ಮುಸ್ಲಿಂ ಶಿಕ್ಷಕ ಕಟ್ಟಿದ ದೇವಿ ಸರಸ್ವತಿಯ ದೇವಸ್ಥಾನ!
ನಡಿಯಾಡ್ (ಗುಜರಾತ್), ಜೂ. 11 : ಜಗತ್ತಿನ ಎಲ್ಲರಿಗೂ ಜಾತಿಮತ ಭೇದವಿಲ್ಲದೆ ಬೆಳಕನ್ನು ನೀಡುವ ಸೂರ್ಯಗೆ ನಮಸ್ಕಾರ ಮಾಡುವುದನ್ನು ಮುಸ್ಲಿಂರೇಕೆ ಪಾಲಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಪರಿಸ್ಥಿತಿ ಹೀಗಿರುವಾಗ ತನ್ನೆಲ್ಲ ಹಣದಿಂದ ಗುಡಿಯನ್ನು ಕಟ್ಟಿ ಹಿಂದೂ ದೇವತೆಯನ್ನು ಪೂಜಿಸುತ್ತಿರುವ ಮುಸ್ಲಿಂನೊಬ್ಬ ಸುದ್ದಿಗೆ ಗ್ರಾಸವಾಗಿದ್ದಾನೆ.
ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯ ನಡಿಯಾಡ್ ನಗರದ ಬಳಿಯಿರುವ ಮರಿಡಾ ಗ್ರಾಮದಲ್ಲಿ, ಅಬ್ದುಲ್ ಚಾಚಾ ಎಂದೇ ಕರೆಯಿಸಿಕೊಳ್ಳುವ ನಿವೃತ್ತ ಶಾಲಾ ಶಿಕ್ಷಕ, ತನ್ನ ಬಳಿಯಿರುವ ಹಣವನ್ನೆಲ್ಲ ಸುರಿದು ಕಟ್ಟಿಸಿರುವುದು ಮಸೀದಿಯನ್ನಲ್ಲ, ಹಿಂದೂ ದೇವತೆಯಾದ ಸರಸ್ವತಿ ಗುಡಿಯನ್ನು!
ಸುಮಾರು ಮೂರು ದಶಕಗಳ ಕಾಲ, ಹಿಂದೂಗಳೇ ಹೆಚ್ಚಾಗಿರುವ ಹಳ್ಳಿಯಲ್ಲಿ ಶಾಲಾ ಮಕ್ಕಳಿಗೆ ಪಾಠ ಮಾಡಿದ ಅಬ್ದುಲ್ ವೋರಾ ಅವರು, ಪ್ರಾಥಮಿಕ ಶಿಕ್ಷಕರಾಗಿ ತರಬೇತಿ ಪಡೆಯುತ್ತಿದ್ದಾಗಲೇ ಸರಸ್ವತಿಯ ಆರಾಧಕರಾಗಿದ್ದರು. ಕತ್ಲಾಲ್ ಎಂಬ ಹಳ್ಳಿಯಲ್ಲಿದ್ದ ವಿದ್ಯಾ ದೇವಿಯಾದ ಸರಸ್ವತಿಯ ಗುಡಿಯಿಂದ ಸ್ಫೂರ್ತಿ ಪಡೆದು, ಅಂಥದೇ ಗುಡಿ ಕಟ್ಟಿಸಬೇಕೆಂದು ಕನಸು ಕಂಡಿದ್ದರು. [ಸೂರ್ಯ ನಮಸ್ಕಾರ ವಿರೋಧಿಗಳನ್ನು ಕೂಪಕ್ಕೆ ತಳ್ಳಿ: ಯೋಗಿ]

"ನಾನೊಬ್ಬ ಶಿಕ್ಷಕ ಮೊದಲು, ಜಾತಿ ಧರ್ಮವೆಲ್ಲ ನಂತರ. ಮಕ್ಕಳೇ ನನಗೆ ಸ್ಫೂರ್ತಿ ಮತ್ತು ಅವರಲ್ಲಿ ತಾಯಿ ಸರಸ್ವತಿ ನೆಲೆಸಿದ್ದಾಳೆ. ಈ ದೇವಸ್ಥಾನ ಕಟ್ಟಿಸಲು ಐದು ವರ್ಷ ತಗುಲಿದೆ. ಹಳ್ಳಿಗರೂ ಕೂಡ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿದ್ದಾರೆ" ಎಂದು ವಿನಮ್ರವಾಗಿ ಹೇಳುತ್ತಾರೆ ಅಬ್ದುಲ್ ಚಾಚಾ.
ಸರಸ್ವತಿಯ ಆರಾಧಾಕರಾಗಿರುವುದು ಮಾತ್ರವಲ್ಲ, ಅಬ್ದುಲ್ ಚಾಚಾ ಅವರು ಸರಸ್ವತಿಯನ್ನು ಹೇಗೆ ಪೂಜಿಸಬೇಕು, ಆರಾಧಿಸಬೇಕು ಎಂದು ಕೂಡ ಮಕ್ಕಳಿಗೆ ಹೇಳಿಕೊಡುತ್ತಾರೆ. ಹಳ್ಳಿಯ ಎಲ್ಲ ಗ್ರಾಮಸ್ಥರು ನನಗೆ ಗೌರವ ನೀಡುತ್ತಾರೆ. ಒಬ್ಬ ಶಿಕ್ಷಕನಾಗಿ ನಾನು ಸೇವೆ ಸಲ್ಲಿಸಿದ್ದೇನೆ. ಈಗ ಈ ರೀತಿ ಜನರ ಸೇವೆಯನ್ನೂ ಮಾಡಬೇಕೆಂದಿದ್ದೇನೆ ಎನ್ನುತ್ತಾರೆ ಅಬ್ದುಲ್ ಚಾಚಾ.












Click it and Unblock the Notifications