'ಮಾಜಿ'ಗಳಾದರೂ ಸರಕಾರೀ ನಿವಾಸ ಖಾಲಿ ಮಾಡದ 200 ಸಂಸದರು: ಏನ್ ಹೇಳೋಣ ಇವರಿಗೆ?
ನವದೆಹಲಿ, ಆ 19 (ಪಿಟಿಐ): ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಎಂಬತ್ತು ದಿನಗಳ ಮೇಲಾದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಇನ್ನೂರಕ್ಕೂ ಹೆಚ್ಚು ಮಾಜಿ ಸಂಸದರು, ಇನ್ನೂ ಸರಕಾರೀ ಬಂಗಲೆ ಖಾಲಿ ಮಾಡಿಲ್ಲ.
ಇದರಿಂದ, ಬೇರೆ ದಾರಿಯಿಲ್ಲದೇ, ನೂತನ ಸಂಸದರಿಗೆ ಮತ್ತೊಂದು ನಿವಾಸ ಕೊಡಬೇಕಾದ ಅನಿವಾರ್ಯತೆಯಲ್ಲಿ ಕೇಂದ್ರ ಸರಕಾರವಿದೆ. ಹೀಗಾಗಿ, ನೂತನ ಸಂಸದರಿಗೆ ವೆಸ್ಟರ್ನ್ ಕೋರ್ಟ್ ಮತ್ತು ಇತರ ಅತಿಥಿಗೃಹಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ನೂತನ ಸಂಸದರಿಗೆ ತಗಲುವ ವಸತಿ ವೆಚ್ಚವನ್ನು ಕಡಿಮೆ ಮಾಡಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಹೊಸದಾಗಿ ಆಯ್ಕೆಯಾದ ಸಂಸದರಿಗೆ, ಸರಕಾರೀ ನಿವಾಸ ಮಂಜೂರಾಗುವ ತನಕ, ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಇದುವರೆಗೆ ಮಾಡಲಾಗುತ್ತಿತ್ತು.

ನಿಯಮಗಳ ಪ್ರಕಾರ, ಮಾಜಿ ಸಂಸದರು ಹಿಂದಿನ ಲೋಕಸಭೆಯನ್ನು ವಿಸರ್ಜಿಸಿದ ಒಂದು ತಿಂಗಳೊಳಗೆ ತಮಗೆ ಕೊಟ್ಟಿರುವ ಬಂಗಲೆಗಳನ್ನು ಖಾಲಿ ಮಾಡಬೇಕಾಗುತ್ತದೆ. ಆದರೆ, ಹೆಚ್ಚುಕಮ್ಮಿ ಮೂರು ತಿಂಗಳಾಗುತ್ತಾ ಬಂದರು, ಸರಕಾರೀ ನಿವಾಸಗಳನ್ನು ಖಾಲಿ ಮಾಡುವ ಗೋಜಿಗೆ ಇವರು ಹೋಗಿಲ್ಲ.
"200ಕ್ಕೂ ಹೆಚ್ಚು ಮಾಜಿ ಲೋಕಸಭಾ ಸಂಸದರು ತಮ್ಮ ಅಧಿಕೃತ ಬಂಗಲೆಗಳನ್ನು ಇನ್ನೂ ಖಾಲಿ ಮಾಡಿಲ್ಲ, ಅದನ್ನು ಅವರಿಗೆ 2014ರಲ್ಲಿ ಮಂಜೂರು ಮಾಡಲಾಗಿತ್ತು" ಎಂದು ಮೂಲಗಳ ವರದಿಯನ್ನು ಆಧರಿಸಿ ಪಿಟಿಐ ವರದಿ ಮಾಡಿದೆ.
ಹಾಲೀ 17ನೇ ಲೋಕಸಭೆಯಲ್ಲಿ 260ಕ್ಕೂ ಹೆಚ್ಚು ಸಂಸದರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ದೆಹಲಿಯ ಲೂಟೆನ್ಸ್ ಪ್ರದೇಶದಲ್ಲಿ ಅಧಿಕೃತ ನಿವಾಸಗಳನ್ನು ಸಂಸದರಿಗೆ ನೀಡಲಾಗುತ್ತದೆ.












Click it and Unblock the Notifications