ಆರ್‌ಎಸ್‌ಎಸ್ ಕೂಡ ಏಕೆ ಬ್ಯಾನ್ ಆಗಬಾರದು?: ಕೇಂದ್ರ ನಾಯಕರ ಪ್ರತಿಕ್ರಿಯೆ!
ನವದೆಹಲಿ, ಸೆಪ್ಟೆಂಬರ್ 28: ಭಾರತದಲ್ಲಿ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಅನ್ನು ಮುಂದಿನ ಐದು ವರ್ಷಗಳ ಅವಧಿಗೆ ನಿಷೇಧಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.
ಭಯೋತ್ಪಾದನಾ ಸಂಘಟನೆಗಳ ಜೊತೆಗೆ ನಂಟು ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪಿಎಫ್ಐ ಕಚೇರಿ ಮೇಲೆ ಕೇಂದ್ರೀಯ ತನಿಖಾ ತಂಡಗಳು ದಾಳಿ ನಡೆಸಿದ್ದವು. ಈ ಬೆಳವಣಿಗೆ ಬೆನ್ನಲ್ಲೇ ಪಿಎಫ್ಐ ಅನ್ನು ನಿಷೇಧಿಸುವ ನಿರ್ಧಾರ ಹೊರಗೆ ಬಿದ್ದಿದ್ದು, ಈ ಕುರಿತು ರಾಷ್ಟ್ರೀಯ ನಾಯಕರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಪಿಎಫ್ಐ ನಿಷೇಧದ ಕುರಿತು ಆದೇಶ ಹೊರ ಬೀಳುತ್ತಿದ್ದಂತೆ ದೇಶದ ಹಲವು ಕಡೆಗಳಲ್ಲಿ ಇರುವ ಪಿಎಫ್ಐ ಕಚೇರಿಗಳ ಬಳಿ ಹೆಚ್ಚುವರಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿ ಅನ್ನು ನಿಯೋಜಿಸಲಾಗಿದೆ.
ದೇಶದಲ್ಲಿ ಪಿಎಫ್ಐ ನಿಷೇಧದ ಕುರಿತು ಬಿಜೆಪಿ ಬೆಂಬಲಿತ ನಾಯಕರು ಹೇಳುವುದೇನು?, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರು ಸರ್ಕಾರದ ನಿರ್ಧಾರಕ್ಕೆ ಏನ್ ಹೇಳುತ್ತಾರೆ?, ಪಿಎಫ್ಐ ನಿಷೇಧವನ್ನು ಬೆಂಬಲಿಸುವವರು ಯಾರು, ವಿರೋಧಿಸುವವರು ಯಾರು ಎಂಬುದರ ಕುರಿತು ಮುಂದೆ ಓದಿ ತಿಳಿಯಿರಿ.

ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಅರುಣ್ ಸಿಂಗ್
"ಭಾರತದ ಹಲವು ರಾಜ್ಯಗಳಲ್ಲಿ ಪಿಎಫ್ಐ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿವೆ. ದೇಶವನ್ನು ಒಡೆಯುವ ಮತ್ತು ಹಿಂಸಾಚಾರವನ್ನು ಹರಡುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ," ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಪಿಎಫ್ಐ ನಿಷೇಧದ ಬಗ್ಗೆ ಹೇಳೋದೇನು?
ಭಾರತ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅನ್ನು ನಿಷೇಧಿಸಿರುವುದಕ್ಕೆ ನಾನು ಸ್ವಾಗತಿಸುತ್ತೇನೆ. ಭಾರತದ ವಿರುದ್ಧ ಪೈಶಾಚಿಕ, ವಿಭಜಕ ಅಥವಾ ವಿಚ್ಛಿದ್ರಕಾರಕ ವಿನ್ಯಾಸವನ್ನು ಹೊಂದಿರುವ ಯಾರೇ ಆಗಿದ್ದರೂ ಅಂಥವರೊಂದಿಗೆ ಕಠಿಣವಾಗಿ ವ್ಯವಹರಿಸಬೇಕಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನ್ನ ಸಂಕಲ್ಪದಲ್ಲಿ ದೃಢವಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಆರ್‌ಎಸ್ಎಸ್ ಅನ್ನು ಏಕೆ ನಿಷೇಧಿಸಬಾರದು?
ಪಿಎಫ್ಐ ರೀತಿಯಲ್ಲೇ ಆರ್‌ಎಸ್‌ಎಸ್ ಅನ್ನು ಸಹ ನಿಷೇಧಿಸಬೇಕೆಂದು ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ಮುಖ್ಯ ಸಚೇತಕ ಕೋಡಿಕುನ್ನಿಲ್ ಸುರೇಶ್ ಒತ್ತಾಯಿಸಿದ್ದಾರೆ. ಪಿಎಫ್ಐ ನಿಷೇಧ ಎನ್ನುವುದು ಪರಿಹಾರವಲ್ಲ, ಆರ್‌ಎಸ್ಎಸ್ ಕೂಡ ದೇಶದಾದ್ಯಂತ ಹಿಂದೂ ಕೋಮುವಾದವನ್ನು ಹರಡುತ್ತಿದೆ. ಆರ್‌ಎಸ್‌ಎಸ್ ಮತ್ತು ಪಿಎಫ್‌ಐ ಎರಡೂ ಸಮಾನವಾಗಿವೆ. ಆದ್ದರಿಂದ ಸರ್ಕಾರ ಎರಡನ್ನೂ ನಿಷೇಧಿಸಬೇಕು. ಪಿಎಫ್ಐ ಮಾತ್ರ ಏಕೆ ನಿಷೇಧ ಆಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳುವುದೇನು?
'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆಗಳನ್ನು ಎತ್ತುವ ಪಿಎಫ್‌ಐಗೆ ದೇಶದಲ್ಲಿ ಅಂತಹ ಘೋಷಣೆಗಳನ್ನು ಎತ್ತುವ ಹಕ್ಕು ಇಲ್ಲ. ಈ ಬಗ್ಗೆ ಗೃಹ ಸಚಿವಾಲಯ ಕ್ರಮ ಕೈಗೊಳ್ಳಲಿದೆ. ಕೇಂದ್ರ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿದೆ. ಇದು ದೇಶಪ್ರೇಮಿಗಳ ದೇಶ ಎಂದು ಮಹಾರಾಷ್ಟ್ರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಫಿಎಫ್ಐ ನಿಷೇಧವನ್ನು ಸ್ವಾಗತಿಸಿದ ಯೋಗಿ ಆದಿತ್ಯನಾಥ್
ಭಾರತದಲ್ಲಿ ಪಿಎಫ್ಐ ನಿಷೇಧವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ. ಇದು 'ನವ ಭಾರತ'ವಾಗಿದ್ದು, ಭಯೋತ್ಪಾದಕರು, ಅಪರಾಧಿಗಳು ಮತ್ತು ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಬೆದರಿಕೆ ಹಾಕುವ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.












Click it and Unblock the Notifications