ಗುಜರಾತ್; ಮೊರ್ಬಿಗೆ ಸೇತುವೆ ಕುಸಿದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ
ಅಹಮದಾಬಾದ್, ನವೆಂಬರ್ 1: ಗುಜರಾತ್‌ನ ಮೊರ್ಬಿಯಲ್ಲಿ ಭಾನುವಾರ ಸಂಭವಿಸಿದ ದುರಂತದಲ್ಲಿ 135ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಣೆಯಾದವರ ಶೋಧ ಕಾರ್ಯ ಮುಂದುವರಿದಿದೆ.
ದುರಂತ ನಡೆದ ಸ್ಥಳಕ್ಕೆ ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆಯಾದರು. ಮಚ್ಚು ನದಿಯಲ್ಲಿ ನಡೆಯುತ್ತಿರುವ ಶೋಧ ಕಾರ್ಯಚರಣೆಯ ಬಗ್ಗೆ ಪ್ರಧಾನಿ ಮೋದಿ ವಿವರಣೆ ಪಡೆದರು.
ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ಪ್ರಧಾನಿ ಮೋದಿ ಭೇಟಿಯಾಗಿ ನೈತಿಕ ಬೆಂಬಲ ನೀಡಿದರು. ಇದೇ ಸಂದರ್ಭದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಸಾಂತ್ವನ ಹೇಳಲು ಮೊರ್ಬಿ ಸಿವಿಲ್ ಆಸ್ಪತ್ರೆಗೆ ಭೇಟಿ ಕೊಟ್ಟರು.

ಇಂದು ಮುಂಜಾನೆ ಗುಜರಾತ್‌ನ ಗಾಂಧಿನಗರದ ರಾಜಭವನದಲ್ಲಿ ಮೊರ್ಬಿಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದರು. ಘಟನಾ ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಚರಣೆಗಳ ಕುರಿತು ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದರು.
ಮೊರ್ಬಿಯಲ್ಲಿ ಮುಂದುವರಿದ ಶೋಧ ಕಾರ್ಯ; ಮೊರ್ಬಿಯಲ್ಲಿ ನಡೆದ ಅಪಘಾತದಲ್ಲಿ ಈಗಾಗಲೇ 135 ಜನರು ಮೃತಪಟ್ಟಿದ್ದಾರೆ. ದುರಂತದಲ್ಲಿ ಕಾಣೆಯಾದವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶತಮಾನಕ್ಕೂ ಹಳೆಯದಾದ ಸೇತುವೆಯನ್ನು ಗಡಿಯಾರ ತಯಾರು ಮಾಡುವ ಕಂಪನಿಯೊಂದು ದುರಸ್ತಿ ಮಾಡಿತ್ತು. ಅಕ್ಟೋಬರ್ 26ರಂದು ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರಿಸಲಾಗಿತ್ತು. ಭಾನುವಾರ ಸುಮಾರು 500ಕ್ಕೂ ಅಧಿಕ ಜನರು ಸೇತುವೆಯ ಮೇಲೆ ಸಾಗುತ್ತಿದ್ದರು. ಆ ಸಮಯದಲ್ಲಿ ದುರಂತ ಸಂಭವಿಸಿತು

ಈ ಅಪಘಾತದಲ್ಲಿ ಸುಮಾರು 135ಕ್ಕೂ ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ 50 ಮಕ್ಕಳು ಹಾಗೂ 40 ಮಹಿಳೆಯರೂ ಸೇರಿದ್ದಾರೆ. ಹಲವರು ದೇಹಗಳು ಇನ್ನೂ ನೀರಿನ ಅಡಿಯಲ್ಲಿ ಉಳಿದುಕೊಂಡಿವೆ. ಅವುಗಳ ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ದೂರ ದಾಖಲಿಸಿಕೊಳ್ಳಲಾಗಿದೆ.
ಅರ್ಹತಾ ಪ್ರಮಾಣ ಪತ್ರ ಪಡೆದಿರಲಿಲ್ಲ; 135 ವರ್ಷಗಳಿಗೂ ಹಳೆಯದಾದ ಸೇತುವೆ ದುರುಸ್ತಿ ಕಾರ್ಯವನ್ನು ಮಾರ್ಚ್‌ನಿಂದ ಕೈಗೆತ್ತಿಕೊಳ್ಳಲಾಗಿತ್ತು. ಈ ತೂಗು ಸೇತುವೆಯನ್ನು 26ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರಿಸಲಾಯಿತು. ತೂಗು ಸೇತುವೆಯ ದುರಸ್ತಿ ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯು ಅರ್ಹತಾ ಪ್ರಮಾಣ ಪತ್ರವನ್ನೇ ಪಡೆದಿರಲಿಲ್ಲ ಎಂಬ ಮಾಹಿತಿ ಹೊರಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಮೊರ್ಬಿ ಪುರಸಭಾ ಅಧಿಕಾರಿ, 'ತೂಗು ಸೇತುವೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದೆ. ಇದು ಸಂಚಾರಕ್ಕೆ ಯೋಗ್ಯವಿರಲಿಲ್ಲ. ಶಿಥಿಲಾವಸ್ಥೆಯಲ್ಲಿದ್ದ, ಇದರ ನಿರ್ವಹಣಾ ಕಾಮಗಾರಿಯನ್ನು 15 ವರ್ಷಗಲ ಅವಧಿಗೆ ಒರೆವಾ ಕಂಪನಿಗೆ ನೀಡಲಾಗಿತ್ತು. ಮಾರ್ಚ್‌ನಲ್ಲಿ ದುರಸ್ತಿ ಕಾರ್ಯ ಆರಂಭವಾಗಿತ್ತು. ಹೀಗಾಗಿ, ಈ ಸೇತುವೆಯ ಮೇಲೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ದುರಸ್ತಿ ಕಾರ್ಯ ಮುಗಿದ ನಂತರ ಸಂಚಾರ ಮುಕ್ತ ಮಾಡಲಾಗಿತ್ತು. ಇದಕ್ಕೆ ಪುರಸಭೆಯಿಂದ ಅರ್ಹತಾ ಪ್ರಮಾಣ ಪತ್ರ ನೀಡಿರಲಿಲ್ಲ' ಎಂದು ತಿಳಿಸಿದ್ದಾರೆ.
ಒರೆವಾ ಕಂಪನಿಯು ಗಡಿಯಾರ, ಸೊಳ್ಳೆ ಬ್ಯಾಟ್‌ಗಳನ್ನು ತಯಾರು ಮಾಡುವ ಕಂಪನಿಯಾಗಿದೆ ಎಂದು ತಿಳಿದುಬಂದಿದೆ. ಈ ದುರಂತಕ್ಕೆ ಗುಜರಾತ್ ಸರ್ಕಾರವೇ ನೇರ ಹೊಣೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಗುಜರಾತ್ ಚುನಾವಣೆ ಸಮೀಪ ಇರುವಾಗ ಮೊಬ್ರಿ ಸೇತುವೆ ದುರಂತ ನಡೆದಿರುವುದು, ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಸಂಕಷ್ಟವನ್ನು ಉಂಟು ಮಾಡಿದೆ.
ದುರಂತದಲ್ಲಿ ಮರಣ ಹೊಂದಿರುವವರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ನೀಡಲಾಗಿದೆ.












Click it and Unblock the Notifications