ತಮಿಳುನಾಡಿನಲ್ಲಿ ಬಿಜೆಪಿಗೆ ಸಹಾಯ ಮಾಡಲು ಚುನಾವಣಾ ಆಯೋಗದಿಂದ ಪಿತೂರಿ: ಎಂ.ಕೆ ಸ್ಟಾಲಿನ್
ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ತಮಿಳುನಾಡು ಸರ್ಕಾರವು ಭಾರತೀಯ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದೆ. ತಮಿಳುನಾಡು ಹಾಗೂ ಕೇಂದ್ರ ಎನ್‌ಡಿಎ ಸರ್ಕಾರದ ನಡುವೆ ಕಳೆದ ಎರಡರಿಂದ ಮೂರು ವರ್ಷದ ಅವಧಿಯಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ವಾಕ್ಸಮರ ಮುಂದುವರಿದಿದೆ.
ರಾಜ್ಯಪಾಲರು ವಿವಿಧ ಮಸೂದೆಗಳಿಗೆ ಸಹಿ ಮಾಡುವುದು, ತೆರಿಗೆ ಹಂಚಿಕೆ ವಿಚಾರ ಹಾಗೂ ಹಿಂದಿ ಭಾಷೆ, ನೂತನ ಶಿಕ್ಷಣ ನೀತಿ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ನಿಲುವು ಹಾಗೂ ನಿರ್ಧಾರಗಳನ್ನು ತಮಿಳುನಾಡಿನ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ವಿರೋಧಿಸಿಕೊಂಡೇ ಬಂದಿದೆ. ಕೆಲವೊಂದು ವಿಚಾರಗಳಲ್ಲಿ ಡಿಎಂಕೆ ಹಾಗೂ ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಡುವೆ ತೀವ್ರ ವಾಕ್ಸಮರ ನಡೆದಿದೆ. ಇದೀಗ ಮತದಾರರ ಪಟ್ಟಿ ವಿಶೇಷ ಪರಿಶೀಲನೆ (SIR)ಗೆ ಡಿಎಂಕೆ ವಿರೋಧ ವ್ಯಕ್ತಪಡಿಸಿದ್ದು. ಎಲ್ಲಾ ಮಿತ್ರ ಪಕ್ಷಗಳೊಂದಿಗೆ ಸೇರಿ ಈ ವಿಚಾರವಾಗಿ ಸಭೆ ನಡೆಸುವುದಾಗಿ ಹೇಳಿದೆ.

ತಮಿಳುನಾಡಿನಲ್ಲಿ SIR ನಡೆಸಿ, ಮತದಾನದ ಹಕ್ಕನ್ನು ಕಸಿದುಕೊಳ್ಳುವುದನ್ನು ನಾವು ವಿರೋಧಿಸುತ್ತೇವೆ. ಮತಕಳ್ಳತನ ಕುತಂತ್ರವನ್ನು ನಾವು ಸೋಲಿಸುತ್ತೇವೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಹೇಳಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ವಿಶೇಷವಾಗಿ ನವೆಂಬರ್ ಮತ್ತು ಡಿಸೆಂಬರ್ ಮಳೆಗಾಲದ ಅವಧಿಯಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕೈಗೊಳ್ಳುವುದು ಗಂಭೀರ ಪ್ರಾಯೋಗಿಕ ತೊಂದರೆಗಳನ್ನು ಸೃಷ್ಟಿ ಮಾಡಲಿದೆ. SIR ಅನ್ನು ಆತುರ ಮತ್ತು ಅಪಾರದರ್ಶಕ ರೀತಿಯಲ್ಲಿ ನಡೆಸುವುದು ಸಾರ್ವಜನಿಕರ ಮತದಾನದ ಹಕ್ಕುಗಳನ್ನು ದೋಚಲು ಮತ್ತು ಬಿಜೆಪಿಗೆ ಸಹಾಯ ಮಾಡಲು ಭಾರತೀಯ ಚುನಾವಣಾ ಆಯೋಗ ಮಾಡಿರುವ (ECI) ಪಿತೂರಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇನ್ನು ಬಿಹಾರದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು SC ಮತ್ತು ST ಸಮುದಾಯದ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಮತ್ತು ಪಾರದರ್ಶಕತೆಯ ಕೊರತೆಯು ಸಾರ್ವಜನಿಕ ಮನಸ್ಸಿನಲ್ಲಿ ಗಂಭೀರ ಅನುಮಾನವನ್ನು ಹುಟ್ಟುಹಾಕಿದೆ. ಈಗ ECI ಮುಂದಿನ ವಾರದಿಂದ ತಮಿಳುನಾಡಿನಲ್ಲಿ SIR ಪ್ರಾರಂಭವಾಗಲಿದೆ ಎಂದು ಘೋಷಿಸಿದೆ. ಘೋಷಣೆಯ ನಂತರ ನಾವು ನಮ್ಮ ಮೈತ್ರಿ ಪಕ್ಷಗಳೊಂದಿ ಚರ್ಚೆ ನಡೆಸಿದ್ದೇವೆ ಮತ್ತು ಆ ಆಧಾರದ ಮೇಲೆ ಮುಂದಿನ ಕ್ರಮವನ್ನು ನಿರ್ಧರಿಸಲು ನವೆಂಬರ್ 2 ರಂದು ಸರ್ವಪಕ್ಷ ಸಭೆಯನ್ನು ಕರೆಯಲಾಗುವುದು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು ಮತದಾನದ ಹಕ್ಕು ಎನ್ನುವುದು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ತಮಿಳುನಾಡು ಇದನ್ನು ಕೊಲ್ಲುವ ಯಾವುದೇ ಪ್ರಯತ್ನದ ವಿರುದ್ಧ ಹೋರಾಟ ಮಾಡಲಿದೆ ಅಷ್ಟೇ ಅಲ್ಲ ಆ ಹೋರಾಟದಲ್ಲಿ ಗೆಲ್ಲಲಿದೆ ಎಂದೂ ಅವರು ಹೇಳಿದ್ದಾರೆ.












Click it and Unblock the Notifications