Mizoram Election Result: ಆಡಳಿತ ಪಕ್ಷಕ್ಕೆ ಭಾರಿ ಹಿನ್ನಡೆ: ಬಹುಮತದತ್ತ ಝಡ್‌ಪಿಎಂ
ಆರು ಪಕ್ಷಗಳ ಮೈತ್ರಿಕೂಟವಾದ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಮಿಜೋರಾಂನಲ್ಲಿ ಅಧಿಕಾರ ಹಿಡಿಯುವ ಎಲ್ಲಾ ಸಾಧ್ಯತೆ ಇದೆ. ಸೋಮವಾರ ನಡೆಯುತ್ತಿರುವ ಮತ ಎಣಿಕೆಯಲ್ಲಿ ಝಡ್‌ಪಿಎಂ ಪಕ್ಷ ಈಗ 27 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
40 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಕನಿಷ್ಠ 21 ಸ್ಥಾನಗಳಲ್ಲಿ ಗೆಲ್ಲಬೇಕಿದ್ದು, ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ ಸರಳ ಬಹುಮತ ಪಡೆಯುವ ಎಲ್ಲಾ ಲಕ್ಷಣ ತೋರಿಸಿದೆ.

ಮುಖ್ಯಮಂತ್ರಿ ಝೋರಂತಂಗಾ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (MNF) ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿದೆ. ಎಂಎನ್‌ಎಫ್ ಪ್ರಸ್ತುತ ಒಂಬತ್ತು ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ ಮೂರು ಮತ್ತು ಒಂದರಲ್ಲಿ ಮುನ್ನಡೆ ಸಾಧಿಸಿವೆ.
ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ, ಎಂಎನ್‌ಎಫ್ 26 ಸ್ಥಾನಗಳನ್ನು ಮತ್ತು ಝಡ್‌ಪಿಎಂ 8 ಸ್ಥಾನಗಳನ್ನು ಗೆದ್ದಿದ್ದವು, ಐದು ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದ್ದರೆ ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಎಂಎನ್‌ಎಫ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮಿತ್ರ ಪಕ್ಷವಾಗಿದ್ದರೂ, ಬಿಜೆಪಿ ಮತ್ತು ಎಂಎನ್‌ಎಫ್ ಎರಡೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.
ಇನ್ನು ಹಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶ ಬರುತ್ತದೆ ಎಂದು ಭವಿಷ್ಯ ನುಡಿದಿದ್ದವು, ಆದರೆ ಎಲ್ಲಾ ಭವಿಷ್ಯಗಳನ್ನು ತಲೆಕೆಳಗಾಗಿಸಿರುವ ಝಡ್‌ಪಿಎಂ ಪ್ರಚಂಡ ಗೆಲುವಿನ ಮುನ್ಸೂಚನೆ ನೀಡಿದೆ. ಕೆಲವೇ ಗಂಟೆಗಳಲ್ಲಿ ನಿಖರ ಫಲಿತಾಂಶ ಹೊರಬೀಳಲಿದೆ.
ಭಾನುವಾರ ನಡೆದ ನಾಲ್ಕು ರಾಜ್ಯಗಳ ಮತ ಎಣಿಕೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ (ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್‌ಗಢ) ಅಮೋಘ ಗೆಲುವು ಪಡೆದುಕೊಂಡಿದ್ದು, ಕಾಂಗ್ರೆಸ್ ಕೇವಲ ತೆಲಂಗಾಣದಲ್ಲಿ ಮಾತ್ರ ಗೆಲುವು ಕಂಡಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜಸ್ಥಾನ ಮತ್ತು ಚತ್ತೀಸ್‌ಗಢ ರಾಜ್ಯಗಳನ್ನು ಕಳೆದುಕೊಂಡಿದೆ.












Click it and Unblock the Notifications