ವಿಚಾರಣೆ ಮುಂದೂಡುವಂತೆ ಇಡಿಗೆ ಸೋನಿಯಾ ಗಾಂಧಿ ಮನವಿ
ನವದೆಹಲಿ, ಜೂನ್ 22: ಕೊರೋನಾ ವೈರಸ್ ಸೋಂಕಿಗೊಳಗಾಗಿ ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಸೋನಿಯಾ ಗಾಂಧಿಗೆ ಈಗ ಇಡಿ ವಿಚಾರಣೆಯ ಸವಾಲು ಎದುರಾಗಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಮುಂದೆ ನಾಳೆ ಗುರುವಾರ ವಿಚಾರಣೆ ಹಾಜರಾಗಬೇಕಿರುವ ಸೋನಿಯಾ ಗಾಂಧಿ ಇದೀಗ ಇನ್ನಷ್ಟು ಕಾಲಾವಕಾಶ ಕೋರಿದ್ದಾರೆ.
ಜೂನ್ 8ರಂದೇ ಸೋನಿಯಾ ಗಾಂಧಿ ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಜೂನ್ 2ರಂದು ಅವರಿಗೆ ಕೋವಿಡ್ ಸೋಂಕು ತಗಲಿದ್ದು ದೃಢಪಟ್ಟಿತ್ತು. ಆಗ ಅವರು ಇಡಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದರು. ಅದರಂತೆ ಜೂನ್ 22ರಂದು ಸೋನಿಯಾ ಗಾಂಧಿ ಅವರಿಗೆ ವಿಚಾರಣೆ ಹಾಜರಾಗುವಂತೆ ಇಡಿ ಹೊಸದಾಗಿ ಸಮನ್ಸ್ ಕೊಟ್ಟಿತು.
ಜೂನ್ 12ರಂದು ಉಸಿರಾಟದ ತೊಂದರೆಯಿಂದ ಸೋನಿಯಾ ಗಾಂಧಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾದರು. ಜೂನ್ 20ರಂದು ಅವರು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾದರು. ಈಗ ಇನ್ನಷ್ಟು ದಿನಗಳ ನಂತರ ವಿಚಾರಣೆಗೆ ಹಾಜರಾಗುವುದಾಗಿ ಇಡಿಗೆ ಅವರು ಮನವಿ ಮಾಡಿದ್ದಾರೆ. ಇಡಿ ಇದಕ್ಕೆ ಒಪ್ಪುವ ಸಾಧ್ಯತೆ ದಟ್ಟವಾಗಿದೆ.

ರಾಹುಲ್ ಗಾಂಧಿ ವಿಚಾರಣೆ:
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅವ್ಯವಹಾರ ಆರೋಪ ಇರುವ ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನ ಜಾರಿ ನಿರ್ದೇಶನಾಲಯ ಬಹಳ ಸುದೀರ್ಘವಾಗಿ ವಿಚಾರಣೆ ನಡೆಸಿದೆ.
ಇಡಿ ಅಧಿಕಾರಿಗಳು ಈವರೆಗೆ ರಾಹುಲ್ ಗಾಂಧಿ ಅವರನ್ನು ೪೦ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ಧಾರೆ. ಜೂನ್ 13ರಿಂದ 15ರವರೆಗೆ 27 ಗಂಟೆಗಳ ಕಾಲ ರಾಹುಲ್ ವಿಚಾರಣೆ ಎದುರಿಸಿದ್ದರು.
ಆ ಬಳಿಕ ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ ಇರುವ ಕಾರಣಕ್ಕೆ ರಾಹುಲ್ ಗಾಂಧಿ ಅವರ ವಿಚಾರಣೆಯನ್ನು ಮುಂದೂಡಿ ಜೂನ್ 20ಕ್ಕೆ ಮತ್ತೆ ವಿಚಾರಣೆ ನಡೆಸಲಾಯಿತು. ಅಂದು 14 ಗಂಟೆಗಳ ಕಾಲ ಸತತವಾಗಿ ವಿಚಾರಣೆ ಎದುರಿಸಿದ ರಾಹುಲ್ ಗಾಂಧಿ ನಿನ್ನೆ ಮಂಗಳವಾರ ಇಡಿ ಕಚೇರಿಯಿಂದ ಹೊರಬಂದರು.
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
ಸ್ವಾತಂತ್ರ್ಯಪೂರ್ವದಲ್ಲಿ ಜವಾಹರಲಾಲ್ ನೆಹರೂ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರಿಂದ ಆರಂಭವಾದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಷಿಯೇಟೆಟ್ ಜರ್ನಲ್ ಲಿ (ಎಜೆಎಲ್) ಮುದ್ರಿಸುತ್ತಿತ್ತು. 2010ರಲ್ಲಿ ಕಾಂಗ್ರೆಸ್ ಪಕ್ಷದವರೇ ಆರಂಭಿಸಿದ ಯಂಗ್ ಇಂಡಿಯಾ ಎಂಬ ಕಂಪನಿಯು ಎಜೆಎಲ್ ಅನ್ನು ಖರೀದಿಸಿತು. ರಾಹುಲ್ ಮತ್ತು ಸೋನಿಯಾ ಗಾಂಧಿ ಈ ಯಂಗ್ ಇಂಡಿಯಾದಲ್ಲಿ ಬಹುಪಾಲು ಷೇರುಗಳನ್ನು ಹೊಂದಿದ್ದಾರೆ. ಎಜೆಎಲ್‌ನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದು ಈಗ ರಾಹುಲ್ ಮತ್ತು ಸೋನಿಯಾ ಗಾಂಧಿ ಮೇಲಿರುವ ಆರೋಪ.

ಅಕ್ರಮ ರೀತಿಯಲ್ಲಿ ಎಜೆಎಲ್ ಅನ್ನು ಖರೀದಿ ಮಾಡಲಾಗಿದೆ. ಇದು ಎಜೆಎಲ್‌ನ ಅಸ್ತಿಯನ್ನು ಲಪಟಾಯಿಸುವ ದುರುದ್ದೇಶವಿತ್ತು. ಅಕ್ರಮ ರೀತಿಯಲ್ಲಿ ಎಜೆಎಲ್‌ನ ಎಲ್ಲಾ ಆಸ್ತಿಯನ್ನೂ ಯಂಗ್ ಇಂಡಿಯಾಗೆ ವರ್ಗಾಯಿಸಲಾಯಿತು. ಎಜೆಎಲ್ ಹೊಂದಿದ್ದ ಆಸ್ತಿಯ ಮೌಲ್ಯ ಇದೀಗ ಸಾವಿರ ಕೋಟಿಯಷ್ಟು ಇದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications