ಎಐಸಿಸಿ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರಿಕೆ, ಏನಿದು ಮರ್ಮ?

Posted By:
Subscribe to Oneindia Kannada

ಎಐಸಿಸಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮತ್ತೆ ಒಂದು ವರ್ಷದ ಅವಧಿಗೆ ಮುಂದುವರಿಯುತ್ತಿರುವುದಕ್ಕೆ ಕಾರಣ ಏನಿರಬಹುದು? ಪುತ್ರ ರಾಹುಲ್ ಗಾಂಧಿ ವರ್ಚಸ್ಸು ಉಳಿಸಲು ಸೋನಿಯಾ ಈ ನಿರ್ಧಾರಕ್ಕೆ ಬಂದಿದ್ದಾರೆಯೇ?

ಕಾಂಗ್ರೆಸ್ ಆಪ್ತಮೂಲಗಳ ಪ್ರಕಾರ, ಮುಂಬರುವ ಉತ್ತರಪ್ರದೇಶ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ರಾಹುಲ್ ಗಾಂಧಿಯವರನ್ನು ಅಧ್ಯಕ್ಷ ಹುದ್ದೆಗೆ ನೇಮಕ ಮಾಡುವ ಪ್ರಕ್ರಿಯೆಗೆ ಸೋನಿಯಾ ಸದ್ಯಕ್ಕೆ ತಡೆಹಿಡಿದಿದ್ದಾರೆ ಎನ್ನಲಾಗುತ್ತಿದೆ. (ಇಂದಿರಾ, ರಾಜೀವ್, ಸೋನಿಯಾ, ಈಗ ರಾಹುಲ್ ಸರದಿ)

ಎಲ್ಲರಿಗಿಂತ ಮುಂದೆ ಚುನಾವಣಾ ಆಖಾಡಕ್ಕಿಳಿದಿದ್ದರೂ, ಉತ್ತರಪ್ರದೇಶದಲ್ಲಿ ಪಕ್ಷಕ್ಕೆ ಅನುಕೂಲಕರ ವಾತಾವರಣ ಇಲ್ಲದೇ ಇರುವುದರಿಂದ, ಸೋಲು ಎದುರಾದರೆ ರಾಹುಲ್ ಇದಕ್ಕೆ ಜವಾಬ್ದಾರಿಯಾಗುತ್ತಾರೆಂದು ಸೋನಿಯಾ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸೋಮವಾರ (ನ 7) ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ಹೆಸರನ್ನು ಅನುಮೋದಿಸಲಾಯಿತಾದರೂ, ಸೋನಿಯಾ ಸಭೆಗೆ ಗೈರಾಗಿದ್ದರಿಂದ, ಮುಂದಿನ ಒಂದು ವರ್ಷಕ್ಕೆ ಸೋನಿಯಾ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಎಲ್ಲಾ ಮುಖಂಡರು ರಾಹುಲ್ ಗಾಂಧಿ ಹೆಸರಿಗೆ ಚಕಾರ ಎತ್ತದಿದ್ದರೂ, ಉತ್ತರಪ್ರದೇಶ ಮತ್ತು ಪಂಜಾಬ್ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರವಷ್ಟೇ ರಾಹುಲ್ ಹೆಸರು ಅಧಿಕೃತವಾಗಿ ಅಧ್ಯಕ್ಷ ಹುದ್ದೆಗೆ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಮುಂದೆ ಓದಿ..

ರಾಹುಲ್ ಗಾಂಧಿ ಮತ್ತು ಶೀಲಾ ದೀಕ್ಷಿತ್

ರಾಹುಲ್ ಗಾಂಧಿ ಮತ್ತು ಶೀಲಾ ದೀಕ್ಷಿತ್

ರಾಹುಲ್ ಗಾಂಧಿ ಕಾರ್ಯವೈಖರಿ ಮತ್ತು ಶೀಲಾ ದೀಕ್ಷಿತ್ ಅವರನ್ನು ಉತ್ತರಪ್ರದೇಶದ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸ್ಥಳೀಯ ಮುಖಂಡರಲ್ಲಿ ಸಾಕಷ್ಟು ಅಸಮಾಧಾವಿರುವುದರಿಂದ ಈ ಹೊತ್ತಿನಲ್ಲಿ ರಾಹುಲ್ ಅವರನ್ನು ಪಕ್ಷದ ಪರಮೋಚ್ಚ ಸ್ಥಾನಕ್ಕೆ ಆಯ್ಕೆ ಮಾಡಿದರೆ, ಬರುವ ಮತಗಳಿಗೂ ಸಂಚಕಾರ ಬೀಳಬಹುದು ಎಂದರಿತಿರುವ ಸೋನಿಯಾ, ಜಾಣ್ಮೆಯ ನಡೆಯಿಟ್ಟಿದ್ದಾರೆಂದು ಕೆಲವೊಂದು ಪತ್ರಿಕೆಗಳು ವರದಿ ಮಾಡಿವೆ.

ಮನಮೋಹನ್ ಸಿಂಗ್

ಮನಮೋಹನ್ ಸಿಂಗ್

ಪಕ್ಷದ ಚಟುವಟಿಕೆಗಳಲ್ಲಿ ತುಂಬಾ ಸಕ್ರಿಯವಾಗಿರದ ಮನಮೋಹನ್ ಸಿಂಗ್, ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದರು. ಜೊತೆಗೆ, ಚಿದಂಬರಂ, ಎ ಕೆ ಆಂಟನಿ, ಗುಲಾಂನಬಿ ಆಜಾದ್, ಜನಾರ್ಧನ್ ದ್ವಿವೇದಿ, ಅಹಮದ್ ಪಟೇಲ್, ಅಂಬಿಕಾ ಸೋನಿ ಮುಂತಾದ ಹಿರಿಯರು ಸಭೆಯಲ್ಲಿ ಭಾಗವಹಿಸಿ ನೆಹರೂ - ಗಾಂಧಿ ಕುಟುಂಬದ ಮೇಲೆ ತಮ್ಮ ನಿಷ್ಠೆಯನ್ನು ಮುಂದುವರಿಸಿದ್ದಾರೆ.

ಎಐಸಿಸಿ ಉಪಾಧ್ಯಕ್ಷ

ಎಐಸಿಸಿ ಉಪಾಧ್ಯಕ್ಷ

ಉತ್ತರಪ್ರದೇಶದಲ್ಲಿ ಸ್ಥಳೀಯ ನಾಯಕರ ಮಾತಿಗೆ ರಾಹುಲ್ ಗಾಂಧಿ ಬೆಲೆಕೊಡುತ್ತಿಲ್ಲ ಎನ್ನುವ ಕೂಗು ಚುನಾವಣೆಯ ಹೊಸ್ತಿಲಲ್ಲಿ ತೀವ್ರಗೊಂಡಿರುವುದರಿಂದ, ತಮ್ಮ ರಾಜಕೀಯ ಕರ್ಮಭೂಮಿಯ ರಾಜ್ಯದ ಚುನಾವಣೆಯಲ್ಲಿ ಸೋನಿಯಾ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿಲ್ಲ.

ಪ್ರಶಾಂತ್ ಕಿಶೋರ್

ಪ್ರಶಾಂತ್ ಕಿಶೋರ್

ಚುನಾವಣೆ ತಂತ್ರಗಾರಿಕೆ ರೂಪಿಸಲು ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಆಯ್ಕೆಮಾಡಿಕೊಂಡ ನಂತರ ಸ್ಥಳೀಯ ಮುಖಂಡರ ಮತ್ತು ಹೈಕಮಾಂಡ್ ಅಂತರ ಇನ್ನಷ್ಟು ಹೆಚ್ಚಾಯಿತು, ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಮಾತಿಗೆ ಹೆಚ್ಚಿನ ಒತ್ತು ನೀಡುತ್ತಾರೆ ಎನ್ನುವ ಕೂಗು ಕಾರ್ಯಕರ್ತರ ವಲಯದಲ್ಲಿ ಹೆಚ್ಚಾಗುತ್ತಿದೆ.

ಮುಲಾಯಂ ಸಿಂಗ್

ಮುಲಾಯಂ ಸಿಂಗ್

ಪ್ರಶಾಂತ್ ಕಿಶೋರ್ ವಿಚಾರದಲ್ಲಿ ಉತ್ತರಪ್ರದೇಶ ಮುಖಂಡರ ಅಸಮಾಧಾನದ ನಡುವೆ, ದೆಹಲಿಯ ಕೆಲವು ಹಿರಿಯ ಮುಖಂಡರಿಗೂ ಬೇಸರವಿದೆ. ಮುಲಾಯಂ ಸಿಂಗ್ ಯಾದವ್ ಮತ್ತು ಅಮರ್ ಸಿಂಗ್ ಅವರನ್ನು ಪ್ರಶಾಂತ್ ಕಿಶೋರ್ ಭೇಟಿಯಾಗಿದ್ದು ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನುವುದು ಕೆಲವು ಕಾಂಗ್ರೆಸ್ ಮುಖಂಡರ ಅಭಿಪ್ರಾಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
AICC Chief Sonia Gandhi decided to name Rahul Gandhi as AICC President only after Uttar Pradesh election, Sources.
Please Wait while comments are loading...