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ಕಾರ್ಯವೈಖರಿಯನ್ನು ಎತ್ತಿತೋರಿಸುತ್ತಿದೆ ಎಂದರು. ಹಾಗೆಯೇ ಕೇಂದ್ರದ ನಾಯಕರನ್ನು ಲೇವಡಿ ಮಾಡಿದ ಸಚಿವರು, "ಬರೀ ತಮಟೆ ಹೊಡೆದುಕೊಂಡು, ದೀಪ ಹಚ್ಚಿಕೊಂಡು ಕೂರುವವರಿಗೆ ಇಂತಹ ಗಂಭೀರ ವಿಚಾರಗಳ ಬಗ್ಗೆ ಇನ್ನೇನು ಹೇಳಲು ಸಾಧ್ಯ? ಅವರಿಗೆ ಮಕ್ಕಳ ಭವಿಷ್ಯಕ್ಕಿಂತ ಇತರೆ ವಿಚಾರಗಳೇ ಮುಖ್ಯವಾಗಿವೆ," ಎಂದು ಕಟುವಾಗಿ ಟೀಕಿಸಿದರು.
ಒಟ್ಟಾರೆಯಾಗಿ, ನೀಟ್ ಪತ್ರಿಕೆ ಸೋರಿಕೆ ಪ್ರಕರಣವು ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮತ್ತು ನಿರಾಸೆ ಹುಟ್ಟಿಸಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೆಯೇ ನೊಂದ ವಿದ್ಯಾರ್ಥಿಗಳಿಗೆ ಶೀಘ್ರವೇ ನ್ಯಾಯ ಒದಗಿಸಬೇಕು ಎಂಬ ಕೂಗು ರಾಜ್ಯದೆಲ್ಲೆಡೆ ಬಲವಾಗಿ ಕೇಳಿಬರುತ್ತಿದೆ.












Click it and Unblock the Notifications