ಅಬ್ಬಬ್ಬಾ ಲಾಟರಿ.. ಬರೋಬ್ಬರಿ 7.57 ಕೋಟಿ ರೂಪಾಯಿ ಬೆಲೆ ಬಾಳುವ ದುಬಾರಿ ಮನೆ ಗೆದ್ದ ಬಿಜೆಪಿ ಶಾಸಕ
ಮುಂಬೈ, ಆಗಸ್ಟ್ 16: ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು 7.57 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನು ಗೆದ್ದಿದ್ದಾರೆ. ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ 'ಮದಾ ಲಾಟರಿ 2023' ರ ಭಾಗವಾಗಿ ಅವರಿಗೆ ಈ ಭವ್ಯವಾದ ಮನೆ ಸಿಕ್ಕಿದೆ.
ದಕ್ಷಿಣ ಮುಂಬೈನಲ್ಲಿರುವ 7.57 ಕೋಟಿ ರೂಪಾಯಿಗಳ ದುಬಾರಿ ಅಪಾರ್ಟ್‌ಮೆಂಟ್ ಅನ್ನು ಬಿಜೆಪಿ ಶಾಸಕ ನಾರಾಯಣ್ ಕುಚೆ ತಮ್ಮದಾಗಿಸಿಕೊಂಡಿದ್ದಾರೆ. ಲಾಟರಿ ಪಟ್ಟಿಯನ್ನು ಆಗಸ್ಟ್ 14ರಂದು ಪ್ರಕಟಿಸಲಾಗಿದ್ದು, 4,082 ಮನೆಗಳು ಮಾರಾಟಕ್ಕಿದ್ದವು.

ನಾರಾಯಣ್ ಕುಚೆ ಅವರು ಮಹಾರಾಷ್ಟ್ರದ ಬದ್ನಾಪುರ ಕ್ಷೇತ್ರದ ಬಿಜೆಪಿ ಶಾಸಕ. ಕುಚೆ ಅಲ್ಲದೆ ಕೇಂದ್ರ ಸಚಿವ ಭಾಗವತ್ ಕರದ್ ಕೂಡ ನಿರ್ದಿಷ್ಟ ಮನೆ ಖರೀದಿಗೆ ಅರ್ಜಿ ಸಲ್ಲಿಸಿದ್ದರು.
2023 ರ ಮೇನಲ್ಲಿ ಮನೆಗಳನ್ನು ಬಿಕರಿಗೆ ಇಡಲಾಯಿತು. ಇದು ರೂ 24 ಲಕ್ಷದಿಂದ ರೂ 7.57 ಕೋಟಿ ರೂಪಾಯಿಗಳ ವ್ಯಾಪ್ತಿಯಲ್ಲಿ ಮನೆಗಳು ಲಭ್ಯವಿದ್ದವು. ಕುಚೆ ಗೆದ್ದಿರುವ ಅಪಾರ್ಟ್‌ಮೆಂಟ್ ದಕ್ಷಿಣ ಮುಂಬೈನ ತಾರ್ಡಿಯೊದಲ್ಲಿದೆ. ಇದು ಒಟ್ಟು 1,500 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಮನೆ ಇರುವ ಜಾಗವು ಶ್ರೀಮಂತರು ವಾಸಿಸುವ ಪ್ರದೇಶದಲ್ಲಿದೆ.

ಲಾಟರಿ ಮಾರಾಟದಲ್ಲಿ, ಸುಮಾರು ಶೇ 93ರಷ್ಟು ಮನೆಗಳು ಆರ್ಥಿಕವಾಗಿ ದುರ್ಬಲ ವಿಭಾಗ (ಇವಿಎಸ್) ಮತ್ತು ಕಡಿಮೆ ಆದಾಯದ ಗುಂಪು (ಎಲ್‌ಐಜಿ) ವರ್ಗಗಳಿಗೆ ಮೀಸಲಾಗಿದೆ. ಉಳಿದ ಶೇ 7ರಷ್ಟು ಮಧ್ಯಮ ಆದಾಯದ ಗುಂಪು (MIG) ಮತ್ತು ಅತಿ ಹೆಚ್ಚಿನ ಆದಾಯ ವರ್ಗಗಳಿಗಾಗಿ ಮನೆಗಳನ್ನು ನಿರ್ಮಿಸಲಾಗಿದೆ.
4,082 ಅಪಾರ್ಟ್‌ಮೆಂಟ್‌ಗಳಲ್ಲಿ, 2,700 ಕ್ಕಿಂತ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ. 1,000 ಕ್ಕಿಂತ ಹೆಚ್ಚು ಎಲ್‌ಐಜಿ ವರ್ಗಗಳಿಗೆ ಮೀಸಲಾಗಿದೆ. ಎಂಐಜಿಗಾಗಿ ಒಟ್ಟು 130 ಮತ್ತು ಎಚ್‌ಐಜಿಗಾಗಿ ಸುಮಾರು 120 ಮೀಸಲಿಡಲಾಗಿದೆ.

'ಈ ವರೆಗೆ ಎಲ್ಲಿಯೂ ಸ್ವಂತ ಮನೆ ಇಲ್ಲದ ಕಾರಣ ನಾನು ಮನೆಗಾಗಿ ಅರ್ಜಿ ಸಲ್ಲಿಸಿದ್ದೆ. ಆದ್ದರಿಂದ, ನಾನು ಮುಂಬೈನಲ್ಲಿ ಮದಾ ಲಾಟರಿ ಮೂಲಕ ಮನೆಯನ್ನು ಖರೀದಿಸಲು ನಿರ್ಧರಿಸಿದೆ. ನಾನು ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ. ಈ ಅಪಾರ್ಟ್‌ಮೆಂಟ್ ಖರೀದಿಸುತ್ತಿದ್ದೇನೆ' ಎಂದು ಕುಚೆ ಹೇಳಿದ್ದಾರೆ.
26 ವರ್ಷದ ರೋಹಿತ್ ಪಾಟೀಲ್, ಮದಾ ಲಾಟರಿ 2023 ರ ಕಿರಿಯ ವಿಜೇತರಲ್ಲಿ ಒಬ್ಬರು.

ಮದಾ ಲಾಟರಿಯಲ್ಲಿ ಮಾರಾಟವಾಗುವ ಒಟ್ಟು ಮನೆಗಳಲ್ಲಿ 2 ಪ್ರತಿಶತವನ್ನು ಸಂಸದರು ಮತ್ತು ಶಾಸಕರಿಗೆ ಮೀಸಲಿಡಲಾಗಿದೆ.












Click it and Unblock the Notifications