Monsoon Rainfall: ಅವಧಿಗಿಂತ ಮೊದಲೇ ದೇಶಕ್ಕೆ ಪ್ರವೇಶಿಸಲಿದೆ ಮಾನ್ಸೂನ್
ನವದೆಹಲಿ, ಮೇ. 13 : ನೈಋತ್ಯ ಮಾನ್ಸೂನ್ ಮಾರುತಗಳು ಅವಧಿಗಿಂತ ಮೊದಲೆ ದೇಶಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ದಕ್ಷಿಣ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 19 ರ ಸುಮಾರಿಗೆ ಮಾನ್ಸೂನ್ ಪ್ರವೇಶಿಸಲಿದೆ.
ದೇಶಕ್ಕೆ ಮಾನ್ಸೂನ್ ಮೇ 22 ಕ್ಕೆ ಸಾಮಾನ್ಯವಾಗಿ ಆರಂಭವಾಗಬೇಕಿತ್ತು. ಆದರೆ, ಅವಧಿಗಿಂತ ಎರಡು ದಿನಗಳ ಮೊದಲೇ ಮಾನ್ಸೂನ್ ಕಾಲಿಡುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮಾಹಿತಿ ನೀಡಿದೆ. ಬಳಿಕ ಮಾನ್ಸೂನ್ ಮಾರುತಗಳು ಸಾಮಾನ್ಯವಾಗಿ ಜೂನ್ 1 ರ ಸುಮಾರಿಗೆ ಕೇರಳದತ್ತ ಹೋಗಿ ಆಮೇಲೆ ಉತ್ತರದ ಕಡೆಗೆ ಹೋಗುತ್ತದೆ. ಜುಲೈ 15 ರ ಸುಮಾರಿಗೆ ಇಡೀ ದೇಶವನ್ನು ಆವರಿಸುತ್ತದೆ ಎಂದಿದೆ.

ಮಾನ್ಸೂನ್ ಪ್ರವೇಶ: ಸಾಮಾನ್ಯಕ್ಕಿಂತ ಹೆಚ್ಚಾಗಲಿದೆ ಮಳೆ
ಜೂನ್ ಮತ್ತು ಸೆಪ್ಟೆಂಬರ್ ನಡುವಿನ ಮಾನ್ಸೂನ್ ಮಳೆಯು ದೀರ್ಘಾವಧಿಯ ಸರಾಸರಿ (LPA) 106% ನಲ್ಲಿ 'ಸಾಮಾನ್ಯಕ್ಕಿಂತ ಹೆಚ್ಚು' ಆಗುವ ಸಾಧ್ಯತೆಯಿದೆ. ಮೇ ಕೊನೆಯ ವಾರದಲ್ಲಿ ಮತ್ತೆ ಮಾನ್ಸೂನ್ ಮಾರುತಗಳ ಅಪ್‌ಡೇಟ್ ಅನ್ನು ಐಎಂಡಿ ಹಂಚಿಕೊಳ್ಳಲಿದೆ. ಈ ವೇಳೆ ಭಾರತದ ನಾಲ್ಕು ಏಕರೂಪದ ಪ್ರದೇಶಗಳಲ್ಲಿ (ವಾಯುವ್ಯ ಭಾರತ, ಮಧ್ಯ ಭಾರತ, ದಕ್ಷಿಣ ಪೆನಿನ್ಸುಲಾ ಮತ್ತು ಈಶಾನ್ಯ ಭಾರತ) ಮತ್ತು ಮಾನ್ಸೂನ್ ಕೋರ್ ಝೋನ್‌ನ ಮಳೆಯ ಸಂಭವನೀಯ ಮುನ್ಸೂಚನೆಗಳನ್ನು ಸಹ ನೀಡಲಿದೆ.
ಮೇ 16ರಿಂದ ವಾಯುವ್ಯ ಭಾರತದಲ್ಲಿ ತಾಪಮಾನ ಏರಿಕೆ!
ಮೇ 16ರ ಗುರುವಾರದಿಂದ ವಾಯುವ್ಯ ಭಾರತದಲ್ಲಿ ಮತ್ತೆ ಶಾಖದ ಅಲೆಗಳು ಆರಂಭವಾಗಲಿವೆ ಎಂದು ಭಾರತ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಪಶ್ಚಿಮ ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ ಮತ್ತು ದಕ್ಷಿಣ ಹರಿಯಾಣ ಸೇರಿದಂತೆ ಹಲವು ಪ್ರದೇಶಗಳು ಈ ಶಾಖದ ಅಲೆಗಳನ್ನು ಅನುಭವಿಸಲಿವೆ. ಹವಾಮಾನ ಕಚೇರಿಯ ಪ್ರಕಾರ, ಮುಂದಿನ ನಾಲ್ಕು ದಿನಗಳಲ್ಲಿ ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಬಿಸಿ ವಾತಾವರಣವೂ ಇರುತ್ತದೆ.

ಪ್ರಾದೇಶಿಕ ಮೆಟ್ ಸೆಂಟರ್ (RWFC) ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಪೂರ್ವ ಉತ್ತರ ಪ್ರದೇಶ, ಪಶ್ಚಿಮ ರಾಜಸ್ಥಾನ ಮತ್ತು ಪೂರ್ವ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಮೇ 16 ಮತ್ತು 17 ರಂದು ಬಿಸಿಗಾಳಿಯನ್ನು ಮುನ್ಸೂಚನೆ ನೀಡಿದೆ.
ಮೇ 12 ರಂದು ಪಶ್ಚಿಮ ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ಗರಿಷ್ಠ ತಾಪಮಾನ 43.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇತರ ಪ್ರದೇಶಗಳಾದ ಮಧ್ಯ ಮಹಾರಾಷ್ಟ್ರದ ಮಾಲೆಗಾಂವ್ 42.6 ಡಿಗ್ರಿ ಸೆಲ್ಸಿಯಸ್, ಪಶ್ಚಿಮ ರಾಜಸ್ಥಾನದ ಬಾರ್ಮರ್, ಸೌರಾಷ್ಟ್ರದ ಸುರೇಂದ್ರನಗರ ಮತ್ತು ಕಚ್‌ನಲ್ಲಿ 42.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಧ್ಯಪ್ರದೇಶದಲ್ಲಿ ಆಲಿಕಲ್ಲು ಮಳೆ
ಮಧ್ಯಪ್ರದೇಶ ಮತ್ತು ವಿದರ್ಭದ ಪ್ರತ್ಯೇಕ ಪ್ರದೇಶಗಳಲ್ಲಿ ಮೇ 17 ರಂದು 50 ರಿಂದ 60 ಕಿಮೀ ವೇಗದ ಚಂಡಮಾರುತದೊಂದಿಗೆ ಆಲಿಕಲ್ಲು ಮಳೆಗೆ ಸಾಕ್ಷಿಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಮೇ 14 ರವರೆಗೆ ಪೂರ್ವ ಮತ್ತು ಮಧ್ಯ ಭಾರತದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿಯ ಮಳೆಯಾಗಲಿದೆ.












Click it and Unblock the Notifications