ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ನರೇಂದ್ರ ಮೋದಿ ಮೊದಲ ಭಾಷಣ

By Prasad
|
Google Oneindia Kannada News

ನವದೆಹಲಿ, ಜೂ. 11 : "ಪುಣೆಯಲ್ಲಿ, ಉತ್ತರಪ್ರದೇಶದಲ್ಲಿ ಅಥವಾ ಮನಾಲಿಯಲ್ಲಿ ನಡೆದ ದುರ್ಘಟನೆಗಳು ನಿಜಕ್ಕೂ ದುರದೃಷ್ಟಕರ ಮತ್ತು ನೋವು ತರುವಂಥದ್ದು. ಅತ್ಯಾಚಾರ ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಮಹಿಳೆಯ ಗೌರವ, ಘನತೆಯೊಂದಿಗೆ ನಾವು ಆಟವಾಡುತ್ತಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕಿಡಿಕಾರಿದ್ದಾರೆ.

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಅಮಾನವೀಯ ಅತ್ಯಾಚಾರಗಳ ಬಗ್ಗೆ ಭಾವುಕರಾಗಿ ಮಾತನಾಡಿರುವ ನರೇಂದ್ರ ಮೋದಿ ಅವರು, ಬದೌನ್ ನಲ್ಲಿ ನಡೆದ ಸಹೋದರಿಯರ ಅತ್ಯಾಚಾರ, ಪುಣೆಯಲ್ಲಿ ನಡೆದ ಟೆಕ್ಕಿಯ ಬರ್ಬರ ಹತ್ಯೆ, ಮನಾಲಿಯಲ್ಲಿ ನೀರು ಪಾಲಾದ ಹೈದರಾಬಾದ್ ವಿದ್ಯಾರ್ಥಿಗಳ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.

ಸಂಸದನಾಗಿ ಮೊದಲ ಬಾರಿ ಸಂಸತ್ತು ಪ್ರವೇಶಿಸಿರುವ ಮೋದಿ ಅವರು, ಲೋಕಸಭೆಯನ್ನು ಮೊದಲ ಬಾರಿಗೆ ಉದ್ದೇಶಿಸಿ ಬುಧವಾರ ಪ್ರಖರ ಭಾಷಣ ಮಾಡಿದರು. ಉನ್ನತ ಮೌಲ್ಯವನ್ನು ಎತ್ತಿಹಿಡಿಯುವ ಸಂಸತ್ತಿನಲ್ಲಿ ಹಲವಾರು ಹಿರಿಯರಿದ್ದಾರೆ. ನಾನು ಹೊಸಬನಾಗಿರುವುದರಿಂದ ತಪ್ಪೇನಾದರೂ ಎಸಗಿದರೆ ಲೋಕಸಭೆಯಲ್ಲಿರುವ ಹಿರಿಯರು ಮನ್ನಿಸಬೇಕೆಂದು ಕೋರಿದರು.

Narendra Modi's response to President speech

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಾಡಿದ ಭಾಷಣಕ್ಕೆ ಪ್ರತಿಸ್ಪಂದಿಸುತ್ತಿದ್ದ ಅವರು, ರಾಷ್ಟ್ರಪತಿಯವರು ಮಾಡಿದ ಎಲ್ಲ ವಾಗ್ದಾನಗಳನ್ನು ಪೂರೈಸುವ ಮತ್ತು ಎಲ್ಲ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎಷ್ಟೋ ವರ್ಷಗಳ ನಂತರ ಜನರು ಸ್ಥಿರತೆಗಾಗಿ, ಅಭಿವೃದ್ಧಿಗಾಗಿ, ಉತ್ತಮ ಆಡಳಿತಕ್ಕಾಗಿ ಮತ ಹಾಕಿದ್ದಾರೆ ಎಂದು ಮೋದಿ ಭಾಷಣದಲ್ಲಿ ನುಡಿದರು.

ಕಾಂಗ್ರೆಸ್ ಜೊತೆಯಲ್ಲಿ ಸಾಗುವೆ : "ಚುನಾವಣೆಯಲ್ಲಿನ ವಿಜಯ ನಮಗೆ ವಿನಮ್ರತೆಯನ್ನು ಕಲಿಸಿದೆ. ಇಂಥ ವಿಜಯದಿಂದ ನಾವು ಕಲಿಯುವುದು ಸಾಕಷ್ಟಿದೆ. ಆದರೆ, ನಿಮ್ಮ ಬೆಂಬಲವಿಲ್ಲದೆ ನಾನು ಮುಂದುವರಿಯುವುದನ್ನು ಇಷ್ಟಪಡುವುದಿಲ್ಲ. ಒಗ್ಗಟ್ಟಿನಿಂದಲೇ ಮುಂದುವರಿಯುತ್ತೇನೆ" ಎಂದು ವಿನಮ್ರತಾ ಭಾವದಿಂದ ಮೋದಿ ಅವರು ಕಾಂಗ್ರೆಸ್ ಪಕ್ಷ ಮತ್ತು ಎಲ್ಲ ಸಂಸದರನ್ನು ತಬ್ಬಿಬ್ಬುಗೊಳಿಸಿದರು ಮತ್ತು ಮೆಚ್ಚುಗೆಗೆ ಪಾತ್ರರಾದರು.

ಗಾಂಧಿ ತತ್ತ್ವದಲ್ಲಿ ನಂಬಿಕೆ : "ಕ್ರಿಕೆಟ್ ವಿಷಯ ಬಂದಾಗ ಇಡೀ ದೇಶ ಒಗ್ಗಟ್ಟಾಗಿರಬೇಕಾದರೆ, ಅಭಿವೃದ್ಧಿಗಾಗಿ ಏಕೆ ಒಗ್ಗಟ್ಟಾಗಬಾರದು? ಒಬ್ಬ ಶಿಕ್ಷಕ ಕೂಡ ಓರ್ವ ವಿದ್ಯಾರ್ಥಿಗೆ ಕಲಿಸುತ್ತಿದ್ದೇನೆಂದು ಭಾವಿಸದೆ, ದೇಶಕ್ಕಾಗಿ ಕಲಿಸುತ್ತಿದ್ದೇನೆಂದು ಭಾವಿಸಬೇಕು. ಇಡೀ ದೇಶದ ಜನತೆ ತಮ್ಮ ಪ್ರಯತ್ನ ರಾಷ್ಟ್ರದ ಅಭಿವೃದ್ಧಿಗಾಗಿ ಎಂದು ತಿಳಿಯಬೇಕು. ಈ ಪ್ರಕ್ರಿಯೆ ಒಂದು ಬೃಹತ್ ಚಳವಳಿಯಾಗಬೇಕು."

"ಸ್ವಾತಂತ್ರ್ಯಪೂರ್ವದಲ್ಲಿ ಹೇಗೆ ಮಹಾತ್ಮಾ ಗಾಂಧಿ ಅವರು, ಪ್ರತಿಯೊಬ್ಬರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟರೋ, ಹಾಗೆಯೆ ಅಭಿವೃದ್ಧಿಯೂ 'ದೇಶ ಸೇವೆ' ಎಂದು ಪ್ರತಿಯೊಬ್ಬರೂ ಪರಿಭಾವಿಸಬೇಕು. ಮಹಾತ್ಮಾ ಗಾಂಧಿಯವರ 150ನೇ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕೆಂದು ಇಂದೇ ಯೋಜಿಸಿಟ್ಟುಕೊಳ್ಳಬೇಕು" ಎಂದು ಮಾತಿನ ಲಹರಿ ಹರಿಸಿದರು.


ಮುಸ್ಲಿಂರು ಏಕೆ ಹಿಂದುಳಿದಿದ್ದಾರೆ? : ಮುಸ್ಲಿಂರು ಇಂದು ಏಕೆ ಇಂಥ ಹೀನಾಯ ಸ್ಥಿತಿಯಲ್ಲಿದ್ದಾರೆ? ನಾನು ಚಿಕ್ಕವನಿದ್ದಾಗ ಒಬ್ಬ ನನ್ನ ಸೈಕಲ್ ರಿಪೇರಿ ಮಾಡುತ್ತಿದ್ದ. ಇಂದು ಆತನ ಮಗ ರಿಪೇರಿ ಮಾಡುತ್ತಿದ್ದಾನೆ. ಇದು ಏಕೆ ಹೀಗೆ? ನಾವೆಲ್ಲ ಅವರ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ. ಸಮಾಜದಲ್ಲಿ ಯಾವುದೇ ವರ್ಗಕ್ಕೆ ಅಧಿಕಾರವಿಲ್ಲದಿದ್ದರೆ, ಸಮಾಜ ಎಂದೂ ಮೆಚ್ಚುಗೆಗೆ ಪಾತ್ರವಾಗುವುದಿಲ್ಲ ಎಂದು ಅವರು ಮನದಾಳದ ಮಾತನ್ನು ನುಡಿದರು.

ಬೆಲೆ ಏರಿಕೆ ತಗ್ಗಿಸುತ್ತೇವೆ : ಬೆಲೆ ಏರಿಕೆ ಇಂದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಬೆಲೆ ಇಳಿಸಲು ಮಾಡಬೇಕಾದ ಎಲ್ಲ ಪ್ರಯತ್ನ ಮಾಡುತ್ತೇವೆ. ಇದು ನಾವು ಮಾಡುತ್ತಿರುವ ಭರವಸೆಯಲ್ಲ. ದೇಶದ ಯಾವುದೇ ವ್ಯಕ್ತಿ ಹಸಿವಿನಿಂದ ಬಳಲುವಂತಾಗಬಾರದು. ಈ ಸರಕಾರ ಇರುವುದೇ ಬಡವರಿಗಾಗಿ. ಶ್ರೀಮಂತರು ಬೇಕಾದಂಥ ಶಿಕ್ಷಣ ಪಡೆಯುತ್ತಾರೆ, ಬಡವರೇನು ಮಾಡಬೇಕು? ಬಡವರು ಬಡತನದಿಂದ ಹೊರಬರುವಂತೆ ಮಾಡಬೇಕು. ಇದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ತಮ್ಮ ಅಭಿಪ್ರಾಯವನ್ನು ಮೋದಿ ಹಂಚಿಕೊಂಡರು.

English summary
In his first address in Parliament, Prime Minister Narendra Modi on Wednesday responded in the Lok Sabha, to the questions raised by the President Pranb Mukherjee in his address on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X