MODI 3.0: ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ? ಎಷ್ಟು ಮಹಿಳೆಯರಿಗೆ ಅವಕಾಶ?
ದೇಶದ ಪ್ರಧಾನಿ ಆಗಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚುನಾವಣಾ ಫಲಿತಾಂಶಗಳು ಬಂದ ಐದೇ ದಿನದಲ್ಲಿ ಎನ್‌ಡಿಎ ಸರ್ಕಾರ ರಚಿಸಿದೆ. ಎನ್‌ಡಿಎ ಮೈತ್ರಿ ಕೂಟದ ಸರ್ಕಾರದಲ್ಲಿ ಒಟ್ಟು 72 ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗಿದ್ದರೆ ಯಾವ ರಾಜ್ಯಕ್ಕೆ ಎಷ್ಟು ಪಾತ್ರಿನಿಧ್ಯ ನೀಡಲಾಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಭಾನುವಾರ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಹೊರತುಪಡಿಸಿ 60 ಸಚಿವರು ಬಿಜೆಪಿಯಿಂದ ಮತ್ತು 11 ಸಂಸದರು ಎನ್‌ಡಿಎ ಮೈತ್ರಿ ಕೂಟದಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ಮೋದಿ ಅವರು ಅತಿ ದೊಡ್ಡ ಸಚಿವ ಸಂಪುಟವನ್ನು ರಚಿಸಿದ್ದಾರೆ. 2014ರಲ್ಲಿ 45, 2019ರಲ್ಲಿ 57 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರೆ, ಈ ಬಾರಿ 71 ಜನ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪುಟ ಸಚಿವರ ಸಂಖ್ಯೆಯಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ.

ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ?
ಉತ್ತರ ಪ್ರದೇಶ 11, ಬಿಹಾರ್ 8, ಮಹಾರಾಷ್ಟ್ರ 6, ಗುಜರಾತ್, ಕರ್ನಾಟಕ, ಮಧ್ಯ ಪ್ರದೇಶ ರಾಜ್ಯಗಳಿಗೆ ತಲಾ ಐದು, ರಾಜಸ್ಥಾನ 4, ಓಡಿಶಾ, ಆಂಧ್ರ ಪ್ರದೇಶ, ಹರಿಯಾಣದಿಂದ ತಲಾ ಮೂರು, ಜಾರ್ಖಂಡ್, ಪಶ್ಚಿಮ ಬಂಗಾಳ, ತೆಲಂಗಾಣ, ಆಸ್ಸಾಂ, ಕೇರಳ ತಲಾ ಎರಡು ಸ್ಥಾನಗಳು ಲಭಿಸಿವೆ.
ಹಿಮಾಚಲ ಪ್ರದೇಶ, ಗೋವಾ, ಜಮ್ಮು-ಕಾಶ್ಮೀರ್, ಅರುಣಾಚಲ ಪ್ರದೇಶ, ಚತ್ತಿಸ್‌ಗಢ, ಪಂಜಾಬ್, ಉತ್ತರಾಖಂಡ, ದೆಹಲಿಯಿಂದ ತಲಾ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ.

ಮೋದಿ ಸಚಿವ ಸಂಪುಟದಲ್ಲಿ 11 ರಾಜ್ಯಸಭಾ ಸಂಸದರಿಗೆ ಮಂತ್ರಿ ಗಿರಿ ಭಾಗ್ಯ ಲಭಿಸಿದೆ. ಜಗತ್ ಪ್ರಕಾಶ್ ನಡ್ಡಾ, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಅಶ್ವಿನಿ ವೈಷ್ಣವ್ ಮತ್ತು ಹರ್ದೀಪ್ ಸಿಂಗ್ ಪುರಿ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಸ್ವಪಕ್ಷಿಯ 41 ಮಂದಿಯನ್ನು ಬಿಜೆಪಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಅಥವಾ ಇತರೆ ಪಕ್ಷಗಳಿಂದ ಬಿಜೆಪಿ ಸೇರಿದ 13 ಮಂದಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. 4 ಜನ ಅಧಿಕಾರಿಗಳು, 7 ರಾಜಕೀಯ ಕುಟುಂಬಗಳಿಂದ ಬಂದವರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಇನ್ನು ಇದೇ ಮೊದಲ ಬಾರಿಗೆ ಸಂಸದ್ ಪ್ರವೇಶಿಸಿ 32 ಜನ ಸಚಿವರಾಗಿದ್ದಾರೆ.

ಸೋತರೂ ಸಚಿವ ಸ್ಥಾನ
ದಕ್ಷಿಣದಲ್ಲಿ ತಮಿಳುನಾಡಿನಿಂದ ಒಂದೇ ಒಂದು ಸ್ಥಾನ ಸಿಗದಿದ್ದರೂ ಸಚಿವ ಸ್ಥಾನದ ಭಾಗ್ಯ ಈ ರಾಜ್ಯಕ್ಕೆ ದಕ್ಕಿದೆ. ತಮಿಳುನಾಡಿನ ನೀಲಗಿರಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸೋತರೂ ಎಲ್. ಮುರುಗನ್ ಅವರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. ಅಲ್ಲದೆ ಎಸ್ ಜೈಶಂಕರ್ ಅವರಿಗೂ ಸಚಿವ ಸ್ಥಾನ ಲಭಿಸಿದೆ. ಆದರೆ ಇವರು ಗುಜರಾತ್‌ನಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಮೋದಿ ಕ್ಯಾಬಿನೇಟ್‌ನಲ್ಲಿ ಎಷ್ಟು ಮಹಿಳೆಯರಿಗೆ ಅವಕಾಶ?
ಮೂರನೇ ಬಾರಿಗೆ ದೇಶದ ಚುಕ್ಕಾಣಿಯನ್ನು ಹಿಡಿದಿರುವ ನರೇಂದ್ರ ಮೋದಿ, 72 72 ಸದಸ್ಯರ ಸಚಿವ ಸಂಪುಟ ರಚಿಸಿದ್ದಾರೆ. ಇದರಲ್ಲಿ ಇಬ್ಬರು ಕ್ಯಾಬಿನೆಟ್ ದರ್ಜೆ ಸೇರಿದಂತೆ ಏಳು ಮಹಿಳೆಯರಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಳಿದಂತೆ ಅನುಪ್ರಿಯಾ ಪಟೇಲ್, ರಕ್ಷಾ ಖಡ್ಸೆ, ಸಾವಿತ್ರಿ ಠಾಕೂರ್, ಶೋಭಾ ಕರಂದ್ಲಾಜೆ ಮತ್ತು ನಿಮುಬೆನ್ ಬಂಬಾನಿಯಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.












Click it and Unblock the Notifications