• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂರು ವರ್ಷದಲ್ಲಿ ದೇಶವನ್ನು ಹಳ್ಳ ಹಿಡಿಸಿದ ಮೋದಿ -ಕಾಂಗ್ರೆಸ್

By Sachhidananda Acharya
|

ನವದೆಹಲಿ, ಮೇ 16: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಕೇಸರಿ ಪಕ್ಷ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಕಾಂಗ್ರೆಸ್ ಮೋದಿ ಮೇಲೆ ಹರಿಹಾಯ್ದಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.[3 ವರ್ಷದ ಹಿಂದೆ, ಮೋದಿ ಗೆಲುವನ್ನು ಪತ್ರಿಕೆಗಳು ಸಾರಿದ್ದು ಹೀಗೆ]

'ಮೋದಿ ಸರಕಾರ ದಕ್ಷಿಣ ಭಾರತೀಯರನ್ನು ಕಡೆಗಣಿಸುತ್ತಿದೆ. ಕರ್ನಾಟಕ 4702 ಕೋಟಿ ಬರಪರಿಹಾರ ಕೇಳಿದರೆ ಕೇವಲ 1786 ಕೋಟಿ ನೀಡಿದ್ದಾರೆ. ತಮಿಳುನಾಡಿನಲ್ಲಿ ಭೀಕರ ಬರಗಾಲವಿದೆ. ಆದರೆ ಪ್ರಧಾನಿಯಾಗಲಿ ಯಾರೂ ಅಲ್ಲಿಗೆ ಭೇಟಿ ನೀಡಿಲ್ಲ. ಬದಲಿಗೆ ನರೇಂದ್ರ ಮೋದಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದಾರೆ. ಅತ್ತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನೂ ನೀಡಿಲ್ಲ. ಕೇರಳದಲ್ಲಿ ಸಾರ್ವಜನಿಕ ಆಹಾರ ಸರಬರಾಜು ವ್ಯವಸ್ಥೆಯನ್ನೇ ಹಾಳು ಮಾಡಲು ಸರಕಾರ ಯತ್ನಿಸುತ್ತಿದೆ. ಅಲ್ಲಿ ಜನರಿಗೆ ಬೇಕಾದ ಅಕ್ಕಿಯನ್ನು ಪಿಡಿಎಸ್ ವ್ಯವಸ್ಥೆಯಲ್ಲಿ ನೀಡಿಲ್ಲ," ಎಂದು ರಮ್ಯಾ ವಾಗ್ದಾಳಿ ನಡೆಸಿದರು.[3 ವರ್ಷ ಪೂರೈಸಿದ ಮೋದಿಗೆ ಕಾಂಗ್ರೆಸ್ ವಿಶೇಷ ಉಡುಗೊರೆ!]

ನರೇಗಾ ಯೋಜನೆಯಡಿಯಲ್ಲಿ ಬಿಡುಗಡೆ ಮಾಡಬೇಕಾಗಿದ್ದ 1,500 ಕೋಟಿ ಹಣವನ್ನೂ ಬಿಡುಗಡೆ ಮಾಡಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ನಾಯಕ ತರುಣ್ ವಿಜಯ್ ದಕ್ಷಿಣ ಭಾರತೀಯರ ಮೇಲೆ ವರ್ಣದ್ವೇಷದ ಹೇಳಿಕೆ ನೀಡಿದ್ದರು. ಇದು ಅವರೊಬ್ಬರ ಮನಸ್ಥಿತಿ ಅಲ್ಲ. ಬಿಜೆಪಿಯ ಎಲ್ಲರ ಮನಸ್ಥಿತಿಯೂ ಹೀಗೆಯೇ. ಇದೇ ಕಾರಣಕ್ಕೆ ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗಿದೆ ಎಂದು ಹೇಳಿದರು.

ಯುಪಿಎ ಎರಡನೇ ಅವಧಿಯಲ್ಲಿ ನಿರ್ಭಯಾ ಘಟನೆ ನಡೆದಾಗ ಆ ಸಂದರ್ಭದಲ್ಲಿ ಎಲ್ಲರೂ ರಾಜಕೀಯ ಮೀರಿ ನಡೆದುಕೊಂಡರು. ಅವತ್ತಿನ ಸರಕಾರ ನಿರ್ಭಯಾ ಫಂಡ್, ತ್ವರಿತ ನ್ಯಾಯಾಲಯಗಳನ್ನು ಹಾಗೂ ನಿರ್ಭಯಾ ಕೇಂದ್ರಗಳನ್ನು ಸ್ಥಾಪಿಸಿತು. ಆದರೆ ಇವತ್ತಿನ ಸರಕಾರ ನಿರ್ಭಯಾ ಫಂಡ್ ವಿನಿಯೋಗಿಸಿಲ್ಲ. ಕೇವಲ 660 ಕೇಂದ್ರಗಳ್ಲಲಿ ಕೇವಲ 20 ಕೇಂದ್ರಗಳಷ್ಟೇ ಕಾರ್ಯಚರಿಸುತ್ತಿವೆ ಎಂದು ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.[ನರೇಂದ್ರ ಮೋದಿ ಸರಕಾರಕ್ಕೆ ಮೂರು ವರ್ಷ: ಸಮೀಕ್ಷೆ ಏನು ಹೇಳುತ್ತೆ?]

"ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಅಪರಾಧ ವಿಭಾಗದ ದಾಖಲೆಗಳ ಪ್ರಕಾರ ಶೇಕಡಾ 22.2 ರಷ್ಟು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಗುರ್ಗಾಂವ್ ನಂಥ ಪ್ರದೇಶದಲ್ಲಿ ಅತ್ಯಾಚಾರ ನಡೆದಾಗ ಮುಖ್ಯಮಂತ್ರಿ ಸಂತ್ರಸ್ತೆಯ ಮನೆಗೂ ಭೇಟಿ ನೀಡಿಲ್ಲ. ಬಿಜೆಪಿ ನಾಯಕರ ಹೇಳಿಕೆಗಳೂ ಸೆಕ್ಸಿಸ್ಟ್ ಆಗಿವೆ," ಎಂದು ಅವರು ಇದೇ ಸಂದರ್ಭದಲ್ಲಿ ದೂರಿದರು.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ, "ಕಳೆದ ಮೂರು ವರ್ಷಗಳಲ್ಲಿ ಅಚ್ಚೇದಿನದ ಕನಸುಗಳನ್ನು ಮಾರುತ್ತಾ ನರೇಂದ್ರ ಮೋದಿ ಸರಕಾರ ಜನರನ್ನು ಅಸಹಾಯಕರನ್ನಾಗಿ ಮಾಡಿದೆ. ದೇಶದಾದ್ಯಂತ ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಇದರ ಬಗ್ಗೆ ಯಾರೇ ಮಾತನಾಡಿದರೂ ಅವರನ್ನು ದೇಶದ್ರೋಹಗಳಂತೆ ಚಿತ್ರಿಸಲಾಗುತ್ತಿದೆ. ದೇಶದ ಜನರು ಏನು ತಿನ್ನಬೇಕು, ಯಾವುದು ಕಲಿಯಬೇಕು, ಯಾವ ಬಟ್ಟೆ ಧರಿಸಬೇಕು ಎಂಬುದನ್ನು ಸರಕಾರ ನಿರ್ಧರಿಸುತ್ತಿದೆ. ಈ ಮೂಲಕ ಸರಕಾರ ತನ್ನ ಸಿದ್ಧಾಂತಗಳನ್ನು ಯೋಜನೆಗಳ ಮೂಲಕ ಹೇರುತ್ತಿದೆ," ಎಂದು ಹೇಳಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಇನ್ನೊಬ್ಬ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, "ದೇಶದ ರೈತರು ಉಳಿದ ಎಲ್ಲರಿಗಿಂತಲೂ ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಸರಕಾರ ಪ್ರಮುಖ ವಿಷಯಗಳಿಗಿಂತ ಹೆಚ್ಚಾಗಿ ಭಾವನಾತ್ಮಕ ವಿಷಯಗಳ ಕಡೆ ಗಮನ ಬದಲಾಯಿಸುತ್ತಿದೆ," ಎಂದು ದೂರಿದ್ದಾರೆ.

English summary
Narendra Modi is neglecting South Indians. They gave only Rs 1,786 crores instead the demand of Rs 4,702 crores as drought relief fund to Karnataka said in her press meet in New Delhi as Modi’s Lok Sabha election victory completes 3 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X