
ಆಗ್ನೇಯ ಏಷ್ಯನ್ ರಾಷ್ಟ್ರಗಳ ಒಕ್ಕೂಟದ ಸಭೆಯಲ್ಲಿ ಮಯನ್ಮಾರ್ ಇಲ್ಲ
ನವದೆಹಲಿ, ಜೂನ್ 16: ಭಾರತ ಆಯೋಜಿಸುತ್ತಿರುವ ಆಗ್ನೇಯ ಏಷ್ಯನ್ ರಾಷ್ಟ್ರಗಳ ಸಂಘಟನೆಯ 24ನೇ ಸಚಿವ ಸಭೆಯಲ್ಲಿ (ASEAN Countries Ministerial Meeting) ಮಯನ್ಮಾರ್ ಪಾಲ್ಗೊಳ್ಳುವ ಸಂಭವ ಇಲ್ಲ. ಮಯನ್ಮಾರ್ ದೇಶವನ್ನು ಈ ಸಭೆಯಿಂದ ಹೊರಗಿಡಬೇಕೆಂದು ಭಾರತದ ಮೇಲೆ ಒತ್ತಡವೂ ಇದೆ. ಹೀಗಾಗಿ, ಗುರುವಾರ ಮತ್ತು ಶುಕ್ರವಾರ ನಡೆಯಲಿರುವ ಸಭೆಗೆ ಮಯನ್ಮಾರ್ ಅನ್ನು ಸೇರಿಸಲಾಗುವುದಿಲ್ಲ ಎಂದು ಮೂಲಗಳು ಹೇಳುತ್ತಿವೆ.
ಮಯನ್ಮಾರ್‌ನಲ್ಲಿ ಕಳೆದ ವರ್ಷ ಆಂಗ್ ಸಾನ್ ಸೂ ಕ್ಯಿ ನೇತೃತ್ವದ ಸರಕಾರವನ್ನು ಅಲ್ಲಿನ ಮಿಲಿಟರಿ ಕಿತ್ತೊಗೆದು ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿದೆ. ಜನರ ಪ್ರಜಾತಂತ್ರೀಯ ಹೋರಾಟವನ್ನು ದಮನ ಮಾಡಲಾಗುತ್ತಿದೆ. ಇದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಇರಿಸುಮುರುಸಿಗೆ ಕಾರಣವಾಗಿದೆ. ಹೀಗಾಗಿ, ASEAN ಸಭೆಯಿಂದ ಮಯನ್ಮಾರ್ ಅನ್ನು ಹೊರಗಿಡಬೇಕೆಂದು ಸಾಕಷ್ಟು ಒತ್ತಡಗಳಿವೆ. ಈ ಅಸಿಯನ್ ಒಕ್ಕೂಟದ ಇತರ ಸದಸ್ಯ ದೇಶಗಳಲ್ಲಿ ಹೆಚ್ಚಿನವು ಮಯನ್ಮಾರ್ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿವೆ. ಭಾರತದ ವಿದೇಶಾಂಗ ಇಲಾಖೆ ಕಳೆದ ವಾರ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ, "ಅಸಿಯನ್‌ನಲ್ಲಿ ವ್ಯಕ್ತವಾಗುವ ಅಭಿಪ್ರಾಯದ ಮೇಲೆ ಸಚಿವರ ಸಭೆಯಲ್ಲಿ ಮಯನ್ಮಾರ್ ಪಾಲ್ಗೊಳ್ಳುವುದು ಅವಲಂಬಿತವಾಗಿದೆ" ಎಂದು ಸ್ಪಷ್ಟಪಡಿಸಿತ್ತು.
ಚೀನಾದಿಂದ ಬ್ರಿಕ್ಸ್ ವರ್ಚುವಲ್ ಸಭೆ; ಭಾರತದ ಪರ ಅಜಿತ್ ದೋವಲ್ ಭಾಗಿ
ಕೆಲ ದಿನಗಳ ಹಿಂದೆ ನಡೆದ ಬಿಮ್‌ಸ್ಟೆಕ್ (BIMSTEC) ಸಭೆಯಲ್ಲಿ ಮಯನ್ಮಾರ್ ದೇಶ ಪಾಲ್ಗೊಂಡಿದ್ದು ಅಮೆರಿಕದ ಕೆಂಗಣ್ಣಿಗೆ ಕಾರಣವಾಗಿತ್ತು. ಬಿಮ್‌ಸ್ಟೆಕ್ ಎಂದರೆ ಬಂಗಾಳ ಕೊಲ್ಲಿ ವ್ಯಾಪ್ತಿಗೆ ಬರುವ ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ತಾಂತ್ರಿಕ ಸಹಕಾರಕ್ಕೆ ಮಾಡಿಕೊಳ್ಳಲಾಗಿರುವ ಒಂದು ಗುಂಪು. ಈ ಸಭೆಯಲ್ಲಿ ಮಯನ್ಮಾರ್ ಪಾಲ್ಗೊಳ್ಳಲು ಅವಕಾಶ ಕೊಟ್ಟಿದ್ದು ತಪ್ಪು ಎಂದು ಅಮೆರಿಕ ಹೇಳಿತ್ತು. ಹೀಗಾಗಿ ಇಂದಿನಿಂದ ಎರಡು ದಿನ ನಡೆಯುವ ಅಸಿಯನ್ ಮಿನಿಸ್ಟರಿಯಲ್ ಸಭೆಯಲ್ಲಿ ಮಯನ್ಮಾರ್ ಪಾಲ್ಗೊಳ್ಳಲು ಅವಕಾಶ ನಿರಾಕರಿಸಲಾಗುತ್ತಿದೆ.
ಯಾವ್ಯಾವು ಅಸಿಯನ್ ದೇಶಗಳು?
ಆಗ್ನೇಯ ಏಷ್ಯಾ ಭಾಗದ 10 ರಾಷ್ಟ್ರಗಳು ಸೇರಿ ರೂಪಿಸಿರುವುದು ಆಸಿಯನ್ ಒಕ್ಕೂಟ. ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಂ, ಬ್ರೂನೇ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮಯನ್ಮಾರ್ ಮತ್ತು ಫಿಲಿಪ್ಪೈನ್ಸ್ ದೇಶಗಳು ಈ ಸಂಘಟನೆಯಲ್ಲಿವೆ. ಭಾರತ ಈ ವರ್ಷದ ಆಸಿಯನ್ ಗುಂಪಿನ ಸಭೆ ಆಯೋಜಿಸಿದ್ದು, 2022ಅನ್ನು ಭಾರತ-ಅಸಿಯನ್ ಸ್ನೇಹ ವರ್ಷ ಎಂದು ಪರಿಗಣಿಸಲಾಗಿದೆ. ಭಾರತ ಮತ್ತು ಅಸಿಯನ್ ಒಕ್ಕೂಟದ ನಡುವಿನ ಸಂಬಂಧಕ್ಕೆ 30 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಸಭೆ ನಡೆಸುವ ಅವಕಾಶ ಕೊಡಲಾಗಿದೆ.
ಪೇಟೆಂಟ್ ಬಿಡಲೊಲ್ಲದ ಸಿರಿವಂತ ದೇಶಗಳು; ಡಬ್ಲ್ಯೂಟಿಒದಲ್ಲಿ ಮುರಿದುಬಿದ್ದ ಭಾರತದ ಯತ್ನ
ಅಸಿಯನ್ ದೇಶಗಳ ವಿದೇಶಾಂಗ ಸಚಿವರ ಜೊತೆ ಭಾರತ ಪ್ರತೀ ವರ್ಷವೂ ಸಭೆ ನಡೆಸಿ ಆರ್ಥಿಕ ಸಹಕಾರ ಇತ್ಯಾದಿ ವಿಚಾರಗಳನ್ನು ಚರ್ಚಿಸುತ್ತದೆ. ಅಸಿಯಾನ್ ಜೊತೆ ಭಾರತದ ಸಂಬಂಧಕ್ಕೆ 30ನೇ ವರ್ಷವಾಗಿರುವುದರಿಂದ ಈ ಬಾರಿಯ ಸಭೆ ವಿಶೇಷ ಎನಿಸಿದೆ.

Recommended Video
ಅಮೆರಿಕ ದೇಶಕ್ಕೂ ಅಸಿಯನ್ ರಾಷ್ಟ್ರಗಳ ಗುಂಪು ಮುಖ್ಯವಾಗಿದೆ. ಚೀನಾವನ್ನು ಹಣಿಯಲು ಭಾರತದ ಜೊತೆಗೆ ಅಮೆರಿಕಕ್ಕೆ ಅಸಿಯನ್ ದೇಶಗಳ ಸಹಕಾರವೂ ಅಗತ್ಯ. ಹೀಗಾಗಿ, ಈ ವರ್ಷ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಂಡೋ ಪೆಸಿಫಿಕ್ ಎಕನಾಮಿಕ್ ಫ್ರೇಮ್‌ವರ್ಕ್ ಯೋಜನೆ ಆರಂಭಿಸಿದರು. ಇದರಲ್ಲಿ ಕ್ವಾಡ್ ದೇಶಗಳಾದ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ಜೊತೆ ಅಸಿಯನ್ ಗುಂಪಿನ ಏಳು ದೇಶಗಳು ಒಪ್ಪಂದಕ್ಕೆ ಸಹಿಹಾಕಿವೆ.
(ಒನ್ಇಂಡಿಯಾ ಸುದ್ದಿ)