ಶಾಲಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ: 1-8ನೇ ತರಗತಿಗೆ ಹೊಸ ಪಠ್ಯಪುಸ್ತಕ ಬಿಡುಗಡೆ ಮಾಡಿದ NCERT
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಶಾಲಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದು, 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ ಪಠ್ಯಪುಸ್ತಕಗಳು ಮುದ್ರಣ ಮಾದರಿಯ ಜೊತೆಗೆ ಡಿಜಿಟಲ್ ರೂಪದಲ್ಲಿಯೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ರಾಷ್ಟ್ರೀಯ ಶಿಕ್ಷಣ ನೀತಿ 2020'ರ ಅನುಷ್ಠಾನದ ಒಂದು ಪ್ರಮುಖ ಭಾಗವಾಗಿ ಈ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE 2023) ಅಡಿಯಲ್ಲಿ ಈ ಪುಸ್ತಕಗಳ ವಿಷಯಗಳನ್ನು ಸಮಗ್ರವಾಗಿ ನವೀಕರಿಸಲಾಗಿದೆ.

ಶಿಕ್ಷಣವನ್ನು ಕೇವಲ ಕಂಠಪಾಠಕ್ಕೆ ಸೀಮಿತಗೊಳಿಸದೆ, ಭವಿಷ್ಯದ ಶೈಕ್ಷಣಿಕ ಹಾಗೂ ವೃತ್ತಿಪರ ಅಗತ್ಯಗಳಿಗೆ ತಕ್ಕಂತೆ ಹೆಚ್ಚು ಪ್ರಸ್ತುತ, ಅರ್ಥಪೂರ್ಣ ಹಾಗೂ ಆಕರ್ಷಕವಾಗಿಸುವ ಉದ್ದೇಶವನ್ನು ಎನ್‌ಸಿಇಆರ್‌ಟಿ ಹೊಂದಿದೆ. ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ, ಕೌಶಲ್ಯಾಧಾರಿತ ಹಾಗೂ ವಿದ್ಯಾರ್ಥಿ-ಕೇಂದ್ರಿತ ಕಲಿಕೆಯನ್ನು ಉತ್ತೇಜಿಸುವುದು ಈ ಪರಿಷ್ಕೃತ ಪಠ್ಯಪುಸ್ತಕಗಳ ಪ್ರಮುಖ ಗುರಿಯಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಶಿಫಾರಸುಗಳ ಆಧಾರದ ಮೇಲೆ ಎಲ್ಲಾ ಹಂತಗಳು ಮತ್ತು ವಿಷಯಗಳಾದ್ಯಂತ ಪಠ್ಯಪುಸ್ತಕಗಳ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
9ನೇ ತರಗತಿಯ ಪಠ್ಯಪುಸ್ತಕಗಳ ಮಾಹಿತಿ
ಪ್ರಸ್ತುತ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಹೊಸ ಪುಸ್ತಕಗಳನ್ನು ಮುಂದಿನ ಶೈಕ್ಷಣಿಕ ವರ್ಷ, ಅಂದರೆ 2026-27ನೇ ಸಾಲಿನಿಂದ ಅಧಿಕೃತವಾಗಿ ಶಾಲೆಗಳಲ್ಲಿ ಪರಿಚಯಿಸಲಾಗುವುದು ಎಂದು ಎನ್‌ಸಿಇಆರ್‌ಟಿ ತಿಳಿಸಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಮಾಹಿತಿಗಾಗಿ ಮತ್ತು ಅವರಿಂದ ಸೂಕ್ತ ಸಲಹೆ, ಪ್ರತಿಕ್ರಿಯೆಗಳನ್ನು ಪಡೆಯುವ ಉದ್ದೇಶದಿಂದ 9 ನೇ ತರಗತಿಯ ಕರಡು ಪಠ್ಯಕ್ರಮವನ್ನು ಎನ್‌ಸಿಇಆರ್‌ಟಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾರ್ವಜನಿಕರು ಇದನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.
𝐁𝐢𝐠 𝐔𝐩𝐝𝐚𝐭𝐞 𝐟𝐨𝐫 𝐒𝐜𝐡𝐨𝐨𝐥 𝐄𝐝𝐮𝐜𝐚𝐭𝐢𝐨𝐧!
— NCERT (@ncert) March 17, 2026
Aligned with the vision of the National Education Policy (NEP) 2020, NCERT is transforming textbooks to make learning more relevant, engaging, and future-ready!
𝐆𝐫𝐚𝐝𝐞𝐬 𝟏–𝟖: New textbooks now available (Print +… pic.twitter.com/Vx7xoSTdWT
10 ಮತ್ತು 11ನೇ ತರಗತಿಯ ಅಪ್‌ಡೇಟ್
ಇನ್ನು ಪ್ರಮುಖ ಬೋರ್ಡ್ ಪರೀಕ್ಷೆ ಎದುರಿಸುವ 10ನೇ ತರಗತಿ ಹಾಗೂ ಪ್ರಥಮ ಪಿಯುಸಿ (11ನೇ ತರಗತಿ) ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು 2027-28ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲು ಮಂಡಳಿ ನಿರ್ಧರಿಸಿದೆ. ಅಲ್ಲಿಯವರೆಗೆ, ಅಂದರೆ 2026-27ನೇ ಶೈಕ್ಷಣಿಕ ವರ್ಷದಲ್ಲಿ ಈ ತರಗತಿಗಳ ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಪ್ರಸ್ತುತ ಇರುವ ಹಳೆಯ ಪಠ್ಯಪುಸ್ತಕಗಳನ್ನೇ ಮುಂದುವರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೊಸ ಪಠ್ಯಕ್ರಮ ಮತ್ತು ಪುಸ್ತಕಗಳಿಗೆ ಹೊಂದಿಕೊಳ್ಳುವ ಮುನ್ನ ವಿದ್ಯಾರ್ಥಿಗಳಿಗೆ ಹಳೆಯ ವಿಷಯಗಳ ಬಗ್ಗೆ ಸ್ಪಷ್ಟ ಅರಿವು ಅಥವಾ ಮೂಲಭೂತ ಜ್ಞಾನ ಇದೆಯೇ ಎಂಬುದನ್ನು ಶಿಕ್ಷಕರು ಖಚಿತಪಡಿಸಿಕೊಳ್ಳಬೇಕು ಎಂದು ಎನ್‌ಸಿಇಆರ್‌ಟಿ ವಿಶೇಷವಾಗಿ ಸಲಹೆ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಈ ಹೊಸ ಬದಲಾವಣೆಗಳನ್ನು ಅತ್ಯಂತ ಸುಗಮವಾಗಿ ಜಾರಿಗೆ ತರಲು ಎಲ್ಲಾ ಪಾಲುದಾರರು, ಶಾಲೆಗಳ ಆಡಳಿತ ಮಂಡಳಿಗಳು ಹಾಗೂ ಶಿಕ್ಷಕರು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಮಂಡಳಿ ಮನವಿ ಮಾಡಿದೆ.












Click it and Unblock the Notifications