ಬ್ಯಾಂಕ್ ಮುಷ್ಕರಕ್ಕೆ ಕರೆ: ಸೆಪ್ಟೆಂಬರ್‌ನಲ್ಲಿ ಈ ನಾಲ್ಕು ದಿನ ಬ್ಯಾಂಕಿಂಗ್ ಸೇವೆ ಸ್ಥಗಿತ, ಗ್ರಾಹಕರಿಗೆ ತಟ್ಟಲಿದೆ ಬಿಸಿ

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಒಂದು ಪ್ರಮುಖ ಮಾಹಿತಿ. ವಾರಕ್ಕೆ 5 ದಿನಗಳ ಕಾಲ ಮಾತ್ರ ಕೆಲಸ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯನ್ನು ಪರಿಷ್ಕರಿಸುವಂತೆ ಆಗ್ರಹಿಸಿ ಪ್ರಮುಖ ಬ್ಯಾಂಕ್ ಯೂನಿಯನ್‌ಗಳು ದೇಶಾದ್ಯಂತ ಪ್ರತಿಭಟನೆಗೆ ಮುಂದಾಗಿವೆ.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಸರಣಿ ಬ್ಯಾಂಕ್ ಮುಷ್ಕರ ನಡೆಯಲಿದ್ದು, ಇದರಿಂದ ದೈನಂದಿನ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

Nationwide Bank Strike Banking Services To Be Hit Over 5-Day Work Week Demand In September

ಬ್ಯಾಂಕ್ ಉದ್ಯೋಗಿಗಳ ಪ್ರಮುಖ ಬೇಡಿಕೆಗಳಲ್ಲಿ ಪ್ರಸ್ತುತ ವಾರಕ್ಕೆ ಆರು ದಿನ ಕೆಲಸ ಮಾಡುತ್ತಿರುವುದನ್ನ 5 ದಿನಗಳ ಕೆಲಸದ ಅವಧಿಯನ್ನ ಜಾರಿಗೆ ತರುವುದು ಮೊದಲನೆಯದು. ಅಂದರೆ, ಎಲ್ಲಾ ಶನಿವಾರಗಳಂದು ಬ್ಯಾಂಕುಗಳಿಗೆ ರಜೆ ಘೋಷಿಸಬೇಕು ಎಂಬುದು ನೌಕರರ ಒತ್ತಾಯವಾಗಿದೆ.

ಪ್ರಸ್ತುತ, ಭಾರತದಲ್ಲಿನ ಬ್ಯಾಂಕುಗಳು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮಾತ್ರ ಮುಚ್ಚಲ್ಪಡುತ್ತವೆ ಹಾಗೂ ಮೊದಲ, ಮೂರನೇ ಮತ್ತು ಐದನೇ ಶನಿವಾರದಂದು ತೆರೆದಿರುತ್ತವೆ. ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆಯ ನಿಯಮವನ್ನ ಆಗಸ್ಟ್ 2015 ರಲ್ಲಿ ಜಾರಿಗೆ ತರಲಾಗಿತ್ತು.

ಇದೀಗ ಎಲ್ಲಾ ಶನಿವಾರಗಳನ್ನು ಬ್ಯಾಂಕಿಂಗ್ ರಜೆಯಾಗಿ ಘೋಷಿಸುವಂತೆ ಕೋರಿ ಭಾರತೀಯ ಬ್ಯಾಂಕ್‌ಗಳ ಸಂಘವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೂ ಈ ಬೇಡಿಕೆ ಈಡೇರದ ಕಾರಣ ನೌಕರರು ಮುಷ್ಕರದ ಹಾದಿ ಹಿಡಿದಿದ್ದಾರೆ.

ಸೆಪ್ಟೆಂಬರ್‌ನ ಬ್ಯಾಂಕ್ ಮುಷ್ಕರದ ದಿನಾಂಕಗಳು

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಯೂನಿಯನ್‌ಗಳು ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ನಾಲ್ಕು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಸೆಪ್ಟೆಂಬರ್ 11 ರಂದು ಒಂದು ದಿನದ ಸಾಂಕೇತಿಕ ಬ್ಯಾಂಕ್ ಮುಷ್ಕರ ನಡೆಯಲಿದೆ. ತದನಂತರ ಸೆಪ್ಟೆಂಬರ್ 28, 29 ಮತ್ತು 30 ರಂದು ಸತತ ಮೂರು ದಿನಗಳ ಕಾಲ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ, ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ UFBU ಎಚ್ಚರಿಸಿದೆ. ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಷನ್ ಸೇರಿದಂತೆ ಪ್ರಮುಖ ಒಕ್ಕೂಟಗಳು ಈ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ.

ಗ್ರಾಹಕರಿಗೆ ಎಚ್ಚರಿಕೆ: ಎಸ್‌ಬಿಐ ಸೇವೆಗಳಲ್ಲಿ ವ್ಯತ್ಯಯ

ಈ ಪ್ರತಿಭಟನೆಯ ಬಿಸಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ತಟ್ಟಲಿದ್ದು, ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. "ಮುಷ್ಕರದ ದಿನಗಳಂದು ಶಾಖೆಗಳು ಮತ್ತು ಕಚೇರಿಗಳ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ.

ಆದಾಗ್ಯೂ, ಮುಷ್ಕರದಿಂದಾಗಿ ಬ್ಯಾಂಕ್‌ನ ದೈನಂದಿನ ಕೆಲಸಗಳ ಮೇಲೆ, ವಿಶೇಷವಾಗಿ ನಗದು ವಹಿವಾಟು, ಚೆಕ್ ಕ್ಲಿಯರೆನ್ಸ್ ಮುಂತಾದ ಸೇವೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ," ಎಂದು ಎಸ್‌ಬಿಐ ಷೇರುಪೇಟೆಗಳಿಗೆ ಸಲ್ಲಿಸಿರುವ ನಿಯಂತ್ರಣ ಫೈಲಿಂಗ್‌ನಲ್ಲಿ ಸ್ಪಷ್ಟಪಡಿಸಿದೆ.

ಹಣಕಾಸು ಸಚಿವರ ಭೇಟಿ

5 ದಿನದ ಕೆಲಸದ ಜೊತೆಗೆ, ನೌಕರರ ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಪ್ರೋತ್ಸಾಹ ಧನ ನೀಡುವ ಸರ್ಕಾರದ ನಡೆಯನ್ನ ಯೂನಿಯನ್‌ಗಳು ವಿರೋಧಿಸುತ್ತಿವೆ. ಬ್ಯಾಂಕಿನ ಒಟ್ಟಾರೆ ಕಾರ್ಯಕ್ಷಮತೆಯ ಆಧಾರದ ಮೇಲೆ ಏಕರೂಪದ ಪ್ರೋತ್ಸಾಹ ಧನ ನೀಡಬೇಕು ಎಂಬುದು ಅವರ ವಾದ.

ಈ ನಿಟ್ಟಿನಲ್ಲಿ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನ ಪ್ರತಿನಿಧಿಸುವ ಬ್ಯಾಂಕ್ ಉದ್ಯೋಗಿಗಳ ನಿಯೋಗವು ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿ ಚರ್ಚಿಸಿದೆ.

ನಿವೃತ್ತ ನೌಕರರಿಗೆ ವೈದ್ಯಕೀಯ ಸೌಲಭ್ಯ, ಪ್ರಸ್ತುತ ಇರುವ ಪಿಎಲ್‌ಐ ಯೋಜನೆಯ ಪರಿಷ್ಕರಣೆ ಸೇರಿದಂತೆ ಹಲವು ಸಮಸ್ಯೆಗಳನ್ನ ನಿಯೋಗವು ಸಚಿವರ ಮುಂದಿಟ್ಟಿದೆ. ನೌಕರರ ಕಳವಳವನ್ನ ಆಲಿಸಿದ ಸಚಿವಾಲಯವು, 2025-26ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ 19.11.2024 ರ ಪಿಎಲ್‌ಐ ಯೋಜನೆಯ ಅನುಷ್ಠಾನವನ್ನು ಸದ್ಯಕ್ಕೆ ತಡೆಹಿಡಿಯಲು ಮತ್ತು ಮುಂದಿನ ದ್ವಿಪಕ್ಷೀಯ ಸೆಟಲ್‌ಮೆಂಟ್/ಜಾಯಿಂಟ್ ನೋಟ್ ಚರ್ಚೆಗಳ ಸಮಯದಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+