ನಾಪತ್ತೆಯಾಗಿರುವ ಸಿಆರ್‌ಪಿಎಫ್ ಯೋಧ ನಕ್ಸಲರ ವಶದಲ್ಲಿ
ಬಿಜಾಪುರ, ಏಪ್ರಿಲ್ 6: ಛತ್ತೀಸಗಡದ ಬಿಜಾಪುರದಲ್ಲಿ ಶನಿವಾರ ಸಂಭವಿಸಿದ ದಾಳಿಯ ಸಂದರ್ಭದಿಂದ ಕಣ್ಮರೆಯಾಗಿರುವ ಸಿಆರ್‌ಪಿಎಫ್ ಯೋಧ, ಮಾವೊವಾದಿಗಳ ಒತ್ತೆಯಾಳಾಗಿದ್ದಾರೆ ಎಂಬುದು ಖಚಿತವಾಗಿದೆ.
ನಾಪತ್ತೆಯಾಗಿರುವ ಜಮ್ಮು ಮತ್ತು ಕಾಶ್ಮೀರದ ನಿವಾಸಿ ರಾಕೇಶ್ವರ್ ಸಿಂಗ್ ಮನ್ಹಾಸ್ ಜೀವಂತವಾಗಿದ್ದಾರೆ. ಆದರೆ ಮಾವೊವಾದಿಗಳ ವಶದಲ್ಲಿದ್ದಾರೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ. ಮನ್ಹಾಸ್ ಅವರು ಜೀವಂತವಾಗಿದ್ದು, ಅವರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಅವರನ್ನು ಮುಂದೆ ಬಿಡುಗಡೆ ಮಾಡಲಾಗುವುದು ಎಂದು ಮಾವೊವಾದಿಗಳ ನಾಯಕತ್ವ ಸಂದೇಶ ರವಾನಿಸಿದೆ.
'ಇದುವರೆಗೂ ಪತ್ತೆ ಮಾಡಲಾಗದ ಒಬ್ಬ ಸಿಬ್ಬಂದಿ ಮಾವೊವಾದಿಗಳ ವಶದಲ್ಲಿದ್ದಾರೆ. ಕೆಲ ಸಮಯದ ಹಿಂದೆ ನಮಗೆ ಸಂದೇಶ ಬಂದಿದ್ದು, ಅವರನ್ನು ಸುರಕ್ಷಿತವಾಗಿ ಇರಿಸುವ ಬಗ್ಗೆ ಭರವಸೆ ನೀಡಲಾಗಿದೆ. ಅವರು ಸುರಕ್ಷಿತವಾಗಿ ಬಿಡುಗಡೆಯಾಗುವ ಮತ್ತು ಮರಳಿ ಬರುವಂತೆ ಪಡೆಗಳು ನೋಡಿಕೊಳ್ಳಲಿವೆ' ಎಂದು ಮೂಲಗಳು ಹೇಳಿವೆ.

ಮಾವೊವಾದಿಗಳ ಜತೆ ಮಾತುಕತೆ ನಡೆಯುತ್ತಿದೆ. ಇದರ ಬಗ್ಗೆ ಹೆಚ್ಚಿನ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ. ಮನ್ಹಾಸ್ ಅವರ ಬಿಡುಗಡೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿವೆ.
ಕೋಬ್ರಾ ಕಮಾಂಡೋ ಮನ್ಹಾಸ್ ಬಿಡುಗಡೆಗಾಗಿ ಅವರ ಕುಟುಂಬ ಮಾವೊವಾದಿಗಳಿಗೆ ಹೃದಯಸ್ಪರ್ಶಿ ಮನವಿ ಮಾಡಿದೆ. 'ದಯವಿಟ್ಟು ನನ್ನ ಅಪ್ಪನನ್ನು ಬಿಟ್ಟುಬಿಡಿ' ಎಂದು ಮನ್ಹಾಸ್ ಅವರ ಐದು ವರ್ಷದ ಮಗಳು ಶ್ರಾಗ್ವಿ ಕಣ್ಣೀರಿಡುತ್ತಾ ನಕ್ಸಲರಿಗೆ ಮನವಿ ಮಾಡಿರುವುದು ಹೃದಯ ಕಲಕುವಂತಿದೆ.












Click it and Unblock the Notifications