ಪ್ರಧಾನಿಯಾಗಿ ಮೋದಿ ಪ್ರಮಾಣವಚನ: ಪೇಜಾವರಶ್ರೀ ಹಾಗೂ ಡಾ.ನಸೀರ್ ಅಹ್ಮದ್‌ಗೆ ಆಹ್ವಾನ
ದೆಹಲಿ ಜೂನ್ 9: ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ದೇಶ ವಿದೇಶದ ಗಣ್ಯರಿಗೆ ಮಾತ್ರವಲ್ಲದೆ ಉಡುಪಿ ಪೇಜಾವರಶ್ರೀ ಹಾಗೂ ಡಾ.ನಸೀರ್ ಅಹ್ಮದ್ ಅವರಿಗೆ ಆಹ್ವಾನ ನೀಡಲಾಗಿದೆ.
ನರೇಂದ್ರ ಮೋದಿ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೇಜಾವರ ಶ್ರೀಗಳು ಇಂದು ಬೆಳಗ್ಗೆ ಕೆಂಪೇಗೌಡ ಏರ್‌ಪೋರ್ಟ್‌ನಿಂದ ದೆಹಲಿಗೆ ತೆರಳಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದ್ದು ನರೇಂದ್ರ ಮೋದಿ ಪಟ್ಟಾಭಿಷೇಕಕ್ಕೆ ಕೌಂಟ್‌ಡೌನ್ ಶುರುವಾಗಿದೆ.

ಉಡುಪಿಯ ಪೇಜಾವರಶ್ರೀ ಅವರೊಂದಿಗೆ ದಾವಣಗೆರೆಯ ಸಮಾಜ ಸೇವಕ ಮತ್ತು ಬಿಜೆಪಿ ಮುಖಂಡ ಡಾ.ನಸೀರ್ ಅಹ್ಮದ್ ಅವರಿಗೂ ಸಮಾರಂಭಕ್ಕೆ ಅಧಿಕೃತ ಆಹ್ವಾನ ನೀಡಲಾಗಿದೆ. ಬಿಜೆಪಿ ಕಚೇರಿಯಿಂದ ಕರೆ ಮಾಡಿ ನಸೀರ್ ಅವರಿಗೆ ಆಹ್ವಾನಿಸಿದ್ದರಿಂದ ಇಂದು ಅವರೂ ಕೂಡ ದೆಹಲಿಗೆ ತೆರಳಲಿದ್ದಾರೆ. ಅಲ್ಲದೆ ಈ ಸಮಾರಂಭಕ್ಕೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಕೂಡ ಆಹ್ವಾನಿಸಲಾಗಿದೆ.
ಸತತ ಮೂರನೇ ಅವಧಿಗೆ ಎನ್ ಡಿಎ ಸಂಸದೀಯ ನಾಯಕರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜೂನ್ 9 ರಂದು ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಮತ್ತು ಅವರ ಸಂಪುಟದ ಕೆಲವು ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಮತ್ತು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡುವ ಕಾರಣದಿಂದ ಜೂನ್ 8, 15 ಮತ್ತು 22, ರಂದು ರಾಷ್ಟ್ರಪತಿ ಭವನದಲ್ಲಿ ನಿಗದಿಯಾಗಿದ್ದ ಚೇಂಜ್ ಆಫ್ ಗಾರ್ಡ್ ರದ್ದುಗೊಳಿಸಲಾಗಿದೆ.

ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಮುಖ್ಯಸ್ಥ ಜೆ ಪಿ ನಡ್ಡಾ ಅವರು ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಆಯ್ಕೆಯಾದ ಪತ್ರವನ್ನು ಹಸ್ತಾಂತರಿಸಿದ ನಂತರ ಮತ್ತು ಎನ್‌ಡಿಎ ನಾಯಕರು ತಮ್ಮ ಬೆಂಬಲ ಪತ್ರವನ್ನು ಸಲ್ಲಿಸಿದ ನಂತರ ರಾಷ್ಟ್ರಪತಿಗಳು ಶುಕ್ರವಾರ ನೂತನ ಸರ್ಕಾರ ರಚನೆಗೆ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.
ಬಿಜೆಪಿಯ ಎಲ್ಲಾ ಪ್ರಮುಖ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ, ಜನತಾ ದಳ-ಯುನೈಟೆಡ್, ಶಿವಸೇನೆ ಮತ್ತು ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ಸಂಸದರು ಮೋದಿ ಜೊತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗಷ್ಟೇ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದುಕೊಂಡಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ ಒಟ್ಟಾಗಿ 293 ಸ್ಥಾನಗಳನ್ನು ಗೆದ್ದಿದೆ. ಬಹುಮತಕ್ಕೆ 272 ಸದಸ್ಯ ಬಲದ ಅಗತ್ಯ ಇದೆ.












Click it and Unblock the Notifications