Ayodhya Museum: ಅಯೋಧ್ಯೆಯಲ್ಲಿ ದೇಗುಲಗಳ ಮ್ಯೂಸಿಯಂ: 1 ರೂಪಾಯಿಗೆ ಭೂಮಿ ಲಭ್ಯ!
ಅಯೋಧ್ಯೆ ಜೂನ್ 27: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಈಗ 'ದೇವಸ್ಥಾನಗಳ ಮ್ಯೂಸಿಯಂ' ನಿರ್ಮಾಣವಾಗಲಿದೆ. ಇದಕ್ಕಾಗಿ ಟಾಟಾ ಗ್ರೂಪ್ 750 ಕೋಟಿ ರೂಪಾಯಿ ವೆಚ್ಚ ಮಾಡಲಿದೆ.
ಹೌದು... ಟಾಟಾ ಗ್ರೂಪ್ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೇವಾಲಯಗಳ ಮ್ಯೂಸಿಯಂ ನಿರ್ಮಿಸಲು ಹೊರಟಿದೆ. 650 ಕೋಟಿ ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗಲಿದೆ. ಇದರ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರದ ಕ್ಯಾಬಿನೆಟ್ ಮಂಗಳವಾರ ಅನುಮೋದನೆ ನೀಡಿದೆ. ಹಾಗಾದರೆ ಟಾಟಾದ ಸೂಪರ್ ಪ್ಲಾನ್ ಏನೆಂದು ತಿಳಿಯೋಣ..

1 ರೂಪಾಯಿಗೆ ಭೂಮಿ ಲಭ್ಯ
ಟಾಟಾ ಗ್ರೂಪ್‌ಗೆ 1 ರೂಪಾಯಿ ಟೋಕನ್ ಮೊತ್ತದಲ್ಲಿ ದೇವಾಲಯದ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು 90 ವರ್ಷಗಳ ಕಾಲ ಭೂಮಿಯನ್ನು ಗುತ್ತಿಗೆಗೆ ನೀಡಲಾಗುವುದು. ಈ ಮ್ಯೂಸಿಯಂ ಅನ್ನು ಸುಧಾರಿತಗೊಳಿಸಲಾಗುವುದು ಮತ್ತು ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ನಿರ್ಮಿಸಲಾಗುವುದು. ಭಾರತದ ಪ್ರಸಿದ್ಧ ದೇವಾಲಯಗಳ ವಾಸ್ತುಶಿಲ್ಪ ಮತ್ತು ಇತಿಹಾಸದ ಬಗ್ಗೆ ಎಲ್ಲಾ ಮಾಹಿತಿಯನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಹೇಳಿದ್ದಾರೆ.
ಸಿಎಸ್ಆರ್ ಮೂಲಕ ಟಾಟಾದ ಹೂಡಿಕೆ
ಟಾಟಾ ಈ ಮ್ಯೂಸಿಯಂ ನಿರ್ಮಿಸಲು ನಿರ್ಧರಿಸಿದೆ. ದೇವಾಲಯಗಳ ಈ ಮ್ಯೂಸಿಯಂ ನಿರ್ಮಿಸಲು ಟಾಟಾ ಗ್ರೂಪ್ 650 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಈ ಹೂಡಿಕೆಯನ್ನು ಸಿಎಸ್‌ಆರ್ ಅಂದರೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿ ಈ ಮ್ಯೂಸಿಯಂ ನಿರ್ಮಿಸುವ ಪ್ರಸ್ತಾವನೆಯನ್ನು ಟಾಟಾ ಗ್ರೂಪ್ ಕೇಂದ್ರ ಸರ್ಕಾರದ ಮೂಲಕ ಕಳುಹಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮೊದಲ ಬಾರಿಗೆ ಈ ಮ್ಯೂಸಿಯಂ ಬಗ್ಗೆ ಕಳೆದ ವರ್ಷ ಪ್ರಸ್ತಾವನೆ ಬಂದಿತ್ತು. ಆ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಯೋಜನೆಯ ಬಗ್ಗೆ ವಿವರವಾಗಿ ತಿಳಿಸಲಾಯಿತು. ಈ ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಈಗಾಗಲೇ ಮಾಹಿತಿ ನೀಡಲಾಗಿತ್ತು. ಟೆಂಪಲ್ ಮ್ಯೂಸಿಯಂನ ಈ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ಇಷ್ಟಪಟ್ಟಿದ್ದಾರೆ.

100 ಕೋಟಿ ಹೆಚ್ಚುವರಿ ವ್ಯಯ
ದೇವಾಲಯದ ವಸ್ತುಸಂಗ್ರಹಾಲಯಗಳಲ್ಲಿ ಬೆಳಕು-ಧ್ವನಿ ಪ್ರದರ್ಶನದ ವ್ಯವಸ್ಥೆಯನ್ನೂ ಮಾಡಲಾಗುವುದು. ಇದಲ್ಲದೆ ಅಯೋಧ್ಯೆ ನಗರದ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಟಾಟಾ ಗ್ರೂಪ್‌ಗೆ ಅನುಮೋದನೆ ನೀಡಿತು. ನಗರದ ಇತರೆ ಅಭಿವೃದ್ಧಿ ಕಾಮಗಾರಿಗಳ ಮೇಲೆ ಟಾಟಾ ಗ್ರೂಪ್‌ನಿಂದ 100 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡಲಾಗುವುದು.
ಅಯೋಧ್ಯೆ ರಾಮ ಮಂದಿರ
ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆದು ಕೋಟಿ ಕನಸುಗಳ ನಿರೀಕ್ಷೆ ಸಾಕಾರಗೊಂಡಿದೆ. ರಾಮಲಲ್ಲಾ ಜನ್ಮಭೂಮಿಯಲ್ಲೇ ತಲೆಎತ್ತಿರುವ ಭವ್ಯ ಮಂದಿರವನ್ನು ಲಕ್ಷಾಂತರ ಜನ ಕಣ್ತುಂಬಿಕೊಂಡಿದ್ದಾರೆ.
ಸುದೀರ್ಘ ವಿವಾದದ ನಂತರ ನಿರ್ಮಿಸಲಾದ ರಾಮ ಮಂದಿರವನ್ನು ಜನವರಿ 22 ರಂದು ಅಯೋಧ್ಯೆಯಲ್ಲಿ ಉದ್ಘಾಟಿಸಲಾಯಿತು. ಮಹಾಮಸ್ತಕಾಭಿಷೇಕದ ನಂತರ ಜನವರಿ 24ರಿಂದ ರಾಮ ಮಂದಿರವು ಭಕ್ತರು ಮತ್ತು ಸಂದರ್ಶಕರಿಗೆ ತೆರೆಯಲಾಗಿದೆ. ಜನವರಿ 24ರಿಂದ ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ಮೂಲಕ ರಾಮನ ಆಶೀರ್ವಾದ ಪಡೆಯುತ್ತಿದ್ದಾರೆ.












Click it and Unblock the Notifications