NEET UG Paper Leak: ನೀಟ್ ಹಗರಣ ಬಯಲಿಗೆಳೆದ ಹಾಸ್ಟೆಲ್ ಮಾಲೀಕ; ಒಂದು ವಾಟ್ಸಾಪ್ ಸಂದೇಶದಿಂದ ಕೋಟಿ ಕೋಟಿ ಹಗರಣಕ್ಕೆ ಬ್ರೇಕ್
ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಕೊನೆಗೂ ಬಟಾಬಯಲಾಗಿದೆ. ದೇಶದ ಅತ್ಯಂತ ಕಠಿಣ ಹಾಗೂ ಪಾರದರ್ಶಕ ಪರೀಕ್ಷೆ ಎಂದು ನಂಬಲಾಗಿದ್ದ ನೀಟ್ ಪರೀಕ್ಷೆಯ ಹಿಂದಿನ ಕರಾಳ ಮುಖವನ್ನು ಜಗತ್ತಿನೆದುರು ತೆರೆದಿಟ್ಟಿದ್ದು ಯಾವುದೇ ದೊಡ್ಡ ತನಿಖಾ ಸಂಸ್ಥೆಯಲ್ಲ, ಬದಲಾಗಿ ರಾಜಸ್ಥಾನದ ಸೀಕರ್ ಜಿಲ್ಲೆಯ ಸಾಮಾನ್ಯ ಹಾಸ್ಟೆಲ್ ಮಾಲೀಕರೊಬ್ಬರು. ವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ಪೊಲೀಸರ ಬೆದರಿಕೆಯ ನಡುವೆಯೂ ಎದೆಗುಂದದೆ ಇವರು ನಡೆಸಿದ ಒಂಟಿ ಹೋರಾಟ, ಇಂದು ಲಕ್ಷಾಂತರ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ದೊಡ್ಡ ಆಶಾಕಿರಣವಾಗಿದ್ದಾರೆ.
ಏನಿದು ವಾಟ್ಸಾಪ್ ಮೆಸೇಜ್?
ಈ ಇಡೀ ಹಗರಣದ ಬೇರು ಕೆದಕಲು ಕಾರಣವಾಗಿದ್ದು ಒಂದು ಸಣ್ಣ ವಾಟ್ಸಾಪ್ ಸಂದೇಶ. ಕಳೆದ ಮೇ 2ರ ರಾತ್ರಿ, ಕೇರಳದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಮಗ, ಸೀಕರ್‌ನಲ್ಲಿ ಹಾಸ್ಟೆಲ್ ನಡೆಸುತ್ತಿರುವ ತನ್ನ ತಂದೆಗೆ ವಾಟ್ಸಾಪ್ ಮೂಲಕ ಒಂದು ಪ್ರಶ್ನೆ ಪತ್ರಿಕೆಯ ಪಿಡಿಎಫ್ (PDF) ಫೈಲ್ ಕಳುಹಿಸಿದ್ದ. "ಅಪ್ಪಾ, ಇದು ನಾಳಿನ ಪರೀಕ್ಷೆಯ 'ಗೆಸ್ ಪೇಪರ್' ಇರಬಹುದು, ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಓದಲು ಕೊಡಿ, ಅವರಿಗೆ ಸಹಾಯವಾಗಬಹುದು" ಎಂಬ ಉದ್ದೇಶದಿಂದ ಮಗ ಆ ಫೈಲ್ ಕಳುಹಿಸಿದ್ದ. ಆದರೆ, ಆ ಒಂದು ಫೈಲ್ ಇಡೀ ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸುತ್ತದೆ ಎಂದು ಆ ಕ್ಷಣದಲ್ಲಿ ಯಾರೂ ಊಹಿಸಿರಲಿಲ್ಲ.

ಮರುದಿನ ಬೆಳಿಗ್ಗೆ ಹಾಸ್ಟೆಲ್ ಮಾಲೀಕರು ಆ ಪತ್ರಿಕೆಯನ್ನು ಹಿಡಿದು ವಿದ್ಯಾರ್ಥಿಗಳಿಗೆ ನೀಡಲು ಹೋದಾಗ, ವಿದ್ಯಾರ್ಥಿಗಳು ಆಗಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಬಳಿಕ ಕುತೂಹಲ ತಾಳಲಾರದೆ ಆ ಪತ್ರಿಕೆಯನ್ನು ಸ್ಥಳೀಯ ರಸಾಯನಶಾಸ್ತ್ರ (Chemistry) ಉಪನ್ಯಾಸಕರೊಬ್ಬರಿಗೆ ತೋರಿಸಿದರು. ಸಂಜೆ ಪರೀಕ್ಷೆ ಮುಗಿದು ಅಸಲಿ ಪತ್ರಿಕೆ ಕೈ ಸೇರಿದಾಗ ಆ ಉಪನ್ಯಾಸಕರು ಅಕ್ಷರಶಃ ಬೆಚ್ಚಿಬಿದ್ದಿದ್ದರು. ಕಾರಣ, ಮಗ ಹಿಂದಿನ ದಿನ ರಾತ್ರಿ ಕಳುಹಿಸಿದ್ದ ಪಿಡಿಎಫ್ ಪತ್ರಿಕೆಯಲ್ಲಿದ್ದ ಬರೋಬ್ಬರಿ 135 ಪ್ರಶ್ನೆಗಳು ಅಸಲಿ ಪರೀಕ್ಷೆಯಲ್ಲಿ ಯಥಾವತ್ತಾಗಿ ಕೇಳಲಾಗಿತ್ತು. ಇದು ಕೇವಲ ಕಾಕತಾಳೀಯವಾಗಿರಲು ಸಾಧ್ಯವೇ ಇರಲಿಲ್ಲ, ಬದಲಾಗಿ ವ್ಯವಸ್ಥಿತವಾಗಿ ನಡೆದ ಬೃಹತ್ "ಪೇಪರ್ ಲೀಕ್" ಜಾಲ ಎಂಬುದು ಅಂದೇ ಸಾಬೀತಾಗಿತ್ತು.
ತಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ಹಿಡಿದುಕೊಂಡು ಹಾಸ್ಟೆಲ್ ಮಾಲೀಕರು ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಬದಲು, ದೂರುದಾರರನ್ನೇ ದಬಾಯಿಸಿದರು. "ಪರೀಕ್ಷೆ ರದ್ದು ಮಾಡಿಸುವ ದುರುದ್ದೇಶದಿಂದ ನೀವು ಸುಳ್ಳು ಕಥೆ ಕಟ್ಟುತ್ತಿದ್ದೀರಿ" ಎಂದು ಅವಮಾನಿಸಿ ವಾಪಸ್ ಕಳುಹಿಸಿದರು. ಈ ಹಂತದಲ್ಲಿ ಸಾಮಾನ್ಯರು ಧೃತಿಗೆಡುವುದು ಸಹಜ. ಆದರೆ, ಈ ಪ್ರಾಮಾಣಿಕ ಹಾಸ್ಟೆಲ್ ಮಾಲೀಕ ಮಾತ್ರ ಸತ್ಯದ ಪರವಾದ ತಮ್ಮ ಹೋರಾಟದಿಂದ ಕಿಂಚಿತ್ತೂ ಹಿಂದೆ ಸರಿಯಲಿಲ್ಲ.
ಎನ್‌ಟಿಎಗೆ ಇಮೇಲ್ ಮಾಡಿದ ಮಾಲೀಕ
ಪೊಲೀಸರು ಕೈಬಿಟ್ಟರೂ ಛಲ ಬಿಡದ ಅವರು, ಸೋರಿಕೆಯಾಗಿದ್ದ ಪಿಡಿಎಫ್ ಪತ್ರಿಕೆ ಹಾಗೂ ಅಸಲಿ ಪ್ರಶ್ನೆ ಪತ್ರಿಕೆಯ ಪ್ರತಿಗಳನ್ನು ಲಗತ್ತಿಸಿ ನೇರವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಇಮೇಲ್ ಮೂಲಕ ದೂರು ನೀಡಿದರು. ಪಕ್ಕಾ ಸಾಕ್ಷ್ಯಗಳೊಂದಿಗೆ ಬಂದ ಈ ಇಮೇಲ್ ನೋಡಿದ ಎನ್‌ಟಿಎ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ತಕ್ಷಣವೇ ಎಚ್ಚೆತ್ತ ಸಂಸ್ಥೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜಸ್ಥಾನದ ವಿಶೇಷ ಕಾರ್ಯಾಚರಣಾ ತಂಡ (SOG) ತನಿಖೆಗಿಳಿದಾಗ ಒಂದೊಂದೆ ಸತ್ಯಗಳು ಹೊರಬಿದ್ದವು. ಈ ಹಗರಣ ಕೇವಲ ರಾಜಸ್ಥಾನದ ಸೀಕರ್‌ಗೆ ಮಾತ್ರ ಸೀಮಿತವಾಗಿರದೆ ಹರಿಯಾಣ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ಹಬ್ಬಿರುವುದು ಪತ್ತೆಯಾಯಿತು. ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಪ್ರಭಾವಿಗಳಿಗೆ ಹಾಗೂ ಶ್ರೀಮಂತ ಅಭ್ಯರ್ಥಿಗಳಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿರುವ ಬೃಹತ್ ಹಗರಣ ಬಯಲಾಯಿತು.
ಸೋರಿಕೆಯಾದ ಪತ್ರಿಕೆಯ ಪ್ರಶ್ನೆಗಳಿಗೂ ಅಸಲಿ ಪತ್ರಿಕೆಗೂ ಇದ್ದ ಸ್ಪಷ್ಟ ಸಾಮ್ಯತೆಯನ್ನು ಅಲ್ಲಗಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಎನ್‌ಟಿಎ 'ನೀಟ್ ಯುಜಿ 2026' ಪರೀಕ್ಷೆಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಹಾಸ್ಟೆಲ್ ಮಾಲೀಕರೊಬ್ಬರ ಸಮಯಪ್ರಜ್ಞೆ, ದಿಟ್ಟ ನಿರ್ಧಾರ ಹಾಗೂ ಪ್ರಾಮಾಣಿಕ ಹೋರಾಟದ ಫಲವಾಗಿ ಇಂದು ಬೃಹತ್ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲ ಪತ್ತೆಯಾಗಿದ್ದು, ವ್ಯವಸ್ಥೆಯನ್ನು ನಂಬಿ ಹಗಲಿರುಳು ಓದಿದ್ದ ಲಕ್ಷಾಂತರ ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ.












Click it and Unblock the Notifications