Good News for Woman: ಮುಸ್ಲಿಂ ಮಹಿಳೆಯರಿಗೂ ಜೀವನಾಂಶ ಪಡೆಯುವ ಹಕ್ಕಿದೆ- ಸುಪ್ರೀಂ ಕೋರ್ಟ್
ವಿಚ್ಛೇದನ ಪಡೆದಿರುವ ಮುಸ್ಲಿಂ ಮಹಿಳೆಯರಿಗೆ ಸುಪ್ರೀಂ ಕೋರ್ಟ್‌ನ ಇಂದಿನ ತೀರ್ಪು ದೊಡ್ಡ ಸಮಾಧಾನ ತಂದಿದೆ. ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ಗಂಡನ ವಿರುದ್ಧ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಾಸಿಹ್ ಅವರು, ಈ ರೀತಿಯ ಆದೇಶ ಹೊರಡಿಸಿದ್ದಾರೆ. ಗೃಹಿಣಿಯಾಗಿರುವ ಹೆಂಡತಿ ಗಂಡನ ಮೇಲೆಯೇ ಸಂಫೂರ್ಣವಾಗಿ ಅವಲಂಬಿತವಾಗಿದ್ದರೆ ವಿಚ್ಛೇದನ ನಂತರ ಆಕೆ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ತೀರ್ಪಿನಲ್ಲಿ ನ್ಯಾಯಾಲಯ ಏನು ಹೇಳಿದೆ?
ಭಾರತೀಯ ವಿವಾಹಿತ ಮಹಿಳೆಯು ಆರ್ಥಿಕವಾಗಿ ಸ್ವತಂತ್ರಳಲ್ಲ ಎಂಬ ಅಂಶವನ್ನು ತಿಳಿದಿರಬೇಕು. ಆಕೆ ವಿವಾಹದ ನಂತರ ತನ್ನ ಪತಿಯ ಮೇಲೆ ಸಂಪೂರ್ಣವಾಗಿ ಅವಲಂಭಿತಳಾಗಿರುತ್ತಾಳೆ. ಪತಿಯ ಪಾಲು ಹೆಂಡತಿಗೂ ಸೇರುತ್ತದೆ. ಸಿಆರ್‌ಪಿಸಿಯ ಸೆಕ್ಷನ್ 125 ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ. ಈ ಸೆಕ್ಷನ್ ಅಡಿಯಲ್ಲಿ ವಿವಾಹಿತ ಮುಸ್ಲಿಂ ಮಹಿಳೆಯರು ಸಹ ಜೀವನಾಂಶ ಭತ್ಯೆ ಕೇಳಬಹುದು ಎಂದು ಕೋರ್ಟ್ ಹೇಳಿದೆ.
ಸೆಕ್ಷನ್ 125 CrPC ಅಡಿಯಲ್ಲಿ ಮುಸ್ಲಿಂ ಮಹಿಳೆ ವಿಚ್ಛೇದನ ಪಡೆದರೆ, ಅವರು 2019 ರ ಕಾಯಿದೆಯನ್ನು ಆಶ್ರಯಿಸಬಹುದು ಎಂದು ನ್ಯಾಯಾಲಯ ಹೇಳಿದೆ. 2019 ರ ಕಾಯಿದೆಯು ಸೆಕ್ಷನ್ 125 CrPC ಅಡಿಯಲ್ಲಿ ಹೆಚ್ಚುವರಿ ಕ್ರಮಗಳನ್ನು ಒದಗಿಸುತ್ತದೆ.
ಮುಸ್ಲಿಂ ವ್ಯಕ್ತಿಯ ಅರ್ಜಿ ತಿರಸ್ಕೃತ
CrPCಯ ಸೆಕ್ಷನ್ 125ರ ಅಡಿಯಲ್ಲಿ ತನ್ನ ವಿಚ್ಛೇದಿತ ಹೆಂಡತಿಯ ಪರವಾಗಿ ಮಧ್ಯಂತರ ಜೀವನಾಂಶದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಪುರುಷನ ಮನವಿಯನ್ನು ಸುಪ್ರೀಂ ಕೋರ್ಟ್‌ನ ಡಬಲ್ ಬೆಂಚ್ ವಜಾಗೊಳಿಸಿದೆ. ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆ, 1986 ಸೆಕ್ಷನ್ 125 CrPC ಯ ನಿಬಂಧನೆಗಳನ್ನು ರದ್ದುಗೊಳಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮುಸ್ಲಿಂ ಮಹಿಳೆ ಅಘಾ ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶಕ್ಕೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಪ್ರತಿ ತಿಂಗಳು 20 ಸಾವಿರ ರೂಪಾಯಿ ಮಧ್ಯಂತರ ಭತ್ಯೆ ನೀಡುವಂತೆ ಪತಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಎಲ್ಲ ಧರ್ಮೀಯರಿಗೂ ಅನ್ವಯ
ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆ 1986, ಜಾತ್ಯತೀತ ಕಾನೂನಿನ ವ್ಯಾಪ್ತಿಯಿಂದ ಹೊರತಲ್ಲ ಎಂದು ಕೋರ್ಟ್ ಹೇಳಿದೆ.
"ವಿವಾಹಿತ ಮಹಿಳೆಯರು ಮಾತ್ರವಲ್ಲದೆ, ಎಲ್ಲ ಮಹಿಳೆಯರಿಗೂ ಸಿಆರ್‌ಪಿಸಿ ಸೆಕ್ಷನ್ 125 ಅನ್ವಯವಾಗುತ್ತದೆ ಎಂಬ ಮುಖ್ಯ ನಿರ್ಣಯದೊಂದಿಗೆ ನಾವು ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ" ಎಂದು ನ್ಯಾ. ನಾಗರತ್ನ ತಿಳಿಸಿದ್ದಾರೆ. ನ್ಯಾ. ಬಿವಿ ನಾಗರತ್ನ ಮತ್ತು ನ್ಯಾ ಆಗಸ್ಟೀನ್ ಜಾರ್ಜ್ ಮಸಿಹ್ ಅವರು ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿದರೂ, ಇಬ್ಬರ ಆಶಯ ಒಂದೇ ರೀತಿ ಪ್ರಕಟವಾಗಿದೆ.
ಯಾವ ಧರ್ಮಕ್ಕೆ ಸೇರಿದವರಾದರೂ, ಜೀವನ ನಿರ್ವಹಣಾ ವೆಚ್ಚ ಕೇಳುವ ಕಾನೂನು ಎಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಜೀವನ ನಿರ್ವಹಣೆ ವೆಚ್ಚವು ದಾನ ದತ್ತಿಯಲ್ಲ, ಅದು ಮಹಿಳೆಯರ ಹಕ್ಕು ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿದೆ.












Click it and Unblock the Notifications