CCTV ಇಲ್ಲ, ಮಾಲೀಕನೂ ಇಲ್ಲ, ಕೇವಲ ನಂಬಿಕೆಯೇ ಬಂಡವಾಳ: ಇಲ್ಲಿನ ಅಂಗಡಿಗಳೇ ಒಂದು ವಿಸ್ಮಯ
ಇಂದಿನ ದಿನಗಳಲ್ಲಿ ಒಂದು ಸಣ್ಣ ಕಿರಾಣಿ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್‌ಗಳವರೆಗೆ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳು, ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಬಿಲ್ ಮಾಡಲು ಸಿಬ್ಬಂದಿ ಇರುವುದು ಸಾಮಾನ್ಯ. ಯಾರಾದರೂ ವಸ್ತುಗಳನ್ನ ಕದಿಯಬಹುದು, ಕಳ್ಳತನವಾಗಬಹುದು ಎಂಬ ಆತಂಕ ಎಲ್ಲ ವ್ಯಾಪಾರಿಗಳಲ್ಲೂ ಇದ್ದೇ ಇರುತ್ತದೆ. ಆದರೆ, ಭಾರತದ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್‌ನಲ್ಲಿ ಒಂದು ವಿಶಿಷ್ಟವಾದ ಸಂಸ್ಕೃತಿ ಇದೆ.
ನಾಗಾಲ್ಯಾಂಡ್‌ನಲ್ಲಿರುವ ಕೆಲವು ಅಂಗಡಿಗಳಲ್ಲಿ ಸಿಸಿಟಿವಿ ಇಲ್ಲ, ಸೆಕ್ಯುರಿಟಿ ಗಾರ್ಡ್‌ಗಳಿಲ್ಲ, ಅಷ್ಟೇ ಏಕೆ ಅಂಗಡಿಯ ಮಾಲೀಕನೂ ಅಲ್ಲಿರುವುದಿಲ್ಲ. ಹೌದು, ಕೇವಲ ಜನರ ಪ್ರಾಮಾಣಿಕತೆ ಮತ್ತು ನಂಬಿಕೆಯ ಆಧಾರದ ಮೇಲೆ ನಡೆಯುವ ಈ ಪ್ರಾಮಾಣಿಕ ಅಂಗಡಿಗಳು ಇದೀಗ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿವೆ.

ನಾಗಾಲ್ಯಾಂಡ್‌ನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಟೆಮ್ಜೆನ್ ಇಮ್ನಾ ಅಲಾಂಗ್ ಅವರು ಇತ್ತೀಚೆಗೆ ಎಕ್ಸ್‌ನಲ್ಲಿ ಈ ವಿಶಿಷ್ಟ ಅಂಗಡಿಗಳ ಬಗ್ಗೆ ಪೋಸ್ಟ್ ಮಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ನಾಗಾಲ್ಯಾಂಡ್‌ನ ಈ ಅಂಗಡಿಗಳು ಕಾರ್ಯನಿರ್ವಹಿಸುವುದು ಹೇಗೆ?
ನಾಗಾಲ್ಯಾಂಡ್‌ನ ಹಲವು ಹಳ್ಳಿಗಳಲ್ಲಿ ಹಾಗೂ ಈಶಾನ್ಯ ಭಾರತದ ಇತರ ಕೆಲವು ಭಾಗಗಳಲ್ಲಿ ಇಂತಹ ಮಾಲೀಕರಿಲ್ಲದ ಅಂಗಡಿಗಳನ್ನ ನಾವು ಕಾಣಬಹುದು. ರಸ್ತೆಯ ಬದಿಯಲ್ಲಿರುವ ಈ ಸಣ್ಣ ಮಳಿಗೆಗಳಲ್ಲಿ ಗ್ರಾಹಕರು ಬಂದು ತಮಗೆ ಬೇಕಾದ ವಸ್ತುಗಳನ್ನ ಆರಿಸಿಕೊಳ್ಳುತ್ತಾರೆ. ಪ್ರತಿಯೊಂದು ವಸ್ತುವಿನ ಪಕ್ಕದಲ್ಲಿಯೂ ಅದರ ಬೆಲೆಯನ್ನು ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ.
ಗ್ರಾಹಕರು ತಾವು ಖರೀದಿಸಿದ ವಸ್ತುವಿನ ಬೆಲೆಯನ್ನು ಲೆಕ್ಕಹಾಕಿ, ಅಲ್ಲಿಯೇ ಇಟ್ಟಿರುವ ಒಂದು ನಿರ್ದಿಷ್ಟ ಹಣದ ಪೆಟ್ಟಿಗೆಯಲ್ಲಿ ಹಾಕಿ ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೂ ಅವಕಾಶ ಕಲ್ಪಿಸಲಾಗಿದ್ದು, ಯುಪಿಐ ಕ್ಯೂಆರ್ ಕೋಡ್‌ಗಳನ್ನ ಸಹ ಕೆಲವು ಅಂಗಡಿಗಳಲ್ಲಿ ಅಳವಡಿಸಲಾಗಿದೆ. ಇಲ್ಲಿ ಯಾರೂ ಯಾರನ್ನೂ ಪ್ರಶ್ನಿಸುವುದಿಲ್ಲ, ಕೇವಲ ಶಿಸ್ತು ಮತ್ತು ಪ್ರಾಮಾಣಿಕತೆಯೇ ವ್ಯವಹಾರವನ್ನ ಮುನ್ನಡೆಸುತ್ತದೆ.
ಸಚಿವ ಟೆಮ್ಜೆನ್ ಇಮ್ನಾ ಅಲಾಂಗ್ ಮೆಚ್ಚುಗೆ ಮತ್ತು ಪೋಸ್ಟ್ ವೈರಲ್
ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಹಾಗೂ ತಮ್ಮ ಹಾಸ್ಯಭರಿತ ಪೋಸ್ಟ್‌ಗಳಿಂದಲೇ ಗಮನ ಸೆಳೆಯುವ ಸಚಿವ ಟೆಮ್ಜೆನ್ ಇಮ್ನಾ ಅಲಾಂಗ್ ಅವರು ಈ ಪದ್ಧತಿಯನ್ನ ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ. ರಸ್ತೆ ಬದಿಯ ಇಂತಹದ್ದೊಂದು ಅಂಗಡಿಯ ಚಿತ್ರವನ್ನ ಹಂಚಿಕೊಂಡಿರುವ ಅವರು, "ಮಾಲೀಕನಿಲ್ಲ, ಸಿಸಿಟಿವಿ ಇಲ್ಲ, ಕೇವಲ ನಂಬಿಕೆ. ನೀವು ವಾಸಿಸುವ ಊರಿನಲ್ಲಿ ಇಂತಹ ವ್ಯವಸ್ಥೆ ಯಶಸ್ವಿಯಾಗಬಹುದೇ?" ಎಂದು ಜನರನ್ನು ಪ್ರಶ್ನಿಸಿದ್ದಾರೆ.
ಅಂಗಡಿಯಲ್ಲಿ ಕಾವಲಿಗೆ ಯಾರೂ ಇಲ್ಲದಿದ್ದರೂ ಗ್ರಾಹಕರು ಪ್ರಾಮಾಣಿಕವಾಗಿ ಹಣ ಪಾವತಿಸುತ್ತಾರೆ ಎಂಬ ನಂಬಿಕೆಯೇ ಈ ವ್ಯವಹಾರದ ಮೂಲಾಧಾರ ಎಂದು ಅವರು ಬಣ್ಣಿಸಿದ್ದಾರೆ.
ಮಹಿಳಾ ರೈತೆಯರಿಂದ ನಿರ್ವಹಣೆ ಹಾಗೂ ಸ್ಥಳೀಯ ಉತ್ಪನ್ನಗಳ ಮಾರಾಟ
ವರದಿಗಳ ಪ್ರಕಾರ, ನಾಗಾಲ್ಯಾಂಡ್‌ನ ಫುಟ್ಸೆರೊ ಸೇರಿದಂತೆ ವಿವಿಧ ಭಾಗಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ಇಂತಹ ಪ್ರಾಮಾಣಿಕ ಅಂಗಡಿಗಳನ್ನ ಮಹಿಳಾ ರೈತರೇ ನಿರ್ವಹಿಸುತ್ತಿದ್ದಾರೆ. ಈ ಮಹಿಳೆಯರು ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಬೆಳೆದ ತಾಜಾ ಹಣ್ಣುಗಳು, ತರಕಾರಿಗಳು, ಮನೆಯಲ್ಲಿಯೇ ತಯಾರಿಸಿದ ಉಪ್ಪಿನಕಾಯಿ, ಜಾಮ್ ಮತ್ತು ಜ್ಯೂಸ್‌ಗಳನ್ನ ತಂದು ಈ ಅಂಗಡಿಗಳಲ್ಲಿ ಜೋಡಿಸಿಡುತ್ತಾರೆ.
ये The OG नागालैंड है मेरे यार! https://t.co/3NRpkD0LxY
— Temjen Imna Along (@AlongImna) November 2, 2026
ನಂತರ ಅವರು ತಮ್ಮ ಕೃಷಿ ಕೆಲಸಗಳಿಗಾಗಿ ಜಮೀನಿಗೆ ತೆರಳುತ್ತಾರೆ. ಸಂಜೆ ಹಿಂದಿರುಗಿದಾಗ ತಾವು ಇಟ್ಟಿದ್ದ ವಸ್ತುಗಳು ಮಾರಾಟವಾಗಿರುತ್ತವೆ ಮತ್ತು ಅದಕ್ಕೆ ತಕ್ಕ ಹಣ ಆ ಪೆಟ್ಟಿಗೆಯಲ್ಲಿರುತ್ತದೆ. ಇದು ರೈತರಿಗೆ ತಮ್ಮ ಕೃಷಿ ಮತ್ತು ವ್ಯಾಪಾರ ಎರಡನ್ನೂ ಸರಿದೂಗಿಸಲು ಅತ್ಯುತ್ತಮ ರೀತಿಯಲ್ಲಿ ನೆರವಾಗಿದೆ.
ನಂಬಿಕೆ ಮತ್ತು ಪ್ರಾಮಾಣಿಕತೆಯೇ ವ್ಯವಹಾರದ ಜೀವಾಳ
ವ್ಯಾಪಾರ ಎಂದರೆ ಕೇವಲ ಲಾಭ-ನಷ್ಟಗಳ ಲೆಕ್ಕಾಚಾರವಲ್ಲ, ಅದು ಮನುಷ್ಯರ ನಡುವಿನ ಪರಸ್ಪರ ನಂಬಿಕೆಯ ಸಂಕೇತ. "ಕೆಲವೊಮ್ಮೆ ವ್ಯವಹಾರವನ್ನ ಮುನ್ನಡೆಸಲು ಕೇವಲ ನಂಬಿಕೆಯೊಂದಿದ್ದರೆ ಸಾಕು. ವ್ಯಾಪಾರವು ಕೇವಲ ಹಣದ ವಹಿವಾಟಿನ ಮೇಲೆ ನಿಂತಿರುವುದಿಲ್ಲ, ದೈನಂದಿನ ಸಣ್ಣಪುಟ್ಟ ವಿಚಾರಗಳಲ್ಲಿ ಜನರು ತೋರುವ ಪ್ರಾಮಾಣಿಕತೆಯ ಮೇಲೂ ಅವಲಂಬಿತವಾಗಿರುತ್ತದೆ" ಎಂಬ ಸಚಿವರ ಮಾತು ನೂರಕ್ಕೆ ನೂರು ಸತ್ಯ.
ಅಪರಾಧಗಳು ಹೆಚ್ಚುತ್ತಿರುವ ಇಂದಿನ ಆಧುನಿಕ ಜಗತ್ತಿಗೆ ನಾಗಾಲ್ಯಾಂಡ್‌ನ ಈ ಪ್ರಾಮಾಣಿಕ ಅಂಗಡಿಗಳು ಒಂದು ಸುಂದರ ಮತ್ತು ಆದರ್ಶಪ್ರಾಯವಾದ ಮಾದರಿಯಾಗಿ ನಿಂತಿವೆ.


Click it and Unblock the Notifications
