ಅಂದು ಅಣ್ಣಂದಿರೇ ಓದದಂತೆ ತಡೆದರು: ಇಂದು ಜಾರ್ಖಂಡ್‌ನ 500ಕ್ಕೂ ಹೆಚ್ಚು ಬುಡಕಟ್ಟು ಮಕ್ಕಳಿಗೆ ದಾರಿದೀಪ ಈ ಮೋನಿಕಾ ಆರ್ಯ
"ನನ್ನ ಸ್ವಂತ ಅಣ್ಣಂದಿರೇ ನನ್ನನ್ನು ಓದದಂತೆ ತಡೆದರು, ಮನೆಯವರ ಒತ್ತಡದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಬೇಕಾಯಿತು..." ಹೀಗೆ ಹೇಳುವ ಮೋನಿಕಾ ಆರ್ಯ ಅವರ ಬದುಕು ಇಂದು ಸಾವಿರಾರು ಜನರಿಗೆ ಸ್ಫೂರ್ತಿಯಾಗಿದೆ.
ತಾವು ಎದುರಿಸಿದ ಕಷ್ಟಗಳನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡು, ಇಂದು ಜಾರ್ಖಂಡ್‌ನ ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಶಿಕ್ಷಣದಿಂದ ವಂಚಿತರಾದ ತಳಮಟ್ಟದ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರುತ್ತಿದ್ದಾರೆ.

ಮೋನಿಕಾ ಅವರ ಬಾಲ್ಯ ಮತ್ತು ಯೌವನ ಅಷ್ಟು ಸುಲಭವಾಗಿರಲಿಲ್ಲ. ಉನ್ನತ ಶಿಕ್ಷಣ ಪಡೆಯುವ ಆಸೆ ಇದ್ದರೂ, ಕೌಟುಂಬಿಕ ಒತ್ತಡ ಹಾಗೂ ಸಹೋದರರ ವಿರೋಧದಿಂದಾಗಿ ಅವರ ಶಿಕ್ಷಣ ಅರ್ಧಕ್ಕೇ ನಿಂತುಹೋಯಿತು. ಮದುವೆಯ ನಂತರ ಅವರು ಜಾರ್ಖಂಡ್‌ಗೆ ಸ್ಥಳಾಂತರಗೊಂಡರು.
ಆದರೂ ಅವರೊಳಗಿನ ಕಲಿಯುವ ಹಂಬಲ ಕೊನೆಗೊಳ್ಳಲೇ ಇಲ್ಲ. ಬರೋಬ್ಬರಿ 12 ವರ್ಷಗಳ ಸುದೀರ್ಘ ಅಂತರದ ನಂತರ ಮತ್ತೆ ಶಿಕ್ಷಣದತ್ತ ಮುಖ ಮಾಡಿದ ಅವರು, ಕಷ್ಟಪಟ್ಟು ಓದಿ 2022ರಲ್ಲಿ ಎಂಎಸ್‌ಸಿ ಸ್ನಾತಕೋತ್ತರ ಪದವಿ ಪಡೆದರು. ಮೋನಿಕಾ ಪಾಲಿಗೆ ಈ ಪದವಿ ಕೇವಲ ಒಂದು ಶೈಕ್ಷಣಿಕ ಅರ್ಹತೆಯಾಗಿರಲಿಲ್ಲ. ಬದಲಿಗೆ ಅದು ಅವರಿಗೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯವನ್ನ ಪ್ರಶ್ನಿಸುವ, ದಿಟ್ಟ ನಿರ್ಧಾರಗಳನ್ನ ತೆಗೆದುಕೊಳ್ಳುವ ಮತ್ತು ಮುಕ್ತವಾಗಿ ಮಾತನಾಡುವ ಆತ್ಮವಿಶ್ವಾಸವನ್ನು ನೀಡಿತು.
ಜಾರ್ಖಂಡ್‌ನಲ್ಲಿ 'ಸಂಭವ್ ಟ್ರಸ್ಟ್' ಸ್ಥಾಪನೆ
ಮದುವೆಯಾಗಿ ಜಾರ್ಖಂಡ್‌ಗೆ ಬಂದಾಗ ಮೋನಿಕಾ ಅವರು ಅಲ್ಲಿನ ಬುಡಕಟ್ಟು ಮಕ್ಕಳ ಕಷ್ಟಗಳನ್ನಾ ಕಣ್ಣಾರೆ ಕಂಡರು. ತಾವು ಬಾಲ್ಯದಲ್ಲಿ ಅನುಭವಿಸಿದ ಶಿಕ್ಷಣದ ಕೊರತೆ ಮತ್ತು ಮಾನಸಿಕ ನೋವು ಆ ಮಕ್ಕಳಲ್ಲೂ ಸ್ಪಷ್ಟವಾಗಿ ಕಾಣಿಸಿತು. ವಿಶೇಷವಾಗಿ, ತಮ್ಮ ಕುಟುಂಬದಲ್ಲಿ ಮೊದಲ ಬಾರಿಗೆ ಶಾಲೆಗೆ ಹೋಗುತ್ತಿರುವ ಮಕ್ಕಳು ಸರಿಯಾದ ಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ತಮ್ಮ ಹಕ್ಕುಗಳ ಅರಿವಿಲ್ಲದೆ ಪರದಾಡುತ್ತಿರುವುದನ್ನು ಅವರು ಸೂಕ್ಷ್ಮವಾಗಿ ಗಮನಿಸಿದರು.
ಇದೇ ಕಾರಣಕ್ಕಾಗಿ, ಎಂಎಸ್‌ಸಿ ಪದವಿಯ ನಂತರ ಹೆಚ್ಚು ಸಂಬಳ ಬರುವ ಯಾವುದೇ ಆರಾಮದಾಯಕ ಕಾರ್ಪೊರೇಟ್ ವೃತ್ತಿಯನ್ನ ಆಯ್ಕೆ ಮಾಡಿಕೊಳ್ಳುವ ಬದಲು, ತಳಮಟ್ಟದ ಜನರಿಗಾಗಿ ಕೆಲಸ ಮಾಡಲು ನಿರ್ಧರಿಸಿದರು. ಇದರ ಫಲವಾಗಿ 2021ರಲ್ಲಿ ಖುಂಟಿ ಜಿಲ್ಲೆಯ ಟೊರ್ಪಾ ಬ್ಲಾಕ್‌ನಲ್ಲಿ 'ಸಂಭವ್ ಟ್ರಸ್ಟ್' ಎಂಬ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು.
ಮಕ್ಕಳ ಹಕ್ಕುಗಳು ಹಾಗೂ ವೃತ್ತಿ ಮಾರ್ಗದರ್ಶನ
ಇಂದು 'ಸಂಭವ್ ಟ್ರಸ್ಟ್' ಜಾರ್ಖಂಡ್‌ನ ಗ್ರಾಮೀಣ ಭಾಗದಲ್ಲಿ ಬಹುದೊಡ್ಡ ಶೈಕ್ಷಣಿಕ ಕ್ರಾಂತಿಯನ್ನೇ ಹುಟ್ಟುಹಾಕಿದೆ. ಈ ಸಂಸ್ಥೆಯು ಹಮ್ಮಿಕೊಂಡಿರುವ ಹದಿಹರೆಯದವರ ಸಬಲೀಕರಣ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಇದರ ಜೊತೆಗೆ, ಮಕ್ಕಳ ರಕ್ಷಣೆ ಮತ್ತು ಅವರ ಹಕ್ಕುಗಳ ಕುರಿತಾದ ಅರಿವು ಮೂಡಿಸುವ ಅಭಿಯಾನವು ಶಾಲೆಗೆ ಹೋಗುವ ಸುಮಾರು 5,000 ಮಕ್ಕಳನ್ನ ತಲುಪಿದೆ. ಕೇವಲ ಅಕ್ಷರ ಜ್ಞಾನ ಮಾತ್ರವಲ್ಲದೆ, ಭವಿಷ್ಯದಲ್ಲಿ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ನೀಡುವಲ್ಲಿ ಮೋನಿಕಾ ಯಶಸ್ವಿಯಾಗಿದ್ದಾರೆ.


Click it and Unblock the Notifications
