1.01 ಕೋಟಿ ರೂ. ನಿವೃತ್ತಿ ನಿಧಿಯನ್ನ ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆ: ಇಡೀ ದೇಶದ ಗಮನ ಸೆಳೆದ ಹೈಕೋರ್ಟ್ ನ್ಯಾಯಮೂರ್ತಿ

ಭೋಪಾಲ್: ನಮಗಾಗಿ ಮಾತ್ರ ಬದುಕಿದರೆ ಅದರಲ್ಲಿ ಏನು ಅರ್ಥವಿದೆ? ಎಂಬ ಉದಾತ್ತ ಚಿಂತನೆಯೊಂದಿಗೆ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ತಮ್ಮ ನಿವೃತ್ತಿ ದಿನದಂದು ಎಲ್ಲರೂ ಹುಬ್ಬೇರಿಸುವಂತಹ ನಿರ್ಧಾರವೊಂದನ್ನ ತೆಗೆದುಕೊಂಡಿದ್ದಾರೆ.

ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ 37 ವರ್ಷಗಳ ಕಾಲ ಸುದೀರ್ಘ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಅವನೀಂದ್ರ ಕುಮಾರ್ ಸಿಂಗ್ ಅವರು ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಭೋಪಾಲ್‌ನಲ್ಲಿ ನಡೆದ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾಡಿದ ಘೋಷಣೆ ಇಡೀ ದೇಶದ ಗಮನ ಸೆಳೆದಿದೆ.

MP High Court Judge Avanindra Kumar Singh Donates Rs 1 01 Crore To PM CARES Fund Pledges Body

ತಮ್ಮ ಜೀವಿತಾವಧಿಯ ದುಡಿಮೆಯಾದ 1.01 ಕೋಟಿ ರೂಪಾಯಿಗಳ ನಿವೃತ್ತಿ ನಿಧಿಯನ್ನ ಸಂಪೂರ್ಣವಾಗಿ ಅವರು 'ಪಿಎಂ ಕೇರ್ಸ್ ಫಂಡ್'ಗೆ ದೇಣಿಗೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸಾವಿನ ಬಳಿಕ ತಮ್ಮ ಹಾಗೂ ತಮ್ಮ ಪತ್ನಿಯ ದೇಹವನ್ನ ವೈದ್ಯಕೀಯ ಕಾಲೇಜಿಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ.

ದೇಶದ ಅಭಿವೃದ್ಧಿಗೆ ಪಿಎಂ ಕೇರ್ಸ್ ಫಂಡ್ ದೇಣಿಗೆ

ಈ ಬೀಳ್ಕೊಡುಗೆ ಸಮಾರಂಭದಲ್ಲಿ ಅವರ ಪತ್ನಿ ಇಂದಿರಾ ಸಿಂಗ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಸಮಾರಂಭವನ್ನ ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಅವನೀಂದ್ರ ಕುಮಾರ್ ಸಿಂಗ್, "ನಾವು ಗಳಿಸಿದ ಸಂಪತ್ತನ್ನ ಕೇವಲ ನಮಗಾಗಿ ಅಥವಾ ನಮ್ಮ ವಾರಸುದಾರರಿಗಾಗಿ ಕೂಡಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನೂ ಮತ್ತು ನನ್ನ ಪತ್ನಿ ಇಬ್ಬರೂ ಪಿಂಚಣಿದಾರರು. ಹೀಗಾಗಿ ನಮ್ಮ ಬಳಿ ಇರುವ ನಿವೃತ್ತಿ ಸೌಲಭ್ಯದ ಮೊತ್ತವಾದ 1.01 ಕೋಟಿ ರೂಪಾಯಿಗಳನ್ನ ದೇಶ ನಿರ್ಮಾಣ ಕಾರ್ಯಕ್ಕಾಗಿ ಮೀಸಲಿಡಲು ನಿರ್ಧರಿಸಿದ್ದೇವೆ" ಎಂದರು.

ತುರ್ತು ಪರಿಸ್ಥಿತಿಗಳಲ್ಲಿ, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಹಾಗೂ ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಜನರಿಗೆ ನೆರವಾಗಲು ಪಿಎಂ ಕೇರ್ಸ್ ಫಂಡ್ ಬಳಕೆಯಾಗುವುದರಿಂದ, ಈ ನಿಧಿಗೆ ತಮ್ಮ ಹಣವನ್ನ ನೀಡುವುದು ಅತ್ಯಂತ ಸೂಕ್ತ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಂಪತಿಯಿಂದ ದೇಹದಾನ

ಹಣಕಾಸಿನ ನೆರವಿನ ಜೊತೆಗೆ, ಈ ಆದರ್ಶ ದಂಪತಿ ಸಾವಿನ ಬಳಿಕವೂ ಸಮಾಜಕ್ಕೆ ಒಳಿತಾಗುವಂತಹ ನಿರ್ಧಾರ ಕೈಗೊಂಡಿದ್ದಾರೆ. "ಭಗವಂತನ ಆರಾಧನೆ ಎಂದರೆ ಕೇವಲ ಪೂಜೆ ಮಾಡುವುದಲ್ಲ. ಆತ ಸೃಷ್ಟಿಸಿದ ಚಿಕ್ಕ ಮತ್ತು ದೊಡ್ಡ ಜೀವರಾಶಿಗಳನ್ನ ರಕ್ಷಿಸುವುದು ಹಾಗೂ ಸಮಾಜಕ್ಕೆ ಸೇವೆ ಮಾಡುವುದೇ ನಿಜವಾದ ದೇವರ ಸೇವೆ ಎಂದು ನಾನು ನಂಬಿದ್ದೇನೆ. ಇದೇ ತತ್ವದ ಆಧಾರದ ಮೇಲೆ, ನಾವು ಮರಣ ಹೊಂದಿದ ನಂತರ ನಮ್ಮ ದೇಹಗಳನ್ನ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ ಮಾಡಲು ನಾನು ಮತ್ತು ನನ್ನ ಪತ್ನಿ ಇಂದಿರಾ ಸಿಂಗ್ ತೀರ್ಮಾನಿಸಿದ್ದೇವೆ.

ಇದಕ್ಕಾಗಿ ಎರಡು ದಿನಗಳ ಹಿಂದೆಯೇ ಅಧಿಕೃತವಾಗಿ ನೋಂದಣಿ ಕೂಡ ಮಾಡಿಸಿದ್ದೇವೆ" ಎಂದು ನ್ಯಾಯಮೂರ್ತಿ ಸಿಂಗ್ ತಿಳಿಸಿದರು.

37 ವರ್ಷಗಳ ನ್ಯಾಯಾಂಗ ಸೇವೆ ಮತ್ತು ಹೊಸ ಅಧ್ಯಾಯ

1964ರ ಸೆಪ್ಟೆಂಬರ್ 18ರಂದು ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ಜನಿಸಿದ ಅವನೀಂದ್ರ ಕುಮಾರ್ ಸಿಂಗ್, ಬಿಎಸ್‌ಸಿ ಮತ್ತು ಎಲ್‌ಎಲ್‌ಬಿ ಪದವಿ ಪಡೆದರು. ಆರಂಭದಲ್ಲಿ ವಕೀಲರಾಗಿ ವೃತ್ತಿಜೀವನ ಆರಂಭಿಸಿದ ಇವರು, ಮೇ 31, 1990ರಂದು ಸಿವಿಲ್ ನ್ಯಾಯಾಧೀಶರಾಗಿ (ಕ್ಲಾಸ್-2) ಸೇವೆಗೆ ಸೇರಿದರು. ಸುಮಾರು 37 ವರ್ಷಗಳ ಕಾಲ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಅಂತಿಮವಾಗಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದಾರೆ.

"ಇದು ನನ್ನ ಸೇವೆಯ ಅಂತ್ಯವಲ್ಲ, ಬದಲಾಗಿ ಒಂದು ಹೊಸ ಆರಂಭ. ನಿವೃತ್ತಿಯ ಬಳಿಕ ಹೊಸ ವೇದಿಕೆಯಲ್ಲಿ ನನ್ನ ಸಮಾಜಮುಖಿ ಕೆಲಸಗಳನ್ನ ಮುಂದುವರಿಸಲಿದ್ದೇನೆ" ಎಂದು ಅವರು ಭರವಸೆ ನೀಡಿದ್ದಾರೆ. ಅವರ ಈ ನಿಸ್ವಾರ್ಥ ಸೇವೆ ಹಾಗೂ ದೇಶಭಕ್ತಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+