ಮೋದಿ ಕ್ಯಾಬಿನೆಟ್ ಪುನರ್ ರಚನೆ: ಶೋಭಾ ಕರಂದ್ಲಾಜೆ, ಪಿಯೂಶ್ ಗೋಯಲ್ ಗೆ ಕೊಕ್?
ಬೆಂಗಳೂರು, ಜುಲೈ 03: ದೇಶದಲ್ಲಿ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ತಿಂಗಳುಗಳು ಬಾಕಿ ಇರುವಾಗಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಈ ಕುರಿತು ಒಂದಷ್ಟು ಚುಟುವುಟಿಕೆಗಳು ಗರಿಗೆದರಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಧ್ಯೆ ಈಗಾಗಲೇ ಸುದೀರ್ಘ ಚರ್ಚೆ ನಡೆದಿದೆ.
ಒಂದು ವೇಳೆ ಸಂಪುಟ ಪುನರ್ ರಚನೆ ಆದರೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕೆಲವು ಸಚಿವರಿಗೆ ಕೋಕ್ ಸಿಗಬಹುದು. ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಕರ್ನಾಟಕದ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಸಂಪುಟ ಪುನಾರಚನೆಯಿಂದ ಹೊರಗುಳಿಸುವ ಸಾಧ್ಯತೆ ಇದೆ.

ಕಳೆದ ಜೂನ್ 29 ರಂದು ಮತ್ತು ಪ್ರಧಾನಿ ಮೋದಿ ನಿವಾಸದಲ್ಲಿ ನಾಲ್ಕು ಗಂಟೆಗಳ ಸುದೀರ್ಘ ಸಭೆ ನಡೆದಿದೆ. ಅಲ್ಲಿ ಸಂಭಾವ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತು ಚರ್ಚಿಸಿದ್ದಾರೆ. ಹೊಸದಾಗಿ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮತ್ತು ಇನ್ನೂ ಹಲವರನ್ನು ಕೈ ಬಿಡುಗಡೆ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.
2021ರಲ್ಲಿ ಕಡೆಯ ಸಂಪುಟ ಪುನಾರಚನೆ ಆದಾಗ ಒಟ್ಟು 43 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್ ಮತ್ತು ಹರ್ಷವರ್ಧನ್ ಅವರಿಗೆ ಆಗ ಕೋಕ್ ನೀಡಲಾಗಿತ್ತು. ಕಿರಣ್ ರಿಜಿಜು, ಅನುರಾಗ್ ಠಾಕೂರ್ ಹಾಗೂ ಪುರುಷೋತ್ತಮ್ ರೂಪಲಾ ಅವರಿಗೆ ಬಡ್ತಿ ನೀಡಲಾಗಿತ್ತು.

ಇದೀಗ ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳು ಬಾಕಿ ಇರುವ ಮುನ್ನವೇ ಸಂಪುಟ ಪುನಾರಚನೆ ಮಾತು ಕೇಳಿ ಬಂದಿದೆ. ಇದರ ಬೆನ್ನಲ್ಲೆ ಇಂದು ಜುಲೈ 3 ರಂದು ಪ್ರಧಾನಿ ಮೋದಿ ಸಂಪುಟ ಸಭೆ ಕರೆದಿದ್ದಾರೆ. ಹೊಸ ಸಚಿವರ ಪ್ರಮಾಣ ವಚನ ಸ್ವೀಕಾರ ಯಾವಾಗ ಬೇಕಾದರೂ ಆಗಬಹುದು ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿವೆ.
ಗುಜರಾತ್ ಕೋಟಾ ಸಚಿವರಿಗೆ ತೊಂದರೆ ಸಾಧ್ಯತೆ
ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆ ಬಳಿಕ ಲೋಕಸಭಾ ಚುನಾವಣೆ ನಡೆಯಲಿರುವ ರಾಜ್ಯಗಳ ನಾಯಕರಿಗೆ ಆದ್ಯತೆ ಸಿಗಲಿದೆ. ಇದರ ಹಿಂದೆ ಚುನಾವಣೆ ಗೆಲುವಿನ ತಂತ್ರ ಅಡಗಿದೆ. ಈ ಸಂಪುಟ ವಿಸ್ತರಣೆಯ ತಂತ್ರ ಮತ್ತು ಬೆಳೆವಣಿಗೆ ಗುಜರಾತ್ ಮತ್ತು ಯುಪಿ ಎರಡು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ನಡೆದಿತ್ತು.
ಈ ಬಾರಿ ಇನ್ನೂ ಗುಜರಾತ್ ಕೋಟಾದ ಕೆಲವು ಮಂತ್ರಿಗಳನ್ನು ಕೈಬಿಡಹುದು. ಸದ್ಯ ಪ್ರಧಾನಿ ಮೋದಿ, ಅಮಿತ್ ಶಾ, ಮನ್ಸುಖ್ ಮಾಂಡವಿಯಾ, ಪರುರ್ಷೋತ್ತಮ್ ರೂಪಾಲಾ, ದರ್ಶನ ಜರ್ದೋಶ್, ದೇವುಸಿಂಗ್ ಚೌಹಾಣ್ ಮತ್ತು ಮಹೇಂದ್ರ ಮುಂಜಪಾರಾ ಅವರು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗುಜರಾತ್ ಕೋಟಾದ ಸಚಿವರನ್ನು ವಜಾಗೊಳಿಸಿದರೆ, ಮನ್ಸುಖ್ ಮಾಂಡವಿಯಾ, ಪರ್ಷೋತ್ತಮ್ ರೂಪಲಾ ಮತ್ತು ದರ್ಶನಾ ಜರ್ದೋಶ್ ಅವರಿಗೂ ಸಂಕಷ್ಟ ಎದುರಾಗಬಹುದು ಎನ್ನಲಾಗುತ್ತಿದೆ.
ಗೋಯಲ್, ಪ್ರಧಾನ್ ಗೆ ಕೋಕ್ ಸಾಧ್ಯತೆ
ಹಾಲಿ ಸಚಿವರಾದ ಪಿಯೂಷ್ ಗೋಯಲ್ ಮತ್ತು ಧರ್ಮೇಂದ್ರ ಪ್ರಧಾನ್ ರನ್ನೂ ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ. ಗೋಯಲ್ ಅವರಿಗೆ ರಾಜಸ್ಥಾನ ಬಿಜೆಪಿ ಉಸ್ತುವಾರಿ ನೀಡಬಹುದು. ಇದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಅವರು ಕಳೆದ 15 ದಿನಗಳಲ್ಲಿ ಮೂರು ಬಾರಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದನ್ನು ಇಲ್ಲಿ ಗಮನಿಸಬಹುದು.
ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ಬಿಡುಗಡೆ ಮಾಡಿ ಅವರನ್ನು ಉತ್ತರ ಪ್ರದೇಶದ ಬಿಜೆಪಿ ಉಸ್ತುವಾರಿ ಮಾಡಬಹುದು. ಸದ್ಯ ಆ ಸ್ಥಾನದಲ್ಲಿ ರಾಧಾ ಮೋಹನ್ ಸಿಂಗ್ ಅವರಿದ್ದಾರೆ. 2019ರ ಚುನಾವಣೆಗೂ ಮುನ್ನ ಜೆಪಿ ನಡ್ಡಾ ಅವರನ್ನು ಉತ್ತರ ಪ್ರದೇಶದ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು.
ಬಿಹಾರ, ಯುಪಿಯ ಯಾವ ಸಚಿವರಿಗೆ ಸಂಕಷ್ಟ
ಸಂಪುಟ ಪುನಾರಚನೆ ಆದರೆ ಬಿಹಾರ ಮತ್ತು ಯುಪಿಯ ಸಚಿವರನ್ನು ಕೈಬಿಡಬಹುದು. ಕೇಂದ್ರ ಸಂಪುಟದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶದಿಂದ 20 ಸಚಿವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಹಾರದ ಅಶ್ವಿನಿ ಚೌಬೆ, ಪಶುಪತಿ ಪಾರಸ್, ಆರ್‌ಕೆ ಸಿಂಗ್ ಅವರು ಪುನಾರಚನೆಯ ಸಂಕಷ್ಟ ಎದುರಿಸುತ್ತಿದ್ದಾರೆ.
ಉತ್ತರ ಪ್ರದೇಶದ ಮಹೇಂದ್ರ ನಾಥ್ ಪಾಂಡೆ, ಅಜಯ್ ಮಿಶ್ರಾ ಟೆನಿ ಅವರನ್ನು ಕೈ ಬಿಡಬಹುದು. ಇದರಿಂದಾಗಿ ಬ್ರಾಹ್ಮಣರನ್ನು ಸಮಾಧಾನಪಡಿಸಲು ಲಕ್ಷ್ಮೀಕಾಂತ್ ವಾಜಪೇಯಿ ಅಥವಾ ಹರೀಶ್ ದ್ವಿವೇದಿ ಸಂಪುಟಕ್ಕೆ ಸರ್ಪೇಡೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಮಹಾರಾಷ್ಟ್ರ, ಕರ್ನಾಟಕ ಕೋಟಾ ಸಚಿವರೂ ಸಂಕಷ್ಟದಲ್ಲಿದ್ದಾರೆ
ಸದ್ಯ ಕೇಂದ್ರದಲ್ಲಿ ಮಹಾರಾಷ್ಟ್ರದ ಶಿಂಧೆ ಬಣ ಮೂವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಚಿಂತನೆ ನಡೆಯುತ್ತಿದೆ. ಮಹಾರಾಷ್ಟ್ರದ 08 ಮಂದಿ ಸಚಿವರಿದ್ದಾರೆ. ಆ ಪೈಕಿ ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ನಾರಾಯಣ ರಾಣೆ ಮತ್ತು ರಾಮದಾಸ್ ಅಠವಳೆ ಕೈ ಬಿಡುವ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. ಶೀಘ್ರವೇ ಈ ಬಗ್ಗೆ ತಿಳಿಯಲಿದೆ.
ಕರ್ನಾಟಕದಿಂದ ಆರು ಮಂದಿ ಕೇಂದ್ರ ಸಚಿವರಾಗಿದ್ದಾರೆ. ಇದರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೌದು. ಇನ್ನೂ ಕೈ ಬಿಡಲು ಹೆಸರುಗಳಲ್ಲಿ ಕೇಳಿ ಬಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಸಾಲಿನಲ್ಲಿ ಓಡಾಡುತ್ತಿದೆ ಎನ್ನಲಾಗಿದೆ.ತೆಲಂಗಾಣ ಮತ್ತು ತಮಿಳುನಾಡಿನಿಂದ ತಲಾ ಇಬ್ಬರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಗಳು ದಟ್ಟವಾಗಿವೆ.
ಈ ವರ್ಷಾಂತ್ಯಕ್ಕೆ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣೆ ನಡೆಯಲಿದೆ. ಕೇಂದ್ರ ಸರ್ಕಾರ ಅದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಹೊಸ ಮುಖಗಳಿಗೆ ಕೇಂದ್ರದಲ್ಲಿ ನೀಡುವ ಸಾಧ್ಯತೆಗಳಿವೆ. ಹಿಂದಿ ರಾಜ್ಯಗಳ ಸುಮಾರು 62 ಸಂಸದರು ಇದ್ದು, ಮಧ್ಯಪ್ರದೇಶದ 3, ಛತ್ತೀಸ್‌ಗಢ 2 ಹಾಗೂ ರಾಜಸ್ಥಾನ 2 ಸಚಿವರಿಗೆ ಕೇಂದ್ರದಲ್ಲಿ ಸ್ಥಾನ ದೊರೆಯಲಿದೆ.
ಪ್ರಧಾನಿ ಸಂಪುಟದಲ್ಲಿ ಸಚಿವರೆಷ್ಟು?
ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ಸೇರಿದಂತೆ ಒಟ್ಟು 81 ಮಂದಿ ಸಚಿವರಿಗೆ ಅವಕಾಶ ಇದೆ ಎಂದು ನಿಯಮಗಳು ಹೇಳುತ್ತವೆ. ಸದ್ಯ 78 ಸಚಿವರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಮೂರು ಸ್ಥಾನ ಖಾಲಿ ಇದ್ದು, ಕಳೆದ ಬಾರಿ ಸಂಪುಟ ವಿಸ್ತರಣೆ ವೇಳೆ 12 ಸಚಿವರು ರಾಜೀನಾಮೆ ನೀಡಿದ್ದರು. ಅಂದು 36 ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. 7 ಸಚಿವರಿಗೆ ಬಡ್ತಿ ನೀಡಲಾಯಿತು.












Click it and Unblock the Notifications